ಬೇಲೂರು: ‘ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸರ್ಕಾರ ಹತ್ತು ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ರಾಜು ಎಚ್ಚರಿಸಿದರು.
‘ಕಾಡಾನೆಗಳ ಹಾವಳಿಯಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಕಾರ್ಮಿಕರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಶೀಘ್ರ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಹಾಸನದ ಹೇಮಾವತಿ ಪ್ರತಿಮೆ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು’
ಎಂದು ಅವರು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮಾತನಾಡಿ, ‘ತಾಲ್ಲೂಕಿನ ಮಲೆನಾಡು ಭಾಗಗಳಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ಬೆಳೆ ಹಾನಿ ಮಾಡುತ್ತಿವೆ. ಆದರೆ, ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರದ ಮೊತ್ತ ತುಂಬಾ ಕಡಿಮೆಯಾಗಿದೆ. ವೈಜ್ಞಾನಿಕ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಗೌರವಾಧ್ಯಕ್ಷ ಐ.ಎನ್.ಅರುಣ್ ಕುಮಾರ್, ಬಿಕ್ಕೋಡು ಹೋಬಳಿ ಘಟಕದ ಅಧ್ಯಕ್ಷ ರಜಾಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.