ಹಳೇಬೀಡು: ಇಲ್ಲಿನ ಪ್ರವಾಸಿ ಗೈಡ್‌ಗಳಿಗೆ 5 ತಿಂಗಳಿನಿಂದ ಸರ್ಕಾರದ ಮಾಸಿಕ ಗೌರವ ಧನ ₹ 5ಸಾವಿರ ಬಾರದೇ ತೊಂದರೆ ಅನುಭವಿಸುವಂತಾಗಿದೆ. ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ಮುಂದಾಗಿರುವ ಸರ್ಕಾರ, ಪ್ರವಾಸಿ ಗೈಡ್‌ಗಳನ್ನು ಮರೆತಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಹವಾಮಾನದ ವೈಪರೀತ್ಯದಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಪ್ರವಾಸಿಗರನ್ನು ನಂಬಿರುವ ಗೈಡ್‌ಗಳತ್ತ ಮಾಹಿತಿ ಕೇಳಲು ಬರುವವರ ಸಂಖ್ಯೆ ಕಡಿಮೆಯಾಗಿದೆ. ಇತ್ತ ಪ್ರೋತ್ಸಾಹ ಧನ ಬಾರದೇ ಇರುವುದರಿಂದ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.
ಕೆಲವು ಮಂದಿ ಮಾತ್ರ ಗೈಡ್ ವೃತ್ತಿ ಜೊತೆ ಉಪ ಕಸುಬುಗಳನ್ನು ನಡೆಸುತ್ತಿದ್ದಾರೆ. ಸಾಕಷ್ಟು ಮಂದಿಗೆ ಗೈಡ್ ವೃತ್ತಿಯೇ ಜೀವನಾಧಾರವಾಗಿದೆ. ದೂರದಿಂದ ಬರುವ ಪ್ರವಾಸಿಗರಿಗೆ ಗೈಡ್‌ಗಳು ಇತಿಹಾಸ ಹಾಗೂ ಶಿಲ್ಪಕಲೆಯ ಮಾಹಿತಿ ಕೊಡುತ್ತಾರೆ. ಗೈಡ್‌ಗಳಿಂದ ಪ್ರವಾಸಿಗರಿಗೆ ಉಪಯುಕ್ತ ಮಾಹಿತಿ ದೊರಕುತ್ತದೆ. ಇಂತಹ ಗೈಡ್‌ಗಳಿಗೆ ಸರ್ಕಾರ ಗೌರವಧನ ಕೊಡುವುದನ್ನು ಮರೆತರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
‘ಹಳೇಬೀಡಿನಲ್ಲಿ 18 ಮಂದಿ, ಬೇಲೂರಿನಲ್ಲಿ 20 ಮಂದಿ ಗೈಡ್‌ಗಳಿದ್ದಾರೆ. ಬೇಲೂರು ತಾಲ್ಲೂಕಿನಲ್ಲಿ ಒಟ್ಟು 48 ಮಂದಿ ಗೈಡ್ ವೃತ್ತಿ ಅವಲಂಬಿಸಿದ್ದಾರೆ. ಮಾರ್ಚ್‌ನಿಂದ ಮೇ ವರೆಗೂ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ಬಿಸಿಲಿನ ತಾಪಕ್ಕೆ ಬೇಸಿಗೆ ರಜೆಯಲ್ಲಿ ಬಂದ ಪ್ರವಾಸಿಗರು ಗೈಡ್‌ಗಳಿಂದ ಮಾಹಿತಿ ಪಡೆಯುವ ಸ್ಥಿತಿಯಲ್ಲಿರಲಿಲ್ಲ. ಈ ವರ್ಷ ಪ್ರವಾಸಿಗರಿಂದ ದುಡಿಮೆ ಮಾಡಲು ಸಾಧ್ಯವಾಗಿಲ್ಲ’ ಎಂದು ಹಳೇಬೀಡಿನ ಗೈಡ್‌ಗಳು ಸಮಸ್ಯೆ ಬಿಚ್ಚಿಟ್ಟರು.
‘ಐತಿಹಾಸಿಕ ತಾಣಗಳತ್ತ ಇಂದಿನ ಪೀಳಿಗೆಯ ಆಸಕ್ತಿ ಕಡಿಮೆಯಾಗಿದೆ. ನಿಸರ್ಗ ತಾಣಗಳತ್ತ ಪ್ರವಾಸಿಗರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಒಂದು ವೇಳೆ ಇಂದಿನ ಪೀಳಿಗೆಯ ಪ್ರವಾಸಿಗರು ಹಳೇಬೀಡಿಗೆ ಬಂದರೂ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡುವುದರಲ್ಲಿ ನಿರತರಾಗುತ್ತಾರೆ. ರೀಲ್ಸ್, ಟಿಕ್ ಟಾಕ್‌ನಲ್ಲಿ ಮುಳುಗುವ ಪ್ರವಾಸಿಗರು ಗೈಡ್‌ಗಳಿಂದ ಮಾಹಿತಿ ಪಡೆಯುವ ತಾಳ್ಮೆ ಇರುವುದಿಲ್ಲ’ ಎಂದು ಗೈಡ್ ರಘು ತಿಳಿಸಿದರು.
2022 ಏಪ್ರಿಲ್‌ನಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಭೊಮ್ಮಾಯಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಗೈಡ್‌ಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡಿದ್ದರು. ಅಂದಿನಿಂದ ಪ್ರತಿ ತಿಂಗಳು ಪ್ರೋತ್ಸಾಹ ಧನ ಬರುತ್ತಿತ್ತು. 4 ತಿಂಗಳಿನಿಂದ ಪ್ರೋತ್ಸಾಹ ಧನ ನಿಂತಿದೆ. ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿರುವುದರಿಂದ ಪ್ರೋತ್ಸಾಹ ಧನದ ಅಗತ್ಯ ಹೆಚ್ಚಾಗಿದೆ ಎಂದು ಗೈಡ್‌ಗಳು ಮನವಿ ಮಾಡಿದ್ದಾರೆ.
ಇತಿಹಾಸದ ಜ್ಞಾನ ಪಡೆಯುವವರ ಸಂಖ್ಯೆ ವಿರಳವಾಗಿದೆ. ಗೌರವದ ವೃತ್ತಿಯಿಂದ ಹಿಂದೆ ಸರಿಯುವ ಮನಸ್ಸು ಇಲ್ಲ. ಸರ್ಕಾರ ಗೌರವ ಧನವನ್ನು ಪ್ರತಿ ತಿಂಗಳು ಕೊಟ್ಟರೆ ಅನುಕೂಲವಾಗುತ್ತದೆ.–ಕೃಷ್ಣೇಗೌಡ ಪ್ರವಾಸಿ ಮಾರ್ಗದರ್ಶಿ
ವರ್ಷದಿಂದ ಗೌರವ ಧನ ಬರುತ್ತಿದ್ದು ಗೈಡ್ ವೃತ್ತಿಯಿಂದ ನೆಮ್ಮದಿ ಕಂಡಿದ್ದೆವು. ನಾಲ್ಕು ತಿಂಗಳಿಂನಿಂದ ಗೌರವ ಧನ ನಿಂತಿರುವುದರಿಂದ ತೊಂದರೆ ಆಗುತ್ತಿದೆ. ಗೈಡ್‌ಗಳತ್ತ ಚಿತ್ತ ಹರಿಸಬೇಕು.– ರಘು ಪ್ರವಾಸಿ ಮಾರ್ಗದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.