ಹಳೇಬೀಡು: ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದವರೆಲ್ಲರೂ ಇ-ಕೆವೈಸಿ ಮಾಡಿಸಬೇಕು ಎಂದು ಹಳೇಬೀಡು ಭಾಗದಲ್ಲಿ ಸುಳ್ಳು ವದಂತಿ ಹರಡುತ್ತಿದ್ದು, ಮೂರು ದಿನದಿಂದ ಗೃಹಲಕ್ಷ್ಮಿ ಫಲಾನುಭವಿಗಳು ಪರದಾಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದವರಿಗೆ ಹಣ ಬರಲಿ, ಇಲ್ಲವೆ ಬಾರದೆ ಇರಲಿ ಎಲ್ಲರೂ ಇ–ಕೆವೈಸಿ ಮಾಡಿಸಬೇಕು ಎಂದು ಪ್ರಚಾರ ಆಗುತ್ತಿದ್ದು, ಮಹಿಳೆಯರ ದಂಡು ಸೈಬರ್ ಸೆಂಟರ್, ಗ್ರಾಮ ವನ್ ಕೇಂದ್ರಗಳಲ್ಲಿ ಜಮಾಯಿಸುತ್ತಿದೆ. ವಿಷಯ ಒಬ್ಬರಿಂದ ಮತ್ತೊಬ್ಬರ ಕಿವಿಗೆ ತಲುಪಿರುವುದರಿಂದ ವಿವಿಧ ಊರುಗಳಿಂದ ಮಹಿಳೆಯರು ಕಷ್ಟಪಟ್ಟು ಪಟ್ಟಣಗಳಿಗೆ ಬರುತ್ತಿದ್ದಾರೆ.
ಇಕೆವೈಸಿ ₹ 30 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೌಕರರು ಇಲ್ಲವೇ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಯಾರೊಬ್ಬರಿಗೂ ಇಕೆವೈಸಿ ಮಾಡಿಸಲು ಹೇಳಿಲ್ಲ. ಆದರೂ ಮಹಿಳೆಯರು ಇಕೈವೈಸಿ ಮಾಡಿಸಲು ಕಷ್ಟ ಅನುಭವಿಸುತ್ತಿದ್ದಾರೆ. ಇಂಟರ್‌ನೆಟ್, ಸರ್ವರ್ ಸಮಸ್ಯೆ ನಡುವೆ ಮನೆ ಕೆಲಸ ಬಿಟ್ಟು ಫಲಾನುಭವಿಗಳು ಸೆಂಟರ್‌ಗಳಲ್ಲಿ ಅನಗತ್ಯವಾಗಿ ನಿಲ್ಲುವಂತಾಗಿದೆ.
ಗ್ರಾಮ ವನ್ ಸೇವಾ ಕೆಂದ್ರದಲ್ಲಿ ಪಡಿತರ ಚೀಟಿ, ಆಧಾರ್ ಸಂಖ್ಯೆಯನ್ನು ನಮೂದಿಸಿ ಇ–ಕೆವೈಸಿ ಪರಿಶೀಲನೆ ನಡೆಸಬಹುದು. ಇ–ಕೆವೈಸಿ ಆಗಿಲ್ಲದವರಿಗೆ ಇ–ಕೆವೈಸಿ ಮಾಡಬೇಕು. ಆದರೆ ಎಲ್ಲರಿಗೂ ಇ–ಕೆವೈಸಿ ಮಾಡಿಸಬೇಕು ಎಂದು ಹಣದ ವಸೂಲಿ ಮಾಡಲಾಗುತ್ತಿದೆ ಎಂದು ಇಲ್ಲಿನ ಜನರು ದೂರುತ್ತಿದ್ದಾರೆ.
ಗೃಹಲಕ್ಷ್ಮಿ ಫಲಾನುಭವಿಗಳ ಇ–ಕೆವೈಸಿ ಮಾಡಿಸುವ ಕುರಿತು ಸುಳ್ಳು ಪ್ರಚಾರ ಮಾಡಲಾಗಿದೆ. ಮಹಿಳೆಯರನ್ನು ವಂಚಿಸಲಾಗುತ್ತಿದೆ ಎಂದು ಹೇಳುತ್ತಿರುವ ಜನರು, ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮಹಿಳೆಯರು ಮಾತ್ರ ಯಾವುದಕ್ಕೂ ಕಿವಿಗೊಡದೇ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ನೋಂದಣಿಯ ಪ್ರಮಾಣ ಪತ್ರದೊಂದಿಗೆ ಗ್ರಾಮ ವನ್ ಸೇವಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ.
‘ಗ್ರಾಮ ಪಂಚಾಯಿತಿಯಲ್ಲಿಯೂ ಗೃಹಲಕ್ಷ್ಮಿ ನೋಂದಣಿ ಮಾಡುವ ಪ್ರಕ್ರಿಯೆ ನಡೆದಿತ್ತು. ಆದೇಶ ಬಂದಿದ್ದರಿಂದ ನೋಂದಣಿ ಪ್ರಕ್ರಿಯೆ ನಡೆಸಿದೆವು. ಇ–ಕೆವೈಸಿ ಮಾಡಿಸಲು ಯಾವುದೇ ಸೂಚನೆ ಬಂದಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಅಪರೇಟರ್‌ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.