ADVERTISEMENT

ಮಾರ್ಗ ಮಧ್ಯೆ ನಲುಗಿದ ಪ್ರಯಾಣಿಕರು

ಸಕಲೇಶಪುರ ನಿಲ್ದಾಣದಿಂದ ಬಸ್‌ನಲ್ಲಿ ತೆರಳಿದ ಜನರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 14:29 IST
Last Updated 10 ಆಗಸ್ಟ್ 2024, 14:29 IST
ಹಾಸನ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ನಿಲುಗಡೆ ಆಗಿದ್ದರಿಂದ ಅಪಾರ ಸಂಖ್ಯೆಯ ಪ್ರಯಾಣಿಕರು ನಿಲ್ದಾಣದಲ್ಲಿ ಓಡಾಡುವಂತಾಗಿತ್ತು.
ಹಾಸನ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ನಿಲುಗಡೆ ಆಗಿದ್ದರಿಂದ ಅಪಾರ ಸಂಖ್ಯೆಯ ಪ್ರಯಾಣಿಕರು ನಿಲ್ದಾಣದಲ್ಲಿ ಓಡಾಡುವಂತಾಗಿತ್ತು.   

ಸಕಲೇಶಪುರ: ಹಾಸನ–ಸಕಲೇಶಪುರ ನಡುವಿನ ರೈಲು ಮಾರ್ಗದಲ್ಲಿ ಶುಕ್ರವಾರ ತಡರಾತ್ರಿ ಗುಡ್ಡ ಕುಸಿದು ಬೆಂಗಳೂರು–ಮಂಗಳೂರು ನಡುವಿನ 6 ಪ್ರಯಾಣಿಕರ ರೈಲುಗಳು ಮಾರ್ಗ ಮಧ್ಯದಲ್ಲಿಯೇ ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಮಾರ್ಗದ ಮಧ್ಯದಲ್ಲಿಯೇ ಉಳಿಯಬೇಕಾಯಿತು.

ಸಕಲೇಶಪುರದ ಹೇಮಾವತಿ ಸೇತುವೆಯಿಂದ ಮುಂದೆ ನಾಗರ ಗ್ರಾಮದ ಕಿ.ಮೀ. 40/300–400ರಲ್ಲಿ ರಾತ್ರಿ 12.35ರ ಸುಮಾರಿಗೆ ಗುಡ್ಡ ಕುಸಿದು, ರೈಲ್ವೆ ಹಳಿಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಪ್ರಯಾಣಿಕರ ಮೂರು ರೈಲುಗಳು ಹಾಗೂ ಮಂಗಳೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಮೂರು ‍ಪ್ರಯಾಣಿಕರ ರೈಲುಗಳನ್ನು ಸಮೀಪದ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗಿತ್ತು.

ಕಣ್ಣೂರಿನಿಂದ ಸಕಲೇಶಪುರ ನಿಲ್ದಾಣಕ್ಕೆ ರಾತ್ರಿ 1.30ಕ್ಕೆ ಬಂದು ಬೆಂಗಳೂರಿಗೆ ಹೋಗಬೇಕಾಗಿದ್ದ ಪ್ರಯಾಣಿಕರ ರೈಲು, ಇಲ್ಲಿಯ ನಿಲ್ದಾಣಕ್ಕೆ ಬೆಳಿಗ್ಗೆ 7ಕ್ಕೆ ಬಂದಿದೆ. ಮಧ್ಯರಾತ್ರಿ 2.45ಕ್ಕೆ ಸಕಲೇಶಪುರಕ್ಕೆ ಬರಬೇಕಿದ್ದ ಕಾರವಾರ–ಬೆಂಗಳೂರು ರೈಲು ಬೆಳಿಗ್ಗೆ 11ಕ್ಕೆ ಬಂದಿದೆ. ಮುರ್ಡೇಶ್ವರ–ಮೈಸೂರು–ಬೆಂಗಳೂರು ರಾತ್ರಿ 11.30ಕ್ಕೆ ಬರಬೇಕಿತ್ತು. ಆದರೆ ಶನಿವಾರ ಮಧ್ಯಾಹ್ನ 1.15 ಕ್ಕೆ ಸಕಲೇಶಪುರ ನಿಲ್ದಾಣಕ್ಕೆ ಬಂದಿದೆ. ಈ ಮೂರು ಪ್ರಯಾಣಿಕರ ರೈಲುಗಳು ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದ ಘಾಟ್‌ನಲ್ಲಿಯೇ ನಿಲ್ಲಿಸಲಾಗಿತ್ತು. ಇದರಿಂದ ಪ್ರಯಾಣಿಕರು ಭಯಗೊಂಡಿದ್ದರು.

ADVERTISEMENT

ಬೆಂಗಳೂರಿನಿಂದ ಕಣ್ಣೂರಿಗೆ ಹೋಗುವ ರೈಲು ರಾತ್ರಿ 1.30ಕ್ಕೆ, ಬೆಂಗಳೂರು–ಮೈಸೂರು–ಮುರುಡೇಶ್ವರ ರೈಲು ರಾತ್ರಿ 2.50ಕ್ಕೆ ಹಾಗೂ ವಿಜಯಪುರ–ಮಂಗಳೂರು ಬೆಳಿಗ್ಗೆ 4ಕ್ಕೆ ಇಲ್ಲಿಯ ನಿಲ್ದಾಣಕ್ಕೆ ಬರಬೇಕಿತ್ತು. ಈ ಮೂರು ಪ್ರಯಾಣಿಕರ ರೈಲುಗಳನ್ನು ಹಾಸನ ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿತ್ತು. ಪ್ರಯಾಣಿಕರನ್ನು ಅಲ್ಲಿಂದಲೇ ಬಸ್‌ ಹಾಗೂ ಇನ್ನಿತರ ವಾಹನಗಳ ಮೂಲಕ ಕಳಿಸಲಾಗಿದೆ.

ಸಕಲೇಶಪುರ ರೈಲು ನಿಲ್ದಾಣದಿಂದ ಬಸ್‌ಗಳಲ್ಲಿ ತೆರಳಿದ ಪ್ರಯಾಣಿಕರು.
ಹಾಸನ ರೈಲು ನಿಲ್ದಾಣದ ಕಟ್ಟೆಗಳ ಮೇಲೆ ವಿಶ್ರಾಂತಿ ಪಡೆದ ಪ್ರಯಾಣಿಕರು.
ಸಕಲೇಶಪುರ ತಾಲ್ಲೂಕಿನ ಆಚಂಗಿ ಬಳಿ ಸಂಭವಿಸಿರುವ ಭೂಕುಸಿತದ ಸ್ಥಳದಲ್ಲಿ ಕಾರ್ಯಾಚರಣೆ ನಡೆದಿದೆ.

ತೆರವು ಕಾರ್ಯಾಚರಣೆ

ಹಳಿ ಮೇಲೆ ಗುಡ್ಡ ಕುಸಿದ ಸುದ್ದಿ ತಿಳಿಯುತ್ತಲೇ ರಾತ್ರಿ 1 ಗಂಟೆಯಿಂದಲೇ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮಣ್ಣು ತೆರವು ಮಾಡುತ್ತಿರುವಾಗಲೇ ಯಂತ್ರದ ಮೇಲೆ ಪುನಃ ಗುಡ್ಡ ಕುಸಿಯಿತು. ಗುಡ್ಡ ಹೆಚ್ಚು ಎತ್ತರ ಇಲ್ಲದೇ ಇದ್ದಿದ್ದರಿಂದ ಯಾವುದೇ ಅನಾಹುತ ಆಗಲಿಲ್ಲ. ಮಣ್ಣು ತೆರವು ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಅದಾದ ನಂತರ ಹಳಿ ಸರಿಪಡಿಸುವ ಕಾರ್ಯ ನಡೆಯಲಿದೆ. ಎಲ್ಲ ಕಾಮಗಾರಿ ಪೂರ್ಣಗೊಂಡ ನಂತರವೇ ರೈಲು ಸಂಚಾರ ಪ್ರಾರಂಭ ಮಾಡುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಮಧ್ಯಾಹ್ನದವರೆಗೆ ನಿಲ್ದಾಣವೇ ಆಸರೆ

ಹಾಸನ: ನಗರದ ರೈಲು ನಿಲ್ದಾಣಕ್ಕೆ ಬಂದಿದ್ದ ಎರಡು ರೈಲುಗಳ ಪ್ರಯಾಣಿಕರು ಮಧ್ಯಾಹ್ನದವರೆಗೆ ದಿಕ್ಕು ತೋಚದೇ ಕುಳಿತುಕೊಳ್ಳುವಂತಾಗಿತ್ತು. ಮೊದಲಿಗೆ ಸಣ್ಣ ಪ್ರಮಾಣದ ಭೂಕುಸಿತ ಆಗಿದ್ದರಿಂದ ಕೂಡಲೇ ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲು ಇಲಾಖೆ ಮುಂದಾಗಿತ್ತು. ಅಷ್ಟರಲ್ಲಿಯೇ ಮತ್ತೊಮ್ಮೆ ಭೂಕುಸಿತ ಸಂಭವಿಸಿ ಅಪಾರ ಪ್ರಮಾಣದ ಮಣ್ಣು ಹಾಗೂ ಬಂಡೆಗಲ್ಲುಗಳು ಹಳಿಗಳ ಮೇಲೆ ಬಿದ್ದಿದೆ.

ಹೀಗಾಗಿ ಮಧ್ಯಾಹ್ನ 12 ಗಂಟೆಯ ನಂತರವೇ ಎಲ್ಲ ರೈಲುಗಳ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಯಿತು. ಮಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರಲ್ಲಿ ಕೆಲವರು ಬಸ್‌ಗಳಲ್ಲಿ ಪ್ರಯಾಣಿಸಿದರೆ ಇನ್ನೂ ಕೆಲವು ಪ್ರಯಾಣಿಕರು ಟಿಕೆಟ್ ಹಣ ವಾಪಸ್ ಪಡೆದು ಖಾಸಗಿ ವಾಹನಗಳಲ್ಲಿ ತೆರಳಿದರು.

ಜಿಲ್ಲಾ ಕೇಂದ್ರವಾಗಿರುವ ಹಾಸನದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ ಮುಂದಿನ ಪ್ರಯಾಣದ ಬಗ್ಗೆ ಇಲಾಖೆಯಿಂದ ಸಮರ್ಪಕ ಮಾಹಿತಿ ಲಭಿಸದೇ ಇದ್ದುದರಿಂದ ಜನರು ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.