ಹೆತ್ತೂರು: ‘ಕಾಡಾನೆ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರಗಳು ಕೈಗೊಂಡಿರುವ ಯೋಜನೆಗಳು ಇನ್ನೂ ಕಾಗದ ಬಿಟ್ಟು ಹೊರಬರುತ್ತಿಲ್ಲ. ಇದಕ್ಕೊಂದು ಶಾಶ್ವತ ಪರಿಹಾರ ದೊರಕದೇ ಹೋದರೆ ಮಲೆನಾಡು ಭಾಗದ ರೈತರ ಬದುಕು ಎಂದಿಗೂ ಹಸನಾಗುವ ಮಾತೇ ಇಲ್ಲ’.
ಹೋಬಳಿಯಲ್ಲಿ ಕಾಡಾನೆ ಉಪಟಳದಿಂದ ಬೇಸತ್ತಿರುವ ರೈತರು ಅಲವತ್ತಿಕೊಳ್ಳುತ್ತಿರುವ ಪರಿ ಇದು.
ಮಲೆನಾಡಿನಲ್ಲಿ ಕಾಡಾನೆ-ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಮಲೆನಾಡು ಎಂದು ಕರೆಸಿಕೂಳ್ಳುವ ಹೆತ್ತೂರು ಮತ್ತು ಯಸಳೂರು ಹೋಬಳಿಯಲ್ಲಿ ಕಾಡಾನೆ ಹಾವಳಿ ವ್ಯಾಪಿಸಿ, ದಶಕಗಳೇ ಸಂದಿವೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕೊಳವೆಬಾವಿ, ಸಣ್ಣ ಕೆರೆಕಟ್ಟೆಗಳ ನೀರು ಬಳಸಿಕೊಂಡು ಬೆಳೆದ ಬೆಳೆಯು ಕಾಡಾನೆ ಸೇರಿ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಈ ಭಾಗದ ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನವೆಂಬರ್- ಡಿಸೆಂಬರ್‌ನಲ್ಲಿ ಭತ್ತದ ಬೆಳೆ ಕೈ ಸೇರುವ ತಿಂಗಳು. ಆದರೆ ಭತ್ತದ ಬೆಳೆ ಕಾಡಾನೆಗಳ ಪಾಲಾಗುತ್ತಿದೆ. ಆಹಾರದ ಕೊರತೆಯಿಂದ ಅರಣ್ಯದಿಂದ ಹೊರಬಂದಿರುವ ಕಾಡಾನೆಗಳ ಹಿಂಡು, ಸಾವಿರಾರು ಎಕರೆಯಲ್ಲಿ ಬೆಳೆದು ನಿಂತಿರುವ ಭತ್ತದ ಬೆಳೆಯನ್ನು ಕ್ಷಣಾರ್ಧದಲ್ಲಿ ನಾಶ ಮಾಡುತ್ತಿವೆ. ಇದು ರೈತರಿಗೆ ಸಹಿಸಲಾಗದಷ್ಟು ವೇದನೆ ತಂದೊಡ್ಡಿದೆ.
ಭತ್ತದ ಗದ್ದೆಗೆ ಪ್ರತಿ ವರ್ಷವೂ ಕಾಡಾನೆಗಳ ಹಿಂಡು ದಾಳಿ ಮಾಡುತ್ತಿದ್ದು, ಇಡೀ ಗದ್ದೆಗಳನ್ನೇ ನಾಶಗೊಳಿಸುತ್ತಿವೆ. ಕಾಡಾನೆ ಹಾವಳಿಯಿಂದ ಬೇಸತ್ತು ಹಲವು ಕೃಷಿಕರು ಕೃಷಿ ಭೂಮಿಯನ್ನು ಪಾಳು ಬಿಟ್ಟಿದ್ದಾರೆ.
ಅತ್ತಿಹಳ್ಳಿ, ಹಿರಿಯೂರು, ಹೊಸಹಳ್ಳಿ, ಹೆತ್ತೂರು, ಬೂಬ್ಬನಹಳ್ಳಿ, ಹಳ್ಳಿಯೂರು, ಹಾಡ್ಲಹಳ್ಳಿ, ಐಗೂರು, ಚಿಕ್ಕಕುಂದೂರು, ಬಾಚ್ಚಿಹಳ್ಳಿ, ಹಾಡ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕೃಷಿಯನ್ನೇ ಅವಲಂಬಿಸಿಕೊಂಡಿರುವ ಕೃಷಿಕರು ಹಲವು ವರ್ಷಗಳಿಂದ ಬೆಳೆದ ಭತ್ತ ಕೈಗೆ ಸಿಗದೇ ನಷ್ಟ ಅನುಭವಿಸುವಂತಾಗಿದೆ.
ಹಗಲಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಡುವ ಕಾಡಾನೆಗಳು, ರಾತ್ರಿ ವೇಳೆ ಭತ್ತದ ಗದ್ದೆಗಳಿಗೆ ಇಳಿಯುತ್ತಿವೆ. ಇದೇ ರೀತಿ ಆನೆಗಳ ಹಾವಳಿ ಹೆಚ್ಚುತ್ತಲೇ ಸಾಗಿದರೆ, ಊರನ್ನೂ ಬಿಡಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಪ್ರತಿ ವರ್ಷವೂ ಭತ್ತದ ನಾಟಿ ನಂತರ ಕಾಡಾನೆಗಳ ಹಿಂಡು ಗದ್ದೆಗೆ ಲಗ್ಗೆ ಇಡುತ್ತಿದ್ದು, ಕೆಲವು ಕೃಷಿಕರು ಕಾಡಾನೆಯ ದಾಳಿಗೆ ಹೆದರಿ ಭತ್ತದ ಗದ್ದೆಯಲ್ಲಿ ಶುಂಠಿ, ಅಡಿಕೆ ಕೃಷಿ ಮಾಡಲು ಮುಂದಾಗಿದ್ದಾರೆ. ಕೃಷಿ ಗದ್ದೆಯಲ್ಲಿ ಕಾಫಿ ಹಾಗೂ ಕಾಳುಮೆಣಸು ಗಿಡಗಳನ್ನು ನೆಟ್ಟು ತೋಟವಾಗಿ ಪರಿವರ್ತಿಸಿದ್ದಾರೆ.
ನಿಲ್ಲದ ಕಾಡಾನೆ ಹಾವಳಿ; ರೈತರಿಗೆ ತಪ್ಪದ ಸಂಕಷ್ಟ ನಿತ್ಯ ಮಲೆನಾಡು ಭಾಗದ ಕೃಷಿ ಜಮೀನಿಗೆ ದಾಳಿ ಕಾಡಾನೆ ತಡೆಗೆ ಶಾಶ್ವತ ಯೋಜನೆ ರೂಪಿಸಲು ಒತ್ತಾಯ
ಕೆಲವು ವರ್ಷಗಳಿಂದ ಕಾಡಾನೆಗಳು ಗದ್ದೆಗೆ ದಾಳಿ ಮಾಡಿ ಕೃಷಿಯನ್ನು ನಾಶ ಮಾಡುತ್ತಿವೆ. ಇದೀಗ ಮೂರು ವರ್ಷಗಳಿಂದ ಗದ್ದೆಯನ್ನು ಪಾಳು ಬಿಡಲಾಗಿದೆ.ಗಂಗಾಧರ್ ಅತ್ತಿಹಳ್ಳಿ ಗ್ರಾಮಸ್ಥ
ನಿತ್ಯ ಕಾಡಾನೆ ಹಿಂಡು ಗದ್ದೆಗೆ ಇಳಿಯುತ್ತಿದ್ದು ಅಪಾರ ಹಾನಿಯಾಗಿದೆ. ಕೊಯ್ಲು ಮಾಡುವವರೆಗೂ ಕೃಷಿ ಫಸಲನ್ನು ಕಾಪಾಡುವುದೇ ಸಾಹಸವಾಗಿದೆ.ರವಿಕುಮಾರ್ ಎಚ್.ಎನ್. ಹೆತ್ತೂರು ಕೃಷಿಕ
ಕಾಡಿಗಟ್ಟಿದರೂ ಬರುವ ಕಾಡಾನೆಗಳು
ಅರಣ್ಯ ಇಲಾಖೆ ಹಾಗೂ ಆರ್‌ಟಿಎಫ್ ತಂಡ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುತ್ತಿದ್ದಾರೆ. ಆದರೆ ಕಾಡಿಗೆ ಹೋಗುವ ಕಾಡಾನೆಗಳು ಮರುದಿನ ಮರಳಿ ನಾಡಿಗೆ ಬರುತ್ತಿವೆ. ಮತ್ತೆ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ದಾಂಧಲೆ ನಡೆಸುತ್ತಿದ್ದು ಕೃಷಿಕರ ನೆಮ್ಮದಿ ಹಾಳು ಮಾಡಿವೆ. ಕೆಲವೆಡೆಗಳಲ್ಲಿ ಕೃಷಿ ಮಾಡಿದ ರೈತರು ಕೃಷಿಯನ್ನು ರಕ್ಷಿಸಲೆಂದು ಗದ್ದೆಯ ಬದಿಯಲ್ಲಿ ಅಟ್ಟಣಿ ನಿರ್ಮಿಸಿ ರಾತ್ರಿಯಿಡಿ ಕಾವಲು ಕೂರುವಂತಾಗಿದೆ.
ಶಾಶ್ವತ ಯೋಜನೆ ಅಗತ್ಯ
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆರಣ್ಯದ ಸುತ್ತಲೂ ಕಂದಕ ನೇತು ಬಿಡಲಾದ ಸೋಲಾರ್ ಸೇರಿದಂತೆ ವಿವಿಧ ಯೋಜನೆಗಳನ್ನುತರಲಾಗಿದ್ದು ಇದರಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬರಬಹುದು ಎಂದು ಈ ಭಾಗದ ರೈತರು ಅಂದಾಜಿಸಿದ್ದರು. ಸರ್ಕಾರ ಕೂಡ ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಶಾಶ್ವತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭತ್ತದ ಕೃಷಿಯು ಕಣ್ಮರೆ ಆಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ರೈತರು. ಕಾಡಾನೆ ದಾಳಿಗೆ ತುತ್ತಾದ ಸಂದರ್ಭದಲ್ಲಿ ಬಂದು ಸಾಂತ್ವನ ಹೇಳಿ ಹೋಗುವ ಜನಪ್ರತಿನಿಧಿಗಳು ಅಧಿಕಾರಿಗಳು ಮತ್ತೆ ಕಾಣ ಸಿಗುವುದೇ ಮತ್ತೊಂದು ಪ್ರಕರಣ ನಡೆದಾಗ. ಹಾಗಾಗಿ ಸರ್ಕಾರ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ರೂಪಿಸುತ್ತದೆ ಎನ್ನುವ ನಂಬಿಕೆ ಇಲ್ಲ ಎನ್ನುತ್ತಿದ್ದಾರೆ ಮಲೆನಾಡು ಭಾಗದ ಜನರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.