ಹಾಸನ: ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದಲ್ಲಿ ಡಿ.4ರಂದು ಕಾಡಾನೆಯೊಂದಿಗೆ ಅಂಬಾರಿ ಆನೆ ಅರ್ಜುನನ ಸೆಣಸಾಟದ ವಿಡಿಯೊ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಅರ್ಜುನ ಮೃತಪಟ್ಟು 57 ದಿನಗಳು ಕಳೆಯುತ್ತಿದ್ದು, ಇದೇ ವೇಳೆ ಇಟಿಎಫ್ (ಆನೆ ಕಾರ್ಯಪಡೆ) ಹೆಸರಿನಲ್ಲಿ ಎಡಿಟ್ ಮಾಡಿದ ಕಾಳಗದ ಕೊನೆಯ ಕ್ಷಣದ ವಿಡಿಯೊ ಹೊರಬಂದಿದೆ.
ಎದುರಿನಿಂದ ಬಂದ ಮದವೇರಿದ ಕಾಡಾನೆಯ ಜೊತೆಗೆ ಅರ್ಜುನ ಹೋರಾಡುತ್ತಿರುವುದು, ಕೋರೆಯಿಂದ ರಕ್ತ ಸುರಿಯುತ್ತಿದ್ದರೂ ಕಾದಾಟ ಮುಂದುವರಿಸಿದ್ದ ಅರ್ಜುನನ ಮೇಲೆ ಅಭಿಮನ್ಯು ಮಾವುತನ ಸಹಾಯಕ ಅನಿಲ್ ಹಾಗೂ ಮತ್ತೊಬ್ಬ ಕುಳಿತಿರುವುದು ವಿಡಿಯೊದಲ್ಲಿದೆ.
ಕಾಡಾನೆ ಏಕಾಏಕಿ ದಾಳಿ ಮಾಡಿದ್ದರಿಂದ ಉಳಿದ ಸಾಕಾನೆಗಳು ಹಿಂದೆ ಸರಿದಿದ್ದವು. ಆದರೆ, ಅರ್ಜುನ ಮಾತ್ರ ಏಕಾಂಗಿಯಾಗಿ ಕಾಡಾನೆಯ ಜೊತೆಗೆ ಕಾಳಗ ನಡೆಸಿತ್ತು. ಪ್ರಾಬಲ್ಯ ಹೆಚ್ಚಿದ್ದರಿಂದ ಅರ್ಜುನನ ಮೇಲೆ ದಾಳಿ ಮಾಡಿದ ಕಾಡಾನೆ, ಕೋರೆಯಿಂದ ತಿವಿದು ಅರ್ಜುನನ ಸಾವಿಗೆ ಕಾರಣವಾಗಿತ್ತು.
ಇಟಿಎಫ್ ಸಿಬ್ಬಂದಿಯೊಬ್ಬರು ಸೆರೆ ಹಿಡಿದಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಹಲವಾರು ಜನ ಹಂಚಿಕೊಂಡಿದ್ದಾರೆ.
‘ವಿಡಿಯೊ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಂತರವಷ್ಟೇ ಈ ಬಗ್ಗೆ ಖಚಿತವಾಗಿ ಹೇಳಬಹುದು’ ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.