ಶ್ರವಣಬೆಳಗೊಳ: 2300 ವರ್ಷಗಳ ಪ್ರಾಚೀನ ಇತಿಹಾಸವನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ಸಮೀಪದ ಹಾಲುಮತಸ್ಥ ಕುರುಬರು ವಾಸಿಸುವ ಕಬ್ಬಾಳು ಗ್ರಾಮ, ಹಲವು ದೇಗುಲಗಳಿಂದ ಖ್ಯಾತಿ ಪಡೆದಿದೆ.
ಗ್ರಾಮವು ಶ್ರವಣಬೆಳಗೊಳದಿಂದ 3 ಕಿ.ಮೀ. ದೂರದಲ್ಲಿದ್ದು, ಪಂಚಾಯಿತಿ ಸ್ಥಾನವನ್ನೂ ಹೊಂದಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳ ಪಟ್ಟಿರುವ ಬಸವೇಶ್ವರ ಇಲ್ಲಿಯ ಮೂಲ ದೇವರು. ಕೃಷಿಯೊಂದಿಗೆ ಹೈನುಗಾರಿಕೆ, ವ್ಯಾಪಾರ, ಕೈಗಾರಿಕೆ, ಉದ್ಯೋಗ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಮನ್ನಣೆ ಗಳಿಸಿದೆ.
‘ಹತ್ತಾರು ತಲೆಮಾರಿನಿಂದ ಗ್ರಾಮದಲ್ಲಿ ಜಾನುವಾರುಗಳು ಸತತವಾಗಿ ಬಲಿಯಾಗುತ್ತಿದ್ದು, ಆತಂಕ ಸೃಷ್ಟಿಯಾಗಿತ್ತು. ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಪ್ರತಿಷ್ಠಾಪಿಸಿ, ಶಾಂತಿಯ ಪೂಜೆ, ಪುನಸ್ಕಾರ ನಡೆಸಿದ್ದರಿಂದಾಗಿ ಮೂಕ ಪ್ರಾಣಿಗಳ ಸಾವು ನಿಂತಿತು’ ಎನ್ನುವುದು ಗ್ರಾಮದ ಜನರು ಹೇಳುವ ಮಾತು.
‘ಅದೇ ರೀತಿ ಗ್ರಾಮದಲ್ಲಿ ಜನರ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಇದರ ಪರಿಹಾರಕ್ಕಾಗಿ ಊರಿನ ಹಿರಿಯರು ಸೇರಿ ಮೈಸೂರು ಬಳಿ ಇರುವ ಕನ್ನಂಬಾಡಮ್ಮನ ಸನ್ನಿಧಿಯಲ್ಲಿ ಪೂಜೆ ಮಾಡಿಸಿ ಹೂ ಪ್ರಸಾದ ತಂದರು. ಆ ಹೂಪ್ರಸಾದದಲ್ಲಿ ದೇವಿಯ ತಾಳಿ ಸಿಕ್ಕಿದ್ದು, ಅದನ್ನು ಹಿಂತಿರುಗಿಸದೇ ದೇವಿಯನ್ನು ಪ್ರತಿಷ್ಠಾಪಿಸಿ, ಪೂಜೆಗಳನ್ನು ನಡೆಸಿದರು. ಅಂದಿನಿಂದ ಸಾವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಯಿತು’ ಎನ್ನುತ್ತಾರೆ ಗ್ರಾಮದ ಜನರು.
ಈ ದೇವಿಗೆ ಸುಂದರ ದೇವಾಲಯ ನಿರ್ಮಿಸಿ, ವಿಗ್ರಹ ಪ್ರತಿಷ್ಠಾಪಿಸಿ ಮೂಲ ಪ್ರಸಾದದಲ್ಲಿ ಬಂದ ತಾಳಿಯನ್ನು ಕೊರಳಿನಲ್ಲಿ ಈಗಲೂ ದೇವಿ ಧರಿಸಿದ್ದಾಳೆ.
‘ಈ ಗ್ರಾಮದಲ್ಲಿ ತೆರೆದ ಬಿಸಿಲು ಮಾರಮ್ಮ ದೇವಸ್ಥಾನವಿದ್ದು, ವರ್ಷದಲ್ಲಿ ಒಮ್ಮೆ ಮರಿಯನ್ನು ಬಲಿ ಕೊಟ್ಟು ನೈವೇದ್ಯ ಅರ್ಪಿಸಿ ಪೂಜಿಸುವ ವಾಡಿಕೆ ಇದೆ. ಈ ಮಾರಮ್ಮ, ಮಕ್ಕಳಿಗೆ ವಾಂತಿ, ಭೇದಿ, ಸಿಡುಬು, ಅಮ್ಮ, ಸೀತಾಳೆಯಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆ ಈ ಗ್ರಾಮದಲ್ಲಿ ಈಗಲೂ ಇದೆ’ ಎಂದು ಮಂಜಮ್ಮ ಹಾಗೂ ಸಾಕಮ್ಮ ಹೇಳುತ್ತಾರೆ.
ಇಲ್ಲಿ ಮಾರಿ ಜಾತ್ರೆಯನ್ನು ವಿಜೃಂಭಣೆ ಮಾಡುತ್ತಿದ್ದು, ದೇವಿಗೆ ಎಳನೀರು, ಮೊಸರನ್ನ, ಬೆಲ್ಲ ಸಕ್ಕರೆ, ತಂಪು ಮಾಡಿದಾಗ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಇನ್ನು ಈ ಗ್ರಾಮದಲ್ಲಿ ಬಾಣದ ದೇವರೆಂದು ಕರೆಯುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ಶನಿದೇವರ ದೇವಸ್ಥಾನಗಳಿದ್ದು, ಶಕ್ತಿ ದೇವತೆಯಾದ ಅಮ್ಮ ನಾಗಮ್ಮ ಮಂದಿರವು ಕಲ್ಲು ಮಂಟಪದಲ್ಲಿದೆ. ಶುಕ್ರವಾರ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿದ್ದು, ಪ್ರಸಾದ ಕೇಳುವ ಪದ್ಧತಿ ರೂಢಿಯಲ್ಲಿದೆ.
ಮೈಸೂರು ವಿವಿ ಪ್ರಕಟಿಸಿರುವ ಎಪಿಗ್ರಾಫಿಯಾ ಕರ್ನಾಟಕದಲ್ಲಿ ಕಬ್ಬಾಳು ಶಾಸನ ದಾಖಲಾಗಿದೆ. ಅವು ಈಗಲೂ ಹೊಲ ಗದ್ದೆಗಳಲ್ಲಿದ್ದು ಸಂರಕ್ಷಿಸಬೇಕಾಗಿದೆ.ಗಂಗಾಧರ್ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.