ADVERTISEMENT

ಹಣ ಮಾಡಲು ಹಾಸನಾಂಬ ಜಾತ್ರೆ ಬಳಕೆ: ಸಿಪಿಎಂ ಕಾರ್ಯದರ್ಶಿ ಧರ್ಮೇಶ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 14:25 IST
Last Updated 3 ನವೆಂಬರ್ 2024, 14:25 IST
ಹಾಸನದಲ್ಲಿ ನಡೆದ ಸಿಪಿಎಂ ಜಿಲ್ಲಾ ಸಮಿತಿಯ 5 ನೇ ಸಮ್ಮೇಳನದಲ್ಲಿ ಧರ್ಮೇಶ್ ಮಾತನಾಡಿದರು.
ಹಾಸನದಲ್ಲಿ ನಡೆದ ಸಿಪಿಎಂ ಜಿಲ್ಲಾ ಸಮಿತಿಯ 5 ನೇ ಸಮ್ಮೇಳನದಲ್ಲಿ ಧರ್ಮೇಶ್ ಮಾತನಾಡಿದರು.   

ಹಾಸನ: ಜಿಲ್ಲೆಯಲ್ಲಿ ಹಾಸನಾಂಬ ಜಾತ್ರೆ ನಡೆಯುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ ಉತ್ಸವವನ್ನು ಜಿಲ್ಲಾಡಳಿತ ಪ್ರಚಾರ ಮಾಡಿ, ಹಣ ಮಾಡಲು ಬಳಸಿಕೊಳ್ಳುತ್ತಿದೆ. ರಾಜ್ಯದಾದ್ಯಂತ ಸುಳ್ಳು ಪ್ರಚಾರ ಮಾಡಿ, ಜನರನ್ನು ಕರೆತಂದು ಟಿಕೆಟ್ ರೂಪದಲ್ಲಿ ಹಣ ಮಾಡುವ ಉದ್ದೇಶವೇ ಹೊರೆತು ಬೇರೇನು ಇಲ್ಲ ಎಂದು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ದೂರಿದರು.

ನಗರದಲ್ಲಿ ನಡೆದ ಸಿಪಿಎಂ ಹಾಸನ ಸ್ಥಳೀಯ ಸಮಿತಿಯ 5 ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬರುವ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಯಾವ ಗಮನವನ್ನೂ ನೀಡುತ್ತಿಲ್ಲ. ಬದಲಿಗೆ ಹಣವುಳ್ಳವರಿಗೆ ಸುಲಭ ದರ್ಶನ ಮತ್ತು ಇಲ್ಲದವರಿಗೆ ದಿನಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದರು.

ADVERTISEMENT

ದೇಶದಲ್ಲಿ 75 ವರ್ಷಗಳಿಂದ ಪ್ರಜಾಪ್ರಭುತ್ವ ಸೋಲುತ್ತಲೆ ಬಂದಿದೆ. ದಿನೇ ದಿನೇ ಧರ್ಮದ ಹೆಸರಲ್ಲಿ ವ್ಯಾಪಾರ ಹೆಚ್ಚಾಗುತ್ತಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆ ಜನರಲ್ಲಿ ಹೆಚ್ಚಾಗುತ್ತಿರುವುದು ಆತಂಕದ ಬೆಳವಣಿಗೆ. ಜನರಲ್ಲಿ ಜಾತೀಯತೆ, ಮತೀಯವಾದ ತಾಂಡವವಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಪ್ರತಿದಿನ ಸೋಲುತ್ತಲೇ ಇದೆ ಎಂದರು.

ಕೋಮುವಾದಿ ಶಕ್ತಿಗಳು ಜನರನ್ನು ವಿಭಜಿಸುವ ಕೆಲಸದಲ್ಲಿ ತೊಡಗಿದ್ದು, ಇದು ದೇಶದ ಸಂವಿಧಾನ ಆಶಯಗಳಿಗೆ ವಿರುದ್ದವಾಗಿದೆ. ಶ್ರಮಜೀವಿಗಳ ಬದುಕಿನ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತಿವೆ. ಇದರಿಂದ ದೇಶದ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ನಾವು ವರ್ಷದಿಂದ ವರ್ಷಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದೇವೆ ಎಂದರು.

ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೇರಿಸುವ ಸಚಿವ ಸಂಪುಟದ ತೀರ್ಮಾನವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆಯಾದರೂ, ಜನರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಾವ ಗಮನವನ್ನೂ ನೀಡಿಲ್ಲ. ಹಾಸನ ನಗರವನ್ನು ಯೋಜನಾಬದ್ದವಾಗಿ ಅಭಿವೃದ್ಧಿ ಪಡಿಸುವಲ್ಲಿ ಇದುವರೆಗೂ ಅಧಿಕಾರ ನಡೆಸಿದವರು ಸಂಪೂರ್ಣ ವಿಫಲರಾಗಿದ್ದಾರೆ. ಇದರ ಪ್ರತಿಫಲವನ್ನು ಸಾಮಾನ್ಯ ಜನರು ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಆರ್.ನವೀನ್ ಕುಮಾರ್, ಗೋಪಾಲಕೃಷ್ಣ, ರಮೇಶ್ ಇದ್ದರು. ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ.ಪೃಥ್ವಿ ನಿರೂಪಿಸಿದರು. ಲಿಂಗರಾಜು ಸ್ವಾಗತಿಸಿದರು. ಅರವಿಂದ ವಂದಿಸಿದರು.

ಆರಂಭದಲ್ಲಿ ಪಕ್ಷದ ಹಿರಿಯ ಸದಸ್ಯರಾದ ಪ್ರಕಾಶ್, ಪಕ್ಷದ ಬಾವುಟವನ್ನು ಆರೋಹಣ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.