ಹಳೇಬೀಡು: ದ್ವಾರಸಮುದ್ರ ಕೆರೆಗೆ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು ನಿರ್ಮಿಸುತ್ತಿರುವ ಸುರಂಗ ನಾಲೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಎಂಜನಿಯರ್‌ಗಳು ಸವಾಲುಗಳ ಮಧ್ಯೆ ಕೆಲಸ ಮಾಡುತ್ತಿದ್ದು, 2025ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಯೋಜನೆ ಪೂರ್ಣಗೊಳಿಸಲು ಸರ್ಕಾರ ನಿರ್ದಿಷ್ಟ ಸಮಯಕ್ಕೆ ಅನುದಾನ ಬಿಡುಗಡೆ ಮಾಡಿದರೆ ಹಳೇಬೀಡು ಭಾಗದ ರೈತರ ಕನಸು ಸಾಕಾರಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡು, ಗುರುತ್ವಾಕರ್ಷಣೆ ಶಕ್ತಿಯಿಂದ ಯಗಚಿ ನದಿ ನೀರು ಹೊಯ್ಸಳರ ಕಾಲದಂತೆ ಹಳೇಬೀಡಿಗೆ ಬಂದರೆ, ರೈತರ ಬದುಕು ಹಸನಾಗುತ್ತದೆ. ಪ್ರವಾಸಿ ತಾಣದ ಸೊಬಗು ಸಹ ಹೆಚ್ಚುತ್ತದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.
ಹೊಯ್ಸಳರ ಅರಸು ಮೂರನೇ ಬಲ್ಲಾಳನ ಕಾಲದಲ್ಲಿ ಜಿ.ಸೂರಾಪುರ ಹಾಗೂ ರಣಘಟ್ಟ ಬಳಿ ಹರಿಯುತ್ತಿದ್ದ ಯಗಚಿ ನದಿಯಿಂದ, ರಾಜಕಾಲುವೆ ನಿರ್ಮಿಸಿ ರಾಜಧಾನಿ ದ್ವಾರಸಮುದ್ರ (ಹಳೇಬೀಡು) ಮಾತ್ರವಲ್ಲದೆ, ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಕೈಗೊಂಡಿದ್ದರು ಎಂಬುದಕ್ಕೆ ಇಂದಿಗೂ ಕುರುಹುಗಳಿವೆ. ರಾಜಕಾಲುವೆ ಕೆಲವು ಕಡೆ ತೋಟ, ಗದ್ದೆಗಳಾಗಿ ಮಾರ್ಪಟ್ಟಿವೆ. ರಾಜಕಾಲುವೆ ಪುನಶ್ಚೇತನಗೊಂಡು, ನೀರು ಹರಿಯುವಂತಾಗಬೇಕು. ಪ್ರಾಚೀನ ಸಂಸ್ಕೃತಿ ಹಾಗೂ ಪರಂಪರೆ ಉಳಿಯಬೇಕು ಎಂಬುದು ರೈತರು ಮಾತ್ರವಲ್ಲದೇ, ಇತಿಹಾಸಕಾರರು ಹಾಗೂ ಸಂಶೋಧಕರ ಒತ್ತಾಯ.
ರೈತರ ಕನಸು ನನಸಾಗುವ ಕಾಲ ಈಗ ಕೂಡಿ ಬಂದಿದೆ. 900 ವರ್ಷಗಳ ಹಿಂದಿನ ಭೂ ಪ್ರದೇಶದ ಚಿತ್ರಣ ಈಗ ಬದಲಾಗಿದೆ. ಊರುಗಳು ದೊಡ್ಡದಾಗಿ ಬೆಳೆದು ನಿಂತಿವೆ. ಹಳೆಯ ನಾಲೆಯಲ್ಲಿ ಸರಾಗವಾಗಿ ನೀರು ಹರಿಸಲು ತಾಂತ್ರಿಕ ಸಮಸ್ಯೆ ಬಂದಿದ್ದರಿಂದ, 5.16 ಕಿ.ಮೀ. ಸುರಂಗ ನಾಲೆ ನಿರ್ಮಾಣ ಅನಿವಾರ್ಯವಾಯಿತು. ದೊಡ್ಡ ಬಜೆಟ್ ಆಗಿದ್ದರಿಂದ ಸರ್ಕಾರ ಅನುದಾನ ಕೊಡಲು ಹಿಂದೇಟು ಹಾಕಿತ್ತು.
ರೈತರ ಹೋರಾಟದ ಫಲವಾಗಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಟ್ಟರು. ನಂತರ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಹೆಚ್ಚುವರಿ ₹30ಕೋಟಿ ಬಿಡುಗಡೆ ಮಾಡಿದರು. ಕಳೆದ 4 ವರ್ಷದಿಂದ ಸುರಂಗ ಕಾಮಗಾರಿ ನಡೆಯುತ್ತಿದೆ.
ದ್ವಾರಸಮುದ್ರಕ್ಕೆ ನದಿಯ ಕೊರತೆ ನೀಗಿಸಲು ಹೊಯ್ಸಳರು ಯಗಚಿ ನದಿಯಿಂದ ನಾಲೆ ನಿರ್ಮಿಸಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ. ನಾಲೆ ಕಾಮಗಾರಿ ಪೂರ್ಣಗೊಂಡ ನಂತರ ವೈಭವ ಮರುಕಳಿಸಲಿದೆ.ಟಿ.ಬಿ.ಹಾಲಪ್ಪ ರೈತ ಸಂಘದ ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷ
ನಿರ್ಮಾಣ ಹಂತದ ಸುರಂಗ ಸೋರಿಕೆ ತಪ್ಪಿಸಲು ಕಾಂಕ್ರೀಟ್ ಲೈನಿಂಗ್‌ಗೆ ಹಣ ಮಂಜೂರು ಮಾಡಿಸಲು ಶೀಘ್ರವೇ ಶಾಸಕರು ಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ.
ನುರಿತ ತಂತ್ರಜ್ಞರು ಹಾಗೂ ಕಾರ್ಮಿಕರು ನಾಲೆ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಮಿಕರ ಸುರಕ್ಷತೆ ಜೊತೆಗೆ ಸುರಂಗ ನಾಲೆ ಶಾಶ್ವತವಾಗಿರುವಂತೆ ಕಾಮಗಾರಿ ನಿರ್ವಹಿಸಲಾಗುತ್ತಿದೆ.ನವೀನ್ ನೀರಾವರಿ ಇಲಾಖೆ ಎಂಜಿನಿಯರ್
ಯಗಚಿ ನದಿಗೆ ರಣಘಟ್ಟ ಬಳಿ ಹೊಯ್ಸಳರು ನಿರ್ಮಿಸಿದ್ದ ಒಡ್ಡು ಪ್ರವಾಹದಲ್ಲಿ ಹಾಳಾಗಿದ್ದರೂ ಅವಶೇಷಗಳು ಅಚ್ಚಳಿಯದೇ ಉಳಿದಿವೆ. ಆದರೆ ಯಾವ ರಾಜರು ಯಾವ ಸಮಯದಲ್ಲಿ ಒಡ್ಡು ನಿರ್ಮಿಸಿದರು ಎಂಬ ಮಾಹಿತಿ ಶಾಸನಗಳಲ್ಲಿ ಲಭ್ಯವಾಗಿಲ್ಲ. ಸಾಕಷ್ಟು ಮಂದಿ ಯಗಚಿ ನಾಲೆಯ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಪೈಕಿ ಕ್ಯಾಪ್ಟನ್ ಮೆಕ್ಯಾನ್ಸಿ ಪ್ರಮುಖರಾಗಿದ್ದಾರೆ. ಪುರಾತತ್ವ ಶಾಸ್ತ್ರಜ್ಞ ಪಿ.ಅರವಝಿ ಅವರು ಈಚೆಗೆ ಹೊಯ್ಸಳ ಸಾಮ್ರಾಜ್ಯದ ಕುರಿತು ಅಧ್ಯಯನ ನಡೆಸಿದ್ದಾರೆ. ನಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿಲಾ ಶಾಸನದ ಮಾಹಿತಿ ಲಭ್ಯವಾಗಿದ್ದು ಎಪಿಗ್ರಫಿ ಪುಸ್ತಕದಲ್ಲಿ ದಾಖಲಾಗಿದೆ. ಜಾತಿ ಪಂಥದ ಭೇದವಿಲ್ಲದೇ ಎಲ್ಲರೂ ನಾಲೆ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರಾಜರು ಹೇಳಿದ ಮಾತು ಶಾಸನದಲ್ಲಿ ಉಲ್ಲೇಖವಾಗಿದೆ. ಬೆಣ್ಣೆಗುಡ್ಡದ ಬಳಿ ಇದ್ದ ಶಿಲಾಶಾಸನ ಈಗ ಕಣ್ಮರೆಯಾಗಿದೆ ಎನ್ನುತ್ತಾರೆ
– ಪ್ರವಾಸಿ ಮಾರ್ಗದರ್ಶಿ ಪ್ರೇಮ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.