ADVERTISEMENT

ಅರಕಲಗೂಡು; ಮಳೆಗೆ ಮೂರು ಮನೆಗಳ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:18 IST
Last Updated 24 ಅಕ್ಟೋಬರ್ 2024, 14:18 IST
ಅರಕಲಗೂಡು ತಾಲ್ಲೂಕು ಹಳೇ ಕೇರಳಾಪುರ ಗ್ರಾಮದ ಬೋರೇಗೌಡ ಅವರ ಮನೆಯ ಗೋಡೆ ಮಳೆಯಿಂದ ಕುಸಿದಿದ್ದು ಶಿರಸ್ತೆದಾರ್ ಸಿ. ಸ್ವಾಮಿ ಪರಿಶೀಲಿಸಿದರು.
ಅರಕಲಗೂಡು ತಾಲ್ಲೂಕು ಹಳೇ ಕೇರಳಾಪುರ ಗ್ರಾಮದ ಬೋರೇಗೌಡ ಅವರ ಮನೆಯ ಗೋಡೆ ಮಳೆಯಿಂದ ಕುಸಿದಿದ್ದು ಶಿರಸ್ತೆದಾರ್ ಸಿ. ಸ್ವಾಮಿ ಪರಿಶೀಲಿಸಿದರು.   

ಅರಕಲಗೂಡು: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಬಿದ್ದ ಮಳೆಗೆ ಮೂರು ಮನೆಗಳ ಗೋಡೆ ಕುಸಿದು ಹಾನಿಯಾಗಿದೆ.

ರಾಮನಾಥಪುರ ಹೋಬಳಿ ಹಳೇ ಕೇರಳಾಪುರ ಗ್ರಾಮದ ಬೋರೇಗೌಡ, ಕೋಟವಾಳು ಗ್ರಾಮದ ಜಯಣ್ಣ, ಬೆಳವಾಡಿ ಗ್ರಾಮದ ಜವರೇಗೌಡ ಎಂಬುವರ ಮನೆಗಳ ಗೋಡೆ ಭಾಗಶಃ ಕುಸಿದಿವೆ. ಹಾನಿ ಸ್ಥಳಕ್ಕೆ ಶಿರಸ್ತೆದಾರ್ ಸಿ. ಸ್ವಾಮಿ ಗ್ರಾಮ ಲೆಕ್ಕಾಧಿಕಾರಿಗಳಾದ ಧರ್ಮೇಶ್, ಅನುಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಮುಖ ವಾಣಿಜ್ಯ ಬೆಳೆಯಾದ ಮುಸುಕಿನ ಜೋಳದ ಕಟಾವಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ADVERTISEMENT

ತಾಲ್ಲೂಕಿನಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆದಿದ್ದು ಉತ್ತಮ ಫಸಲು ಬಂದಿತ್ತು. ಆಯುಧಪೂಜೆ ಹಬ್ಬದ ಬಳಿಕ ಕಟಾವು ನಡೆಸಲು ರೈತರು ಸಿದ್ದತೆ ನಡೆಸಿದ್ದರು.

ಆದರೆ ದಿಢೀರ್ ಸುರಿಯುತ್ತಿರುವ ಮಳೆಯಿಂದ ಕಟಾವು ನಡೆಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಈಗಾಗಲೆ ಕಾಳನ್ನು ಬೇರ್ಪಡಿಸಿರುವ ರೈತರಿಗೆ ಒಣಗಿಸಲು ಸಮಸ್ಯೆ ಎದುರಾಗಿದೆ. ಭತ್ತದ ಬೆಳೆಯಲ್ಲಿ ಹೊಡೆ ಹೊರಡುವ ಸಮಯವಾಗಿದ್ದು ಮಳೆ ಹೀಗೆ ಮುಂದುವರೆದರೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ತಿಳಿಸಿದರು.

ತೋಟಗಾರಿಕೆ ಬೆಳೆಗಳಿಗೆ ಯಾವುದೇ ಹಾನಿಯಾಗಿಲ್ಲ. ಆಲೂಗೆಡ್ಡೆ ಕಟಾವು ಮುಗಿದಿದೆ. ಈಗ ಬೀಳುತ್ತಿರುವ ಮಳೆ ಬೇಸಿಗೆ ದಿನಗಳಲ್ಲಿ ಬೆಳೆಗಳಿಗೆ ನೀರಿನ ಬೇಡಿಕೆ ಕಡಿಮೆಯಾಗಲು ಸಹಾಯಕವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್ ತಿಳಿಸಿದರು.

ತಾಲ್ಲೂಕಿನ ಮಳೆ ಮಾಪನ ಕೇಂದ್ರಗಳಲ್ಲಿ ಗುರುವಾರ ಬೆಳಿಗ್ಗೆ ದಾಖಲಾದ ಮಳೆ ವಿವರ ಹೀಗಿದೆ.

ಅರಕಲಗೂಡು 3.52 ಸೆಂ. ಮೀ,

ಮಲ್ಲಿಪಟ್ಟಣ 1 ಸೆಂ. ಮೀ,

ದೊಡ್ಡಮಗ್ಗೆ 1.48 ಸೆಂ. ಮೀ,

ರಾಮನಾಥಪುರ 2.86 ಸೆಂ. ಮೀ,

ಕೊಣನೂರು 2.7 ಸೆಂ. ಮೀ,

ಬಸವಾಪಟ್ಟಣ 1.2 ಸೆಂ. ಮೀ
ದೊಡ್ಡಬೆಮ್ಮತ್ತಿಯಲ್ಲಿ 1.2 ಸೆಂ. ಮೀ

ಅರಕಲಗೂಡು ತಾಲ್ಲೂಕು ಬೆಳವಾಡಿ ಗ್ರಾಮದ ಜವರೇಗೌಡ ಅವರ ಮನೆಯ ಗೋಡೆ ಮಳೆಯಿಂದ ಕುಸಿದಿದ್ದು ಗ್ರಾಮಲೆಕ್ಕಾಧಿಕಾರಿ ಅನುಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.