ADVERTISEMENT

ಬೇಲೂರು: ಕಾಫಿ ತೋಟದಿಂದ ಕೆಫೆಗೆ ನುಗ್ಗಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:22 IST
Last Updated 8 ಮಾರ್ಚ್ 2024, 15:22 IST
ಗುಂಪಿನಿಂದ ಬೇರ್ಪಟ್ಟ ಕಾಡಾನೆಯೊಂದು ಶುಕ್ರವಾರ ಬೇಲೂರು ತಾಲ್ಲೂಕಿನ ಚೀಕನಹಳ್ಳಿ–ಕೈಮರ ರಸ್ತೆಯ ಕೆಫೆಗೆ ನುಗ್ಗಿತ್ತು
ಗುಂಪಿನಿಂದ ಬೇರ್ಪಟ್ಟ ಕಾಡಾನೆಯೊಂದು ಶುಕ್ರವಾರ ಬೇಲೂರು ತಾಲ್ಲೂಕಿನ ಚೀಕನಹಳ್ಳಿ–ಕೈಮರ ರಸ್ತೆಯ ಕೆಫೆಗೆ ನುಗ್ಗಿತ್ತು    

ಬೇಲೂರು: ತಾಲ್ಲೂಕಿನ ಚೀಕನಹಳ್ಳಿ–ಕೈಮರ ರಸ್ತೆಯಲ್ಲಿ ಶುಕ್ರವಾರ ಕಾಡಾನೆಯೊಂದು ಘೀಳಿಡುತ್ತ ಜನರನ್ನು ಅಟ್ಟಾಡಿಸಿಕೊಂಡು ಕೆಫೆಗೆ ನುಗ್ಗಿತು.

ಗುಂಪಿನಿಂದ ಬೇರ್ಪಟ್ಟಿದ್ದ ಹೆಣ್ಣಾನೆಯೊಂದು ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ದಾಟುತ್ತಿದ್ದ ವೇಳೆ, ಕೆಲ ಯುವಕರು ರಸ್ತೆಯಲ್ಲಿ ವಿಡಿಯೋ ಮಾಡುತ್ತ ಕಿರುಚಾಡುತ್ತಿದ್ದರು.

ಇದರಿಂದ ಕೆರಳಿದ ಹೆಣ್ಣಾನೆ ರಸ್ತೆಯಲ್ಲಿ ನಿಂತಿದ್ದ ಜನರ ಕಡೆಗೆ ನುಗ್ಗಿತು. ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದು, ಕೆಲವರು ಚೀಕನಹಳ್ಳಿ-ಕೈಮರ ರಸ್ತೆ ಪಕ್ಕದಲ್ಲಿರುವ ಗ್ರೋವರ್ಸ್ ಕೆಫೆಗೆ ಒಳಗೆ ಹೋಗಿದ್ದಾರೆ.

ADVERTISEMENT

ಕಾಡಾನೆಯು ಜನರನ್ನು ಅಟ್ಟಿಸಿಕೊಂಡು ಬಂದು ಕೆಫೆ ಆವರಣಕ್ಕೆ ನುಗ್ಗಿದ್ದು, ಕೆಫೆಗೆ ಬಂದಿದ್ದ ಕೆಲವರು ಅಲ್ಲಿ ಪಾರ್ಕಿಂಗ್ ಮಾಡಿದ್ದ ಕಾರಿನೊಳಗೆ ಹೋಗಿ ಕುಳಿತರೆ, ಇನ್ನೂ ಕೆಲವರು ಕಾಫಿ ಕುಡಿಯುವುದನ್ನು ಬಿಟ್ಟು ಕೆಫೆ ಒಳಗೆ ಓಡಿ ಹೋಗಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟರು.

ಜನರನ್ನು ಅಟ್ಟಾಡಿಸಿದ ನಂತರ ಕೆಫೆ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಆನೆ ಬೀಡು ಬಿಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾ ಹಾಗೂ ಯುವಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.