ಹಾಸನ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸುವ ಮುಂಗಡ ಪತ್ರ ಕುರಿತಂತೆ ಜಿಲ್ಲೆಯ ಜನರಲ್ಲಿ ನಿರೀಕ್ಷೆಗಳೂ ಹೆಚ್ಚಾಗಿವೆ.
ಕೋವಿಡ್‌ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ವರ್ಷ ಯಾವ ಕ್ಷೇತ್ರಕ್ಕೆಉತ್ತೇಜನ ಸಿಗಲಿದೆ ಎಂಬುದು ಕುತೂಹಲ ಮೂಡಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೈಗಾರಿಕಾಭಿವೃದ್ಧಿ ಕೇಂದ್ರ ವಿಸ್ತರಣೆ,ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, ಆನೆ ಕಾರಿಡಾರ್,ಹಾಸನ–ಬೇಲೂರು–ಚಿಕ್ಕಮಗಳೂರು ರೈಲ್ವೆ ಮಾರ್ಗ, ಐಐಟಿ ಸ್ಥಾಪನೆಗೆ ಈ ಬಾರಿಯಾದರೂ ಬಜೆಟ್‌ನಲ್ಲಿಆದ್ಯತೆ ಸಿಗಲಿದೆ ಎಂಬ ನಿರೀಕ್ಷೆ ಇದೆ.
ಮೂರು ದಶಕಗಳ ಹಿಂದೆ ನಿರ್ಮಾಣ ವಾದ ಹಾಸನ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿಹೊಸ ಕೈಗಾರಿಕೆಗಳಿಗೆ ನಿವೇಶನ ಇಲ್ಲದಂತಾಗಿದೆ. ಹಾಗಾಗಿ ಕೈಗಾರಿಕಾಭಿವೃದ್ಧಿ ಕೇಂದ್ರವಿಸ್ತರಣೆ ಅಥವಾ ಹೊಸ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಒತ್ತಾಯವಿದೆ.
ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರು ತತ್ತರಿಸಿದ್ದಾರೆ. ಜೊತೆಗೆ ಹಲವುಸಮಸ್ಯೆಗಳನ್ನು ಕಾಫಿ ಉದ್ಯಮ ಎದುರಿಸುತ್ತಿದೆ. ಕಾಫಿಗೆ ಬೆಂಬಲ ಬೆಲೆ ಇಲ್ಲದೆಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಜೊತೆಗೆ ಮಲೆನಾಡಿನ ಪ್ರಮುಖ ಬೆಳೆಯಾದಮೆಣಸು, ಏಲಕ್ಕಿಗೂ ಉತ್ತೇಜನ ನೀಡಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.
ಮಲೆನಾಡು ಭಾಗದಲ್ಲಿ ಮಾನವ– ಕಾಡಾನೆ ಸಂಘರ್ಷ ತಪ್ಪಿಸಲು ಆನೆ ಕಾರಿಡಾರ್ಸ್ಥಾಪಿಸಲು ಅನುದಾನವನ್ನು ಎದುರು ನೋಡುತ್ತಿದ್ದಾರೆ. ಕಾಡಾನೆ ಹಾವಳಿಯಿಂದ ಅಪಾರಪ್ರಮಾಣದ ಬೆಳೆ ನಾಶದ ಜತೆ ಹಲವರು ಜೀವ ಕಳೆದು ಕೊಂಡಿದ್ದಾರೆ. ಹೆಚ್ಚಿನ ಪ್ರದೇಶದಲ್ಲಿ ರೈಲು ಕಂಬಿ ಅಳವಡಿಕೆಗೆ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂಬುದು ಮಲೆನಾಡಿಗರ ಬೇಡಿಕೆಯಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಮಾವತಿ ಜಲಾಶಯ ಮುಂಭಾಗ ಕೆಆರ್‌ಎಸ್‌ಮಾದರಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಒತ್ತು ನೀಡಬೇಕು. ಐತಿಹಾಸಿಕ ಶೆಟ್ಟಿಹಳ್ಳಿಯಲ್ಲಿರುವ ರೋಸರಿ ಚರ್ಚ್ ಮರುನಿರ್ಮಾಣ ಮಾಡಬೇಕು. ಅಲ್ಲದೇ ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಮತ್ತಷ್ಟು ಅನುದಾನ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕಿದೆ.
ಹಾಸನ–ಬೇಲೂರು–ಚಿಕ್ಕಮಗಳೂರು ರೈಲು ಮಾರ್ಗ ಸಂಬಂಧಿಸಿದಂತೆ ಹೆಚ್ಚಿನಪ್ರಮಾಣದ ಅನುದಾನ ಅಗತ್ಯವಿದೆ. ಬೇಲೂರು–ಹಾಸನ ನಡುವೆ ಭೂ ಸ್ವಾಧೀನಪ್ರಕ್ರಿಯೆ ಪೂರ್ಣಗೊಂಡಿದೆ. ಜತೆಗೆ ಹಾಸನ ಮಾರ್ಗವಾಗಿ ಬೆಂಗಳೂರು– ಮಂಗಳೂರು,ಹಾಸನ– ಮೈಸೂರು ಮಾರ್ಗದಲ್ಲಿ ಇನ್ನಷ್ಟು ರೈಲು ಓಡಿಸಬೇಕೆಂಬ ಬೇಡಿಕೆ ಇದೆ.
ಹಾಸನದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗೆ ಸಂಬಂಧಿಸಿದಂತೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ನಗರದ ಹೊರ ವಲಯ ಕೈಗಾರಿಕಾಭಿವೃದ್ಧಿ ಕೇಂದ್ರಕ್ಕೆ ಹೊಂದಿಕೊಂಡಂತೆ ಐಐಟಿ ಸ್ಥಾಪನೆಗೆ ಬೊಮ್ಮನಾಯಕನಹಳ್ಳಿ, ಕಾಚನಾಯಕನಳ್ಳಿ, ಆಡುವಳ್ಳಿ, ಗವೇನಹಳ್ಳಿ, ಬುಸ್ತೇನಹಳ್ಳಿ, ದೊಡ್ಡ ಹೊನ್ನೇನಹಳ್ಳಿ, ಕಸ್ತೂರಳ್ಳಿ ಹಾಗೂ ಚಿಕ್ಕಬಸೇನಳ್ಳಿ ಗ್ರಾಮದ ಸರ್ವೆ ನಂಬರ್‌ಗಳ ಸುಮಾರು 1,057 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಭೂ–ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ತಮ್ಮ ಕನಸಿನ ಯೋಜನೆ ಸಾಕಾರಾಕ್ಕಾಗಿ ಡಿಸೆಂಬರ್‌ನಲ್ಲಿ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿಸ್ತೃತವಾಗಿ ಚರ್ಚಿಸಿದ್ದರು. ಮೋದಿ ಭರವಸೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಐಐಟಿ ಮಂಜೂರಾಗಬಹುದು ಎಂಬ ಆಶಾಭಾವ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.