ಆಲೂರು: ಮರಸು ಹೊಸಳ್ಳಿ ಗ್ರಾಮದಲ್ಲಿರುವ ವಿಜಯದುರ್ಗ ಕ್ಷೇತ್ರದ ಉಡಸಲಮ್ಮ, ಮತ್ಸಲಮ್ಮ ದೇಗುಲದಲ್ಲಿ ವಿಜಯದಶಮಿ ಅಂಗವಾಗಿ ಚಂಡಿಕಾ ಹೋಮ ನೆರವೇರಿತು.
ಇತಿಹಾಸ ಹೇಳುವಂತೆ ಶ್ರೀ ವಿಜಯದುರ್ಗ ಕ್ಷೇತ್ರದಲ್ಲಿ ನೆಲೆಸಿರುವ ಚಾಮುಂಡೇಶ್ವರಿ (ಉಡಸಲಮ್ಮ) ಲಕ್ಷ್ಮೀ (ಮತ್ಸಲಮ್ಮ) ಭಕ್ತರ ಇಷ್ಟಾರ್ಥ ಈಡೇರಿಸುವರು. ಕ್ಷೇತ್ರದಲ್ಲಿ ಇರುವ ಐಶ್ವರ್ಯ ಗಣಪತಿಯು ಬಲಗೈಯಲ್ಲಿ ಶಿವಲಿಂಗವನ್ನ ಹಿಡಿದಿರುವುದು ವಿಶೇಷವಾಗಿದೆ.
ಶ್ರೀ ಕ್ಷೇತ್ರದಲ್ಲಿ ಲಕ್ಷ್ಮಿ ಸ್ಥಂಭ ಹಾಗೂ ವಿಜಯ ಸ್ಥಂಭ ಇವೆ. ಭಕ್ತರು ಹಣಕಾಸಿನ ಸಮಸ್ಯೆಗಳಿಗೆ ಕೋರಿಕೆಯ ಚೀಟಿಯನ್ನು ಬರೆದು ಲಕ್ಷ್ಮಿ ಸ್ಥಂಭಕ್ಕೆ ಕಟ್ಟಿದರೆ ಭೂಮಿ ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಎಂಬ ನಂಬಿಕೆ ಇಲ್ಲಿದೆ. ಇಲ್ಲಿನ ಪುರಾತನ ಇಷ್ಟಸಿದ್ಧಿ ವೃಕ್ಷವು ಆಂಜನೇಯನ ಶಕ್ತಿ ಹೊಂದಿ ವಿದ್ಯೆ, ಉದ್ಯೋಗ, ಮದುವೆ, ಸಂತಾನ, ಆರೋಗ್ಯ, ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು. ಪ್ರತಿ ತಿಂಗಳು ಹೋಮ ಮತ್ತು ಪೂಜೆಗಳನ್ನು ನಡೆಸಲಾಗುತ್ತದೆ.
ಪ್ರತಿ ಅಮಾವಾಸ್ಯೆಯಂದು ವೀರಭದ್ರ ಭೈರವ ಕ್ಷೇತ್ರಪಾಲರಿಗೆ ತೈಲಾಭಿಷೇಕ, ಸಂಕಷ್ಟಹರ ಚತುರ್ಥಿ, ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ, ನವಗ್ರಹ ಹೋಮ ನಡೆಸಲಾಗುತ್ತದೆ.
ದೇವಸ್ಥಾನಕ್ಕೆ 300 ವರ್ಷಗಳ ಇತಿಹಾಸವಿದೆ. ದೇವಿಯರ ಜೊತೆ ಕ್ಷೇತ್ರದಲ್ಲಿ ಐಶ್ವರ್ಯ ಗಣಪತಿ ಆಂಜನೇಯಸ್ವಾಮಿ ಇದ್ದು ಭಕ್ತರಿಗೆ ಅಭಯ ನೀಡುತ್ತದೆ.ಕೋದಂಡರಾಮಶೆಟ್ಟಿ ನಿವೃತ್ತ ಅಧಿಕಾರಿ ಹಾಸನ.
ವಿಜಯದುರ್ಗ ಕ್ಷೇತ್ರದಲ್ಲಿ ಜೋಡಿ ದೇವತೆಗಳಿರುವುದರಿಂದ ಭಕ್ತರಿಗೆ ಮನಸ್ಸಿಗೆ ಶಾಂತಿ ಜೀವನದಲ್ಲಿ ನೆಮ್ಮದಿ ದೊರಕುತ್ತದೆ.ಶ್ರೀಧರರಾಜ್ ಅರಸು ಕ್ಷೇತ್ರದ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.