ADVERTISEMENT

ನಿಯಮ ಉಲ್ಲಂಘಿಸುವವರ ಮೇಲೆ ಕ್ಯಾಮೆರಾ ಕಣ್ಣು: ದಂಡ ಪಾವತಿಗೆ ಹಾಸನ್ ವನ್ ತಂತ್ರಾಂಶ

ಸುಗಮ ಸಂಚಾರಕ್ಕಾಗಿ ಕ್ರಮ; ವಿದ್ಯಾರ್ಥಿಗಳಿಗೆ ಜಾಗೃತಿ

ಚಿದಂಬರಪ್ರಸಾದ್
Published 30 ಜುಲೈ 2024, 5:59 IST
Last Updated 30 ಜುಲೈ 2024, 5:59 IST
ಗುಂಡಿ ಬಿದ್ದ ರಸ್ತೆಯನ್ನು ನಗರಸಭೆ ಸಿಬ್ಬಂದಿಯಿಂದ ದುರಸ್ತಿ ಮಾಡಿಸಿದ ಪೊಲೀಸರು
ಗುಂಡಿ ಬಿದ್ದ ರಸ್ತೆಯನ್ನು ನಗರಸಭೆ ಸಿಬ್ಬಂದಿಯಿಂದ ದುರಸ್ತಿ ಮಾಡಿಸಿದ ಪೊಲೀಸರು   

ಹಾಸನ: ಜಿಲ್ಲಾ ಕೇಂದ್ರವಾಗಿರುವ ನಗರದಲ್ಲಿ ಸಂಚಾರ ಸಮಸ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ವಾಹನಗಳ ನಿಲುಗಡೆಯಿಂದ ಹಿಡಿದು, ವಾಹನ ಸಂಚಾರದವರೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಂಚಾರ ಸಮಸ್ಯೆ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಉದ್ದೇಶದಿಂದ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರನ್ನು ಗುರುತಿಸಿ, ಎಫ್.ಟಿ.ವಿ.ಆರ್.ನಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದು, ಚಾಲಕರು ಆನ್‌ಲೈನ್‌ ಮೂಲಕ ದಂಡ ಪಾವತಿ ಮಾಡಲು ಹಾಸನ್ ವನ್ ತಂತ್ರಾಂಶ ಅಳವಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ನೀಗಿಸಲು ಪೊಲೀಸರು ಮುಂದಾಗಿದ್ದಾರೆ. ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ADVERTISEMENT

ಸಂಚಾರ ಪೊಲೀಸ್ ಠಾಣೆಯಿಂದ ಹಾಸನ ನಗರದ ಪಾಯಣ್ಣ ಸರ್ಕಲ್ ಮತ್ತು ಸುಬೇದಾರ್ ಸರ್ಕಲ್‌ನಲ್ಲಿ ಸಂಚಾರ ಸಿಗ್ನಲ್‌ಗಳನ್ನು ದುರಸ್ತಿ ಮಾಡಿಸಲಾಗಿದೆ. ಈ ಮೂಲಕ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುವುದಕ್ಕೆ ತಡೆಯೊಡ್ಡಲಾಗಿದೆ.

ಪಾರ್ಕಿಂಗ್ ತಲೆನೋವು: ನಗರದಲ್ಲಿ ದೊಡ್ಡ ಕಟ್ಟಡಗಳು, ಆಸ್ಪತ್ರೆಗಳು ನಿರ್ಮಾಣವಾಗುತ್ತಿವೆ. ಆದರೆ, ವಾಹನಗಳ ನಿಲುಗಡೆಗೆ ಸೂಕ್ತ ಸೌಕರ್ಯ ಒದಗಿಸದೇ ಇರುವುದರಿಂದ ರಸ್ತೆಗಳಲ್ಲೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಸಂಪಿಗೆ ರಸ್ತೆಯಲ್ಲಂತೂ ವಾಹನಗಳೇ ರಸ್ತೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದು, ಏಕಮುಖ ಸಂಚಾರವಿದ್ದರೂ ಸುಗಮವಾಗಿ ವಾಹನ ಚಲಾಯಿಸುವುದು ದುಸ್ತರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಗರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಈ ನಿಟ್ಟಿನಲ್ಲಿಯೂ ಗಮನ ಹರಿಸಿರುವ ಪೊಲೀಸರು, ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಹಳೆಯ ಬಸ್ ನಿಲ್ದಾಣ ರಸ್ತೆ, ಶಂಕರ ಮಠ ರಸ್ತೆ, ಚರ್ಚ್ ರಸ್ತೆ, ಆರ್.ಸಿ. ರಸ್ತೆ ಹಾಗೂ ಬಿ.ಎಂ. ರಸ್ತೆಗಳ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ಎಸ್‌ಪಿ ಮೊಹಮ್ಮದ್ ಸುಜೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಕೆಲವು ರಸ್ತೆಗಳು ಗುಂಡಿ ಬಿದ್ದಿದ್ದು, ಅವುಗಳಿಗೆ ತಾತ್ಕಾಲಿಕ ದುರಸ್ತಿ ಮಾಡಿಸಲಾಗಿದೆ. ಹೆಚ್ಚು ಅಪಘಾತ ಆಗುವ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಿಗೆ ವೈಜ್ಞಾನಿಕ ರಸ್ತೆ ಉಬ್ಬು ಹಾಕಿಸಿದ್ದು, ಕೆಲವು ರಸ್ತೆ ಉಬ್ಬುಗಳಿಗೆ ವೈಟ್ ಟ್ಯಾಪಿಂಗ್ ಮಾಡಿಸಲಾಗಿದೆ’ ಎಂದರು.

ದಾಖಲಾತಿ ಪರಿಶೀಲನೆ: ‘ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಆಟೊಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರ ಪರ್ಮಿಟ್ ಇಲ್ಲದೇ ಸಂಚರಿಸುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಮಾಡುವ ಆಟೊಗಳ ದಾಖಲಾತಿ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

ಮಕ್ಕಳಲ್ಲಿ ಜಾಗೃತಿ

ನಗರದಲ್ಲಿ ಸಂಚಾರ ಸಮಸ್ಯೆ ನಿವಾರಣೆ ಹಾಗೂ ಸಂಚಾರ ನಿಯಮಗಳ ಪಾಲನೆಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡಿ ಸಂಚಾರ ನಿಯಮಾವಳಿಗಳ ಅರಿವು ಮೂಡಲಾಗುತ್ತಿದ್ದು ವಾಹನಗಳ ನಿಲುಗಡೆ ವಾಹನ ಚಲಾಯಿಸುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆ ನಿಯಮ ಪಾಲನೆಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ಹಾಸನದ ರಸ್ತೆಗಳಲ್ಲಿ ಉಬ್ಬು ಅಳವಡಿಸಿ ವೈಟ್‌ ಟ್ಯಾಪಿಂಗ್ ಮಾಡಲಾಗಿದೆ
ಹಾಸನದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಕಾರ್ಯಾರಂಭ ಮಾಡಿವೆ
ಫುಟ್‍ಪಾತ್‍ನಲ್ಲೇ ವಾಹನ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಆಗುತ್ತದೆ. ಅಂಗಡಿ ಮಾಲೀಕರಿಗೆ ನಗರಸಭೆ ನೋಟಿಸ್ ನೀಡಿ ವಾಹನಗಳ ತೆರವಿಗೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಮಟ್ಟದಲ್ಲೂ ಕ್ರಮ ಜರುಗಿಸಬೇಕು.
-ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.