ಹಾಸನ: ಹೇಮಾವತಿ ನೀರು ಹರಿಸುವ ವಿಚಾರಕ್ಕೆ ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶ ಮುಂದುವರಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ನವಿಲೆ ಸುರಂಗ ಮಾರ್ಗ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ತುಮಕೂರಿಗೆ ನೀರು ಹರಿಸುವ ಕಾಲುವೆ ವೀಕ್ಷಿಸಿ ಮಾತನಾಡಿದ ಅವರು, ‘ತುಮಕೂರಲ್ಲಿ ದೇವೇಗೌಡರ ಸೋಲಿಗೆ ನಾನಾಗಲೀ, ಜನರಾಗಲೀ ಕಾರಣರಲ್ಲ. ಬದಲಾಗಿ ಗಂಗೆಶಾಪ’ ಎಂದು ಹೇಳಿದರು.
‘ಪ್ರಜಾಪ್ರಭುತ್ವದಲ್ಲಿ ದ್ವೇಷ ರಾಜಕಾರಣ ಮಾಡಿದ ಯಾರೂ ಉಳಿದಿಲ್ಲ. ಸಚಿವ ರೇವಣ್ಣ ನಮ್ಮ ಜನರಿಗೆ ತೊಂದರೆ ಕೊಡುವ ದುರಾಸೆ ಮನುಷ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಗತ್ತು ಹಾಳಾದರೂ ತಮ್ಮ ಕ್ಷೇತ್ರದ ಜನತೆ ಮಾತ್ರ ಚೆನ್ನಾಗಿದ್ದರೆ ಸಾಕು ಎನ್ನುವ ಬುದ್ಧಿ ರೇವಣ್ಣ ಅವರದ್ದು. ಇರುವ ನಾಲೆಯನ್ನು ಸರಿಯಾಗಿ ದುರಸ್ತಿ ಮಾಡದೆ, ಮತ್ತೆ ಲಿಂಕಿಂಗ್ ಕಾಲುವೆ ಮಾಡುವುದು ಅವೈಜ್ಞಾನಿಕ’ ಎಂದು ಕಿಡಿಕಾರಿದ ಬಸವರಾಜು, ‘ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಒಪ್ಪಂದದ ಪ್ರಕಾರ ತುಮಕೂರು ಜಿಲ್ಲೆಗೆ ಪ್ರತಿ ವರ್ಷ 24 ಟಿಎಂಸಿ ನೀರು ಹರಿಸಬೇಕು. ಆದರೆ, ಕಳೆದ ವರ್ಷ ನಮಗೆ ಸಿಕ್ಕಿರುವುದು ಕೇವಲ 6 ಟಿಎಂಸಿ ನೀರು. ಜೀವಮಾನದಲ್ಲಿ 14 ಟಿಎಂಸಿ ಮೇಲೆ ನೀರು ಬಿಟ್ಟಿಲ್ಲ. ಇದಕ್ಕೆಲ್ಲಾ ರೇವಣ್ಣ ಅಂಡ್ ಕಂಪನಿಯವರೇ ಕಾರಣ. ಎಲ್ಲೆಡೆ ಅವರದೇ ಯಜಮಾನಿಕೆಯಾಗಿದೆ. ಹಾಸನ ಜಿಲ್ಲೆಗೆ ಬೇಕಿರುವುದು 14 ಟಿಎಂಸಿ, ಆದರೆ 44 ಟಿಎಂಸಿ ಬಳಕೆ ಮಾಡುತ್ತಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.