ADVERTISEMENT

ಕಂದಾಯ ಇಲಾಖೆಗೆ ಕೊನೆಗೂ ಶಾಶ್ವತ ಸೂರು

ಆಲೂರು ಮಿನಿ ವಿಧಾನಸೌಧದ ಮೊದಲ ಅಂತಸ್ತಿನಲ್ಲಿ ಕೊಠಡಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 8:07 IST
Last Updated 15 ಅಕ್ಟೋಬರ್ 2024, 8:07 IST
ಆಲೂರಿನ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಪೂಜೆ ನೆರವೇರಿಸಲಾಯಿತು.
ಆಲೂರಿನ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಪೂಜೆ ನೆರವೇರಿಸಲಾಯಿತು.    

ಆಲೂರು: ತಾಲ್ಲೂಕು ಕೇಂದ್ರದಲ್ಲಿ ಶಾಶ್ವತ ಕೊಠಡಿಗಳು ಇಲ್ಲದೇ ನಡೆಯುತ್ತಿದ್ದ ಕಂದಾಯ ಇಲಾಖೆಗೆ ಇದೀಗ ಕಾಯಂ ಸೂರು ದೊರೆತಂತಾಗಿದೆ. ಇಲ್ಲಿನ ಮಿನಿ ವಿಧಾನಸೌಧದ ಎರಡನೇ ಅಂತಸ್ತಿನಲ್ಲಿ ಇಲಾಖೆಗೆ ಕಾಯಂ ಕೊಠಡಿ ಒದಗಿಸಲಾಗಿದೆ.

ತಾಲ್ಲೂಕು ಕೇಂದ್ರದಲ್ಲಿ 2012ರಲ್ಲಿ ಮಿನಿ ವಿಧಾನಸೌಧ ನೆಲ ಅಂತಸ್ತಿನ ಕಟ್ಟಡ ನಿರ್ಮಾಣವಾಗಿದ್ದರೂ, ಕಂದಾಯ ಇಲಾಖೆಗೆ ಶಾಶ್ವತ ಕೊಠಡಿಗಳು ಇರಲಿಲ್ಲ. ಕೆಲ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದವು.

ಎರಡು ವರ್ಷಗಳ ಹಿಂದೆ ಎರಡು ಅಂತಸ್ತು ನಿರ್ಮಾಣ ಮಾಡಲಾಗಿದ್ದು, ಕಳೆದ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಿದ್ದರು. ಕಟ್ಟಡದ ನೀಲನಕ್ಷೆ ಪ್ರಕಾರ ನೆಲ ಅಂತಸ್ತು ಉಪ ನೋಂದಣಾಧಿಕಾರಿ ಕಚೇರಿಗೆ ಮೀಸಲಾಗಿತ್ತಾದರೂ, ಕಂದಾಯ ಇಲಾಖೆ ಕಚೇರಿ ನಡೆಸಲಾಗುತ್ತಿತ್ತು.

ADVERTISEMENT

ಎಂಟು ತಿಂಗಳ ನಂತರ ಮೊದಲ ಅಂತಸ್ತಿನಲ್ಲಿರುವ ಶಾಶ್ವತ ಕೊಠಡಿಗೆ ಶಾಸಕ ಸಿಮೆಂಟ್ ಮಂಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೀರಾ ಬೇಗಂ, ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ, ತಹಶೀಲ್ದಾರ್ ನಂದಕುಮಾರ್, ಗ್ರೇಡ್-2 ತಹಶೀಲ್ದಾರ್ ಪೂರ್ಣಿಮಾ ಮತ್ತು ಗಣ್ಯರ ಸಮ್ಮುಖದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಸೋಮವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

1886ರಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿ ಪಟ್ಟಣದಲ್ಲಿ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ನೂರು ವರ್ಷಗಳ ಕಾಲ ಈ ಕಟ್ಟಡ ಜನಸಾಮಾನ್ಯರಿಗೆ ಸೇವೆ ಒದಗಿಸುತ್ತಿತ್ತು.

ನಂತರದಲ್ಲಿ ಕಟ್ಟಡ ಇಕ್ಕಟ್ಟಾದ ಪರಿಣಾಮ ಹಳೆ ಕಟ್ಟಡವನ್ನು ನೆಲಸಮಗೊಳಿಸಿ, 2012ರಲ್ಲಿ ₹2.84 ಕೋಟಿ ವೆಚ್ಚದಲ್ಲಿ ನೂತನವಾಗಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಯಿತು. ಆದರೆ, ಕಂದಾಯ ಇಲಾಖೆಗೆ ಶಾಶ್ವತ ಕಟ್ಟಡ ಇರಲಿಲ್ಲ.

ಆಲೂರಿನಲ್ಲಿ ಇದ್ದ ಹಳೆಯ ತಾಲೂಕು ಕಚೇರಿ ಕಟ್ಟಡ.

ಲಿಫ್ಟ್‌ ಸೌಕರ್ಯ ಅಗತ್ಯ ಮೊದಲ ಅಂತಸ್ತಿನಲ್ಲಿ ಕಂದಾಯ ಇಲಾಖೆಗಳ ಕಚೇರಿಗಳು ಇರುವುದರಿಂದ ಜನಸಾಮಾನ್ಯರು ವೃದ್ಧರು ಮಹಿಳೆಯರು ಮೆಟ್ಟಿಲು ಹತ್ತಿ ಕಚೇರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಶಾಸಕರ ಸಮ್ಮುಖದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಲಿಫ್ಟ್ ಅಳವಡಿಕೆ ಕುರಿತು ಪ್ರಸ್ತಾಪ ಮಾಡಲಾಗಿತ್ತು. ಈವರೆಗೂ ಲಿಫ್ಟ್ ಅಳವಡಿಕೆ ಆಗದೇ ಇರುವುದರಿಂದ ತೊಂದರೆ ಆಗುತ್ತಿದ್ದು ಕೂಡಲೇ ಲಿಫ್ಟ್ ನಿರ್ಮಾಣ ಮಾಡಬೇಕು ಎಂಬುದು ಜನಸಾಮಾನ್ಯರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.