ಹಾಸನ: ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರನ್ನು ಹೆದರಿಸಿ, ಹಲ್ಲೆ ಮಾಡಿ ನಗ-ನಾಣ್ಯ ದೋಚಲು ಮತ್ತು ದನಕರು ಕಳ್ಳತನ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಇಬ್ಬರನ್ನು ಅರಸೀಕೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಜುಲೈ.21ರಂದು ಗ್ರಾಮಾಂತರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಅವರು, ಮೈಸೂರು ರಸ್ತೆಯ ನಾರಾಯಣ ಘಟ್ಟೆಹಳ್ಳಿ ಸಮೀಪ ಬೈಪಾಸ್ ರಸ್ತೆಯ ಕೆಳಸೇತುವೆ ಕೆಳಗೆ ವಾಹನ ತಪಾಸಣೆ ನಡೆಸುತ್ತಿದ್ದರು. ರಾತ್ರಿ 8.30ರ ಸಮಯದಲ್ಲಿ ಮೈಸೂರು ಕಡೆಯಿಂದ ಅರಸೀಕೆರೆ ಕಡೆಗೆ ವೇಗವಾಗಿ ಬಂದ ಕಾರು, ಅರಸೀಕೆರೆ ಕಡೆಗೆ ಬರದೇ ಬೈಪಾಸ್ ರಸ್ತೆಯತ್ತ ವೇಗವಾಗಿ ಹೋಗಿದೆ.
ಅನುಮಾನ ಬಂದ ಕೂಡಲೇ ಕಾರ್ಯಪ್ರವೃತ್ತರಾಗಿ ಚಂದ್ರಶೇಖರ್, ಸಿಬ್ಬಂದಿಯೊಂದಿಗೆ ಆ ಕಾರನ್ನು ಹಿಂಬಾಲಿಸಿದ್ದಾರೆ. ವಿಷ್ಣುಪುರ ಗ್ರಾಮದ ಹತ್ತಿರ ಕಾರನ್ನು ಅಡ್ಡಗಟ್ಟಿದ್ದು, ಕಾರಿನಿಂದ ಇಳಿದು ಓಡಲು ಯತ್ನಿಸಿದ ಮೂಡಿಗೆರೆ ಗ್ರಾಮದ ಫಾರೂಕ್ ಅಲಿಯಾಸ್ ಮಹಮ್ಮದ್ ಫಾರೂಕ್, ಮಹಮ್ಮದ್ ಅಲಿಯಾಸ್ ಮನ್ಸೂರ್ ಜಾವೀದ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇವರೊಂದಿಗಿದ್ದ ಚನ್ನರಾಯಪಟ್ಟಣದ ಹಸೇನ್ ಅಲಿಯಾಸ್ ಮೋಟು, ರಿಯಾಜ್, ಮುನೀರ್ ಎಂಬುವವರು ಪರಾರಿಯಾಗಿದ್ದಾರೆ.
ಕಾರಿನ ಡಿಕ್ಕಿಯಲ್ಲಿದ್ದ ಕಬ್ಬಿಣದ ರಾಡು, ಮಚ್ಚು, ಕಾರದ ಪುಡಿ, ಡ್ರ್ಯಾಗರ್ ಚಾಕು ವಶಪಡಿಸಿಕೊಳ್ಳಲಾಗಿದೆ. ಇವರು ದನಕರುಗಳನ್ನು ಕಳವು ಮಾಡುತ್ತಿದ್ದು, ಆ ಸಂದರ್ಭದಲ್ಲಿ ಯಾರಾದರೂ ತಡೆಯಲು ಬಂದರೆ ಮಾರಕಾಸ್ತ್ರಗಳಿಂದ ಹೆದರಿಸಿ ಹಲ್ಲೆ ಮಾಡಲು, ಜೊತೆಗೆ ರಾತ್ರಿಯ ವೇಳೆ ಒಬ್ಬಂಟಿಗರ ಮೇಲೆ ದಾಳಿ ಮಾಡಿ, ಹಣ, ವಡವೆ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲು ಬಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.