ಅರಕಲಗೂಡು: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು, ಕೃಷಿ ಚಟುವಟಿಕೆ ನಿಧಾನ ಗತಿಯಲ್ಲಿ ಗರಿಗೆದರುತ್ತಿದೆ.
ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕಿನ ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕಳೆದ ಬಾರಿ ತಂಬಾಕಿಗೆ ಉತ್ತಮ ಬೆಲೆ ದೊರೆತಿರುವುದರಿಂದ ಈ ಬಾರಿ ತಂಬಾಕು ಬೆಳೆ ಪ್ರದೇಶ ಹೆಚ್ಚಾಗುವ ಸಾಧ್ಯತೆ ಇದೆ.
‘ಇನ್ನೊಂದು ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಕೃಷಿಗೆ ಪೂರಕವಾದ ವಾತಾವರಣ ಇದ್ದರೂ, ರೈತರು ಆಲೂಗಡ್ಡೆ ಕೃಷಿಗೆ ಉತ್ಸಾಹ ತೋರುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ರೋಗದ ಹಾವಳಿಯಿಂದ ನಷ್ಟಕ್ಕೊಳಗಾಗಿರುವುದು ರೈತರಲ್ಲಿ ಆಲೂಗಡ್ಡೆ ಕೃಷಿ ಕುರಿತು ನಿರುತ್ಸಾಹಕ್ಕೆ ಕಾರಣವಾಗಿದೆ. ಈ ಬಾರಿ 600 ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ನಿರೀಕ್ಷೆ ಇದೆ’ ಎಂದು ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಡಿ. ರಾಜೇಶ್ ತಿಳಿಸಿದರು.
ಕಳೆದ ಬಾರಿ ಶುಂಠಿಗೆ ಉತ್ತಮ ಬೆಲೆ ದೊರೆತಿರುವ ಹಿನ್ನೆಲೆಯಲ್ಲಿ ಈ ಬಾರಿ 1,300 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿದ್ದು, ಸದ್ಯ ಬಿದ್ದಿರುವ ಮಳೆಯಿಂದ ನೀರಿನ ಕೊರತೆ ನೀಗಿದೆ. ಇದರಿಂದ ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಹೆಚ್ಚಿನ ರೈತರ ಕೈಹಿಡಿದಿರುವ ಮುಸುಕಿನ ಜೋಳ, ಈ ಬಾರಿಯೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಉಳಿದಂತೆ ಅಲಸಂದೆ, ಹೆಸರು ಮುಂತಾದ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧತೆ ನಡೆದಿದ್ದು, ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ.
‘ಆಲೂಗಡ್ಡೆ ಬೆಳೆಯುವ ರೈತರು, ಬಿತ್ತನೆ ಆಲೂಗಡ್ಡೆಯನ್ನು ಖರೀದಿ ಮಾಡಿ ತಂದ ನಂತರ ಕಡ್ಡಾಯವಾಗಿ ಒಂದು ವಾರ ಅಥವಾ ಅಧಿಕ ಸಮಯ ನೆರಳಿನಲ್ಲಿ ಒಣಗಿಸಬೇಕು. ಮೊಳಕೆ ಕಣ್ಣುಗಳು ಚೆನ್ನಾಗಿ ಬಂದ ನಂತರವಷ್ಟೇ ಆಲೂಗಡ್ಡೆ ಕೊಯ್ದು ಸೂಕ್ತ ಶಿಲೀಂಧ್ರ ನಾಶಕಗಳಿಂದ ಬೀಜೋಪಚಾರ ಮಾಡಬೇಕು. ನಂತರವಷ್ಟೇ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮಾರುಕಟ್ಟೆಯಿಂದ ತಂದ ಬಿತ್ತನೆ ಆಲೂಗಡ್ಡೆ ಬೀಜವನ್ನು ನೇರವಾಗಿ ಬಿತ್ತನೆ ಕಾರ್ಯಕ್ಕೆ ಬಳಕೆ ಮಾಡಬಾರದು’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಿ.ರಾಜೇಶ್ ತಿಳಿಸಿದ್ದಾರೆ.
ಹೆಚ್ಚಿನ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಮುಂಗಾರು ಆರಂಭವಾಗುವ ಮುನ್ನ ಕೆಲಕಾಲ ಮಳೆ ಬಿಡುವು ನೀಡಬೇಕಿದೆ.-ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ
ಅರಕಲಗೂಡು ತಾಲ್ಲೂಕಿನಲ್ಲಿ ಮೇ 21 ರವರೆಗೆ ವಾಡಿಕೆ ಮಳೆ 6.78 ಸೆಂ.ಮೀ. ಇದ್ದು ಈ ಬಾರಿ 18.96 ಸೆಂ.ಮೀ ಮಳೆ ಆಗಿದೆ. ಶೇ 180 ರಷ್ಟು ಹೆಚ್ಚಿನ ಮಳೆ ಬಿದ್ದಿದೆ.-ಕೆ.ಜಿ. ಕವಿತಾ, ಸಹಾಯಕ ಕೃಷಿ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.