ADVERTISEMENT

‍‍‍ಪೆನ್‌ಡ್ರೈವ್‌ ಪ್ರಕರಣ: SITಯಿಂದ ನಿಷ್ಪಕ್ಷಪಾತ ತನಿಖೆ– ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 22 ಮೇ 2024, 14:02 IST
Last Updated 22 ಮೇ 2024, 14:02 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಹಾಸನ: ‘ವಿಡಿಯೊ ಮಾಡಿದವರು ಹಾಗೂ ಪೆನ್‌ಡ್ರೈವ್ ಹಂಚಿದವರು, ಇಬ್ಬರನ್ನೂ ಬಂಧಿಸಿ, ರಾಜ್ಯದ ಗೌರವ, ಮಾನ,‌ ಮರ್ಯಾದೆ ಕಾಪಾಡಬೇಕು’ ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಡೆದಿರುವ ಪೆನ್‌ಡ್ರೈವ್ ಪ್ರಕರಣ ಹೇಸಿಗೆಯ ವಿಚಾರ. ಇದು ರಾಜ್ಯಕ್ಕೆ, ನಮಗೆ ಘನತೆ ತಂದು ಕೊಡುವ ವಿಚಾರ ಅಲ್ಲ. ಇದನ್ನು ರಾಜಕೀಯವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಎಲ್ಲಿ ಮೂಲ ಇದೆ? ಯಾರು ಇದಕ್ಕೆ ಮೂಲವೋ ಅವರನ್ನು ಬಂಧಿಸಲಿ’ ಎಂದರು.

‘ಅನ್ಯಾಯವಾಗಿರುವ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕು. ಇದನ್ನು ರಾಜಕೀಯ ಡೊಂಬರಾಟ ಮಾಡಿಕೊಂಡು, ದಿನವೂ ಟಿವಿ ಮುಂದೆ ಬಂದು ಕಥೆ ಕಟ್ಟಿ ಹೇಳುವುದಲ್ಲ. ಎಷ್ಟು ದಿನಗಳ ಕಾಲ ಕಥೆ ಕಟ್ಟಲು ಆಗುತ್ತದೆ. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಆಗಬೇಕು’ ಎಂದರು.

ADVERTISEMENT

‘ಈ ಘಟನೆ ನಡದೇ ಇಲ್ಲ ಎಂದು ಹೇಳಿ ಬಿಡಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಇಂತಹ ಡೊಂಬರಾಟ ಆಡುವುದನ್ನು ನಿಲ್ಲಿಸಬೇಕು. ರಾಜಕೀಯ ಡೊಂಬರಾಟಕ್ಕಾಗಿ ಪೆನ್‌ಡ್ರೈವ್ ತರುತ್ತಿದ್ದಾರೆ. ಅವರಿಗೆ ಮುಖಕ್ಕೆ ಉಗಿದು ಮನೆಗೆ ಕಳುಹಿಸಬೇಕು’ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಿಮಗೆ ಮಾಡಲು ಕೆಲಸವಿಲ್ಲವಾ? ಮೊದಲು ಹೋಗಿ ಅಪರಾಧಿ ಹಿಡಿದುಕೊಂಡು ಬರಲಿ. ಎಲ್ಲೇ ಅಡಗಿದ್ದರೂ ಅಪರಾಧಿ ಕರೆ ತರಲು ಆಗಲ್ವಾ? ನಮ್ಮ ಸರ್ಕಾರಕ್ಕೆ ಅಪರಾಧಿ ಹಿಡಿದು ಕರೆತರಲು ಆಗಲ್ಲ. ಕೇಂದ್ರ ಸರ್ಕಾರ ಸಿಬಿಐ ತಂಡವನ್ನು ಹೊರ ದೇಶಕ್ಕೆ ಕಳುಹಿಸಿ ಕರೆ ತರಬೇಕು. ರಾಜ್ಯದ ಮುಖ್ಯಮಂತ್ರಿಯಿಂದ ಅದು ಸಾಧ್ಯವಿಲ್ಲ’ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಎಲ್.ಆರ್ ಶಿವರಾಮೇಗೌಡ ಆಡಿಯೋದಂತಹ ಕಥೆಗಳು ಸಾವಿರ ಇವೆ. ತನಿಖೆ ನಡೆಯಲಿ. ಆಮೇಲೆ ಎಲ್ಲವೂ ಗೊತ್ತಾಗುತ್ತದೆ.
ಕೆ.ಎಂ. ಶಿವಲಿಂಗೇಗೌಡ, ಶಾಸಕ

‘ಎಸ್‌ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಕ್ಕೆ ಮಾಧ್ಯಮದವರ ಮೇಲೆ ಸಿಟ್ಟಿಗೆದ್ದ ಶಿವಲಿಂಗೇಗೌಡ, ಎಸ್‌ಐಟಿಯವರು ದಿನವೂ ಏನು ಮಾಡಿದ್ದೀವಿ ಎಂದು ನಿಮ್ಮ ಮುಂದೆ ಬಿಚ್ಚಿ ವರದಿ ಓದಬೇಕಾ? ಕಾರ್ತಿಕ್‌ನನ್ನು ಎಸ್‌ಐಟಿ ಅವರು ಹಿಡಿದಿಲ್ಲ, ವಿಚಾರಣೆ ಮಾಡಿಲ್ಲ ಎಂದು ಹೇಗೆ ನೀವು ಹೇಳುತ್ತೀರಿ’ ಎಂದು ಪ್ರಶ್ನಿಸಿದರು.

‘ಪೆನ್‌ಡ್ರೈವ್ ಹಂಚಿದವರನ್ನು ಏಕೆ ಬಂಧನ ಮಾಡಿಲ್ಲ ಎಂದು ಎಸ್‌ಐಟಿ ಅವರನ್ನು ಕೇಳೋಣ, ಪೆನ್‌ಡ್ರೈವ್ ಆರೋಪಿಗಳನ್ನು ಬಂಧಿಸದಿದ್ದರೆ ಆಗ ಎಸ್‌ಐಟಿ ಪಕ್ಷಪಾತ ಮಾಡಿದ್ದಾರೆ. ಅವರು ಸರಿ ಇಲ್ಲ ಎಂದು ದೂಷಣೆ ಮಾಡೋಣ. ಇನ್ನೂ ನಾಲ್ಕು ದಿನ ಟೈಂ ಕೊಡಿ ನೋಡೋಣ. ಈಗ ಇದು ಕೋರ್ಟ್‌ನಲ್ಲಿ ಇದೆ. ಬಹಳ ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ, ಯಾವುದೇ ಅನುಮಾನ ಬೇಡ ನೊಂದವರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.