ADVERTISEMENT

ಶಾಸಕ ಪ್ರೀತಂರನ್ನು ತರಾಟೆಗೆ ತೆಗೆದುಕೊಂಡ ಜೆಡಿಎಸ್ ರಾಜ್ಯಾಧ್ಯಕ್ಷ

ಬಿಜೆಪಿ–ಜೆಡಿಎಸ್‌ ಹೊಂದಾಣಿಕೆ ರಾಜಕೀಯ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 9:18 IST
Last Updated 8 ಆಗಸ್ಟ್ 2021, 9:18 IST
ಎಚ್.ಕೆ.ಕುಮಾರಸ್ವಾಮಿ
ಎಚ್.ಕೆ.ಕುಮಾರಸ್ವಾಮಿ   

ಹಾಸನ: ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಹೊಂದಾಣಿಕೆ ರಾಜಕೀಯ ಮಾಡುತ್ತಿಲ್ಲ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ಸಿ.ಎಂ ಆದ ಕೂಡಲೇ ದೇವೇಗೌಡ ಭೇಟಿ ಮಾಡುವ ಅಗತ್ಯವೇನಿತ್ತು. ಹೊಂದಾಣಿಕೆ ರಾಜಕೀಯ ಮಾಡಿದರೆ ಸಹಿಸಲ್ಲ’ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ‍್ರತಿಕ್ರಿಯಿಸಿದ ಅವರು, 'ರಾಜ್ಯದ ಹಿತದೃಷ್ಟಿಯಿಂದ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ, ಸಲಹೆ ಪಡೆದಿದ್ದಾರೆ. ಹಿರಿಯರ ಸಲಹೆ ಪಡೆಯುವುದರಲ್ಲಿ ತಪ್ಪಿಲ್ಲ. ನರೇಂದ್ರ ಮೋದಿ ಮತ್ತು ದೇವೇಗೌಡರು ದೂರವಾಣಿ ಮೂಲಕ ಹಲವು ಅಭಿವೃದ್ಧಿ ವಿಷಯ ಕುರಿತು ಚರ್ಚೆ ನಡೆಸುತ್ತಾರೆ’ ಎಂದು ಹೇಳಿದರು.

'‌ಎಸ್‌.ಆರ್‌.ಬೊಮ್ಮಾಯಿ ಸರ್ಕಾರ ಬೀಳಿಸಿದ್ದು ದೇವೇಗೌಡರು ಎಂದು ಯಾವ ಪುಸ್ತಕ ಓದಿ ಪ್ರೀತಂ ತಿಳಿದುಕೊಂಡಿದ್ದಾರೆ. ಆಗ ಪ್ರೀತಂ 5–6 ವರ್ಷದ ಬಾಲಕ. ದೇವೇಗೌಡರು ಪ್ರಧಾನಿಯಾಗಿದ್ದಾಗಬೊಮ್ಮಾಯಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದರು. ಈ ರೀತಿ ಸಣ್ಣತನದ ಹೇಳಿಕೆ ನೀಡಬಾರದು. ಇದು ಪ್ರೀತಂಗೆ ರಾಜಕೀಯದ ಅನುಭವದ ಕೊರತೆ ತೋರಿಸುತ್ತದೆ' ಎಂದರು.

ADVERTISEMENT

ಬಸವರಾಜ ಬೊಮ್ಮಾಯಿ ಸರ್ಕಾರದ ಮಂತ್ರಿಮಂಡಲ ಅತ್ಯಂತ ಅಸಮತೋಲನದಿಂದ ಕೂಡಿದೆ. ಮೂವತ್ತು ಜನ ಮಂತ್ರಿ ಇದ್ದರೂ ಹದಿಮೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಆರೋಪ ಇದ್ದ ಮಹಿಳೆಗೆ ಮಂತ್ರಿ ಭಾಗ್ಯ ದೊರಕಿಸಿಕೊಟ್ಟಿದ್ದಾರೆ. ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ನೋವು ಇದೆ. ಕೊಡಗಿನ ಹಿರಿಯ ಶಾಸಕ ಬೋಪಯ್ಯ ಅವರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.