ADVERTISEMENT

ಯಡಕುಮೇರಿ–ಕಡಗರವಳ್ಳಿ ಮಧ್ಯೆ ಭೂಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ರದ್ದು

ಯಡಕುಮೇರಿ–ಕಡಗರವಳ್ಳಿ ಮಧ್ಯೆ ಭೂಕುಸಿತ: ಭರದಿಂದ ಸಾಗಿದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:31 IST
Last Updated 28 ಜುಲೈ 2024, 13:31 IST
ಹಾಸನ ಜಿಲ್ಲೆಯ ಯಡಕುಮೇರಿ–ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯನ್ನು ರೈಲ್ವೆ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು
ಹಾಸನ ಜಿಲ್ಲೆಯ ಯಡಕುಮೇರಿ–ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯನ್ನು ರೈಲ್ವೆ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು   

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಡಕುಮೇರಿ– ಕಡಗರವಳ್ಳಿ ನಿಲ್ದಾಣಗಳ ನಡುವೆ ಭೂಕುಸಿತವಾದ ಸ್ಥಳದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ರೈಲು ಮಾರ್ಗದ ಕೆಳಭಾಗದ ಮಣ್ಣು ಸುಮಾರು 500 ಮೀಟರ್‌ ಆಳಕ್ಕೆ ಕುಸಿದಿದ್ದು, ಕಲ್ಲಿನ ಗೋಡೆ ನಿರ್ಮಿಸುವ ಕಾಮಗಾರಿಯನ್ನು ಮಾಡಲಾಗುತ್ತಿದೆ.

ಅರಣ್ಯದಲ್ಲಿ ಬರುವ ಈ ಪ್ರದೇಶದಲ್ಲಿ ಬೇರೆ ವಾಹನಗಳು ಬರಲು ಸಾಧ್ಯವಿಲ್ಲ. ಹಾಗಾಗಿ ಗೂಡ್ಸ್‌ ರೈಲಿನ ಮೂಲಕ ಕಲ್ಲುಗಳನ್ನು ತರಲಾಗಿದ್ದು, ಜೆಸಿಬಿ, ಹಿಟಾಚಿಯನ್ನು ಸ್ಥಳಕ್ಕೆ ತರಲಾಗಿದೆ. ಮಳೆಯ ನಡುವೆಯೂ ಕಾರ್ಮಿಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಕಾಮಗಾರಿ ನಿರ್ವಹಿಸುವುದು ಕ್ಲಿಷ್ಟಕರವಾಗಿದ್ದು, 5 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್‌ವಾಲ್ ಹಾಗೂ ಅಧಿಕಾರಿಗಳು ಕಾಮಗಾರಿ ವೀಕ್ಷಿಸಿದರು. ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ADVERTISEMENT

ರೈಲುಗಳ ಸಂಚಾರ ರದ್ದು: ಕೆಎಸ್‌ಆರ್‌ ಬೆಂಗಳೂರು–ಕಣ್ಣೂರು (ರೈ.ಸಂ.16511), ಕೆಎಸ್‌ಆರ್‌ ಬೆಂಗಳೂರು–ಕಾರವಾರ (ರೈ.ಸಂ. 16595), ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ (ರೈ.ಸಂ. 16585), ವಿಜಯಪುರ–ಮಂಗಳೂರು (ರೈ.ಸಂ. 07377) ರೈಲುಗಳ ಸಂಚಾರವನ್ನು ಜುಲೈ 29ರಿಂದ ಆ.3ರವರೆಗೆ ರದ್ದುಪಡಿಸಲಾಗಿದೆ.

ಕಣ್ಣೂರು–ಕೆಎಸ್‌ಆರ್‌ ಬೆಂಗಳೂರು (ರೈ.ಸಂ. 16512), ಕಾರವಾರ–ಕೆಎಸ್‌ಆರ್ ಬೆಂಗಳೂರು (ರೈ.ಸಂ.16596), ಮುರ್ಡೇಶ್ವರ– ಎಸ್‌ಎಂವಿಟಿ ಬೆಂಗಳೂರು (ರೈ.ಸಂ. 16586), ಮಂಗಳೂರು ಸೆಂಟ್ರಲ್‌–ವಿಜಯಪುರ (ರೈ.ಸಂ. 07378) ರೈಲುಗಳ ಸಂಚಾರ ಜುಲೈ 30ರಿಂದ ಆ.4ರವರೆಗೆ ರದ್ದಾಗಿದೆ.

ಯಶವಂತಪುರ–ಕಾರವಾರ (ರೈ.ಸಂ. 16515) ರೈಲು ಜುಲೈ 29, 31 ಹಾಗೂ ಆ.2ರಂದು, ಕಾರವಾರ–ಯಶವಂತಪುರ (ರೈ.ಸಂ. 16516) ರೈಲು ಸಂಚಾರವನ್ನು ಜುಲೈ 30, ಆ.1 ಮತ್ತು ಆ.3ರಂದು ರದ್ದುಪಡಿಸಲಾಗಿದೆ.

ಕಾಮಗಾರಿ ಸ್ಥಳಕ್ಕೆ ಕಲ್ಲು ಮಣ್ಣು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಗೂಡ್ಸ್ ರೈಲಿನ ಮೂಲಕ ತರಲಾಯಿತು

ಯಶವಂತಪುರ–ಮಂಗಳೂರು ಜಂಕ್ಷನ್‌ (ರೈ.ಸಂ. 16575) ಜುಲೈ 30 ಹಾಗೂ ಆ.1ರಂದು, ಮಂಗಳೂರು ಜಂಕ್ಷನ್‌–ಯಶವಂತಪುರ (ರೈ.ಸಂ. 16576) ಜುಲೈ 31 ಹಾಗೂ ಆ.2ರಂದು, ಯಶವಂತಪುರ–ಮಂಗಳೂರು ಜಂಕ್ಷನ್‌ (ರೈ.ಸಂ. 16539) ಆ.3ರಂದು ಹಾಗೂ ಮಂಗಳೂರು ಜಂಕ್ಷನ್‌–ಯಶವಂತಪುರ (ರೈ.ಸಂ. 16540) ರೈಲು ಸಂಚಾರವನ್ನು ಆ.4ರಂದು ರದ್ದುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.