ADVERTISEMENT

ಜಾವಗಲ್ | ಯುವತಿ ಸಾವು: ಡೆಂಗಿ ಜ್ವರದ ಶಂಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 14:25 IST
Last Updated 8 ಜುಲೈ 2024, 14:25 IST
ಲಿಖಿತಾ
ಲಿಖಿತಾ   

ಜಾವಗಲ್: ಜ್ವರದಿಂದ ಬಳಲುತ್ತಿದ್ದ ಗ್ರಾಮದ ಲಕ್ಷ್ಮಿಪುರ ಬಡಾವಣೆಯ ಯುವತಿ ಲಿಖಿತಾ (18) ಮೃತಪಟ್ಟಿದ್ದು, ಡೆಂಗಿ ಜ್ವರದ ಶಂಕೆ ವ್ಯಕ್ತವಾಗಿದೆ.

ಗ್ರಾಮದ ರಾಜೇಶ್ ಹಾಗೂ ಲತಾಮಣಿ ದಂಪತಿ ಪುತ್ರಿ ಲಿಖಿತಾ, ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ‘ಗ್ರಾಮದ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಜ್ವರದ ತೀವ್ರತೆ ಹೆಚ್ಚಿದ್ದರಿಂದ ಯುವತಿಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗಿ ಇರುವುದು ದೃಢಪಟ್ಟಿದ್ದು, ಅದೇ ದಿನ ಸಂಜೆ ಜ್ವರದಿಂದ ಮೃತಪಟ್ಟಿದ್ದಾಳೆ’ ಎಂದು ಕುಟುಂಬಸ್ಥರು ತಿಳಿಸಿದರು.

ಒಂದು ತಿಂಗಳಿಂದ ಗ್ರಾಮದಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಸೋಂಕು ತಡೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ಕಸದ ಸಮಸ್ಯೆ ಅಧಿಕವಾಗಿದ್ದು, ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಹಾವಳಿಯು ಹೆಚ್ಚಾಗಿದೆ. ಕಸದ ಸಮಸ್ಯೆ ಬಗೆಹರಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಸೋಮವಾರ ಮೃತ ಯುವತಿಯ ಮನೆಗೆ ಶಾಸಕ ಎಚ್.ಕೆ. ಸುರೇಶ್ ಭೇಟಿ ನೀಡಿ, ಸಾಂತ್ವನ ಹೇಳಿದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.