ADVERTISEMENT

ಕಾರ್ಮಿಕರ ಅಭಾವ: ಬೆಳೆಗಾರರಿಗೆ ಸಂಕಷ್ಟ

ದುಬಾರಿ ಕೂಲಿ, ಸಾಗಣೆ ವೆಚ್ಚ ದುಪ್ಪಟ್ಟು, ಹೆಚ್ಚಿದ ಕಾರ್ಮಿಕರ ವಲಸೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 4:45 IST
Last Updated 21 ಫೆಬ್ರುವರಿ 2022, 4:45 IST
ಆಲೂರು ಭಾಗದಲ್ಲಿ ಕಾಫಿ ಕೊಯ್ಲು ಮಾಡುತ್ತಿರುವ ಕಾರ್ಮಿಕರು
ಆಲೂರು ಭಾಗದಲ್ಲಿ ಕಾಫಿ ಕೊಯ್ಲು ಮಾಡುತ್ತಿರುವ ಕಾರ್ಮಿಕರು   

ಹಾಸನ: ಮಲೆನಾಡು ಭಾಗದಲ್ಲಿ ಕಾಫಿ ಕೊಯ್ಲು ಬಿರುಸುಗೊಂಡಿದ್ದು, ಬೆಳೆಗಾರರು ಕೂಲಿಕಾರ್ಮಿಕರಿಗೆ ಹುಡು ಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಲಸೆ ಕಾರ್ಮಿಕರಿಗೂ, ಮಲೆನಾಡಿನ ಕಾಫಿ ತೋಟಕ್ಕೂ ಬಹಳ ವರ್ಷಗಳ ನಂಟು. ಆದರೆ, ಇದೀಗ ವಲಸೆ ಕಾರ್ಮಿಕರ ಕೊರತೆಯಿಂದಾಗಿ ಕಾಫಿ ಕೊಯ್ಲಿಗೆ ಹಿನ್ನೆಡೆ ಆಗುತ್ತಿದ್ದು, ಬಂದ ಬೆಳೆಯನ್ನೂ ಸಂಪೂರ್ಣವಾಗಿ ಕೊಯ್ಲು ಮಾಡಲು ಅನೇಕ ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ.

ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಆಲೂರು ಹಾಗೂ ಬೇಲೂರು ತಾಲ್ಲೂಕಿನಲ್ಲಿ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಸಕಲೇಶಪುರ ತಾಲ್ಲೂಕಿನ ಬೆಳಗೂಡು, ಯಸಳೂರು, ಆಲೂರು ತಾಲ್ಲೂಕಿನ ಮಗ್ಗೆ, ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹಾಗೂ ಬೇಲೂರು ತಾಲ್ಲೂಕು ವ್ಯಾಪ್ತಿಯ ತೋಟಗಳಲ್ಲಿ ಅರೇಬಿಕಾ ಹೆಚ್ಚಿನ ಪ್ರಮಾಣದಲ್ಲಿದೆ.

ADVERTISEMENT

ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ, ಹವಾಮಾನ ವೈಪರೀತ್ಯದ ನಡುವೆಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡಬೇಕಿದೆ.

ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ಬಹುತೇಕ ಎಸ್ಟೇಟ್‌ಗಳಲ್ಲಿ ವಲಸೆ ಕಾರ್ಮಿಕರೇ ಕೆಲಸ ನಿರ್ವಹಿಸುತ್ತಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯದಿಂದ ಕುಟುಂಬ ಸಮೇತರಾಗಿ ವಲಸೆ ಬರುವ ಕಾರ್ಮಿಕರು ಎಸ್ಟೇಟ್‌ಗಳ ಲೈನ್‌ ಮನೆ
ಗಳಲ್ಲಿ ಆಶ್ರಯ ಪಡೆದಿದ್ದಾರೆ. 20 ಎಕರೆಗೂ ಹೆಚ್ಚು ಕಾಫಿ ತೋಟ ಹೊಂದಿರುವವರು ಈ ರೀತಿ ಕಾರ್ಮಿಕರನ್ನು ತಮ್ಮ ಎಸ್ಟೇಟ್‌ಗಳಲ್ಲಿ ಉಳಿಸಿಕೊಂಡಿದ್ದಾರೆ. ಆದರೆ, ಸಣ್ಣ ಬೆಳೆಗಾರರು ಕಾರ್ಮಿಕರ ಸಮಸ್ಯೆ ಅನುಭವಿಸುತ್ತಿದ್ದಾರೆ.

ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಕೊಳ್ಳಲು ಗ್ರಾಮಗಳಿಗೆ ಆಟೊ, ಓಮ್ನಿ ಕಾರು, ಟಾಟಾ ಏಸ್‌, ಮಹೀಂದ್ರಾ ಪಿಕ್‌ಆಪ್‌ ವಾಹನ ಕಳಿಸುತ್ತಾರೆ. ಅನೇಕರು 20, 30 ಕಿ.ಮೀ ದೂರದ ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಈ ವೆಚ್ಚವನ್ನು ತೋಟಗಳ ಮಾಲೀಕರೇ ಭರಿಸಬೇಕು.

ದಿನಕ್ಕೆ ಮಹಿಳಾ ಕೂಲಿ ಕಾರ್ಮಿಕರೊಬ್ಬರಿಗೆ ₹350 ಹಾಗೂ ಪುರುಷರಿಗೆ ₹500ರಿಂದ ₹550 ಕೂಲಿ ನೀಡಲಾಗುತ್ತಿದೆ. ಹಿಂದೆ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆವರೆಗೂ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಈಗ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ಕ್ಕೆ ಕೆಲಸ ಕೈಬಿಟ್ಟು ಹೊರಡುತ್ತಾರೆ.

ಹಿಂದೆ ತೋಟದ ಮಾಲೀಕರಿಂದ ಸಾಲ ಪಡೆಯುತ್ತಿದ್ದ ಕಾರ್ಮಿಕರು, ಕಾಯಂ ಆಗಿ ಅವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಸ್ತ್ರೀ ಶಕ್ತಿ, ಸ್ವಸಹಾಯ ಸಂಘ ಹಾಗೂ ಖಾಸಗಿ ಫೈನಾನ್ಸ್‌ಗಳಿಂದ ಸುಲಭವಾಗಿ ಸಾಲ ಸಿಗುವ ಕಾರಣ ತೋಟಕ್ಕೆ ಹೋಗುವುದು ಕಡಿಮೆ ಆಗಿದೆ. ಸ್ಥಳೀಯ ಯುವ ಜನರು ನಗರಗಳಿಗೆ ಹೋಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಹಾಗಾಗಿ ಅನೇಕರು ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನೇ ನಂಬಿಕೊಂಡಿದ್ದಾರೆ.

ವಲಸೆ ಕಾರ್ಮಿಕರಿಗೆ ಸ್ಥಳೀಯರಿಗಿಂತ ₹50 ಕಡಿಮೆ ಕೂಲಿ ನೀಡಲಾಗುತ್ತಿದೆ. ಶ್ರಮಜೀವಿಗಳಾದ ಅವರು ಎಸ್ಟೇಟ್‌ ಗಳಲ್ಲಿಯೇ ಉಳಿದುಕೊಳ್ಳುವುದರಿಂದ ಹೆಚ್ಚು ಸಮಯ ತೋಟದಲ್ಲೇ ಕೆಲಸ ಮಾಡುತ್ತಾರೆ.

ಸಕಲೇಶಪುರದಲ್ಲಿ ಸ್ಥಳೀಯ ಕಾರ್ಮಿಕರಲ್ಲದೆ, ಅಸ್ಸಾಂ, ತಮಿಳುನಾಡು, ಒಡಿಶಾ, ಬಿಹಾರ ಹಾಗೂ ರಾಜ್ಯದ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಹಾವೇರಿ ಸೇರಿದಂತೆ ಕೆಲ ಜಿಲ್ಲೆಗಳಿಂದಲೂ ವಲಸೆ ಕಾರ್ಮಿಕರು ಕಾಫಿ ಕೊಯ್ಲು, ಸಾಗಣೆ, ಸಂಸ್ಕರಣೆಗೆ ಬಂದಿದ್ದಾರೆ. ಕಳೆದ ವರ್ಷ ಅಸ್ಸಾಂ ಚುನಾವಣೆಗಾಗಿ ಕಾರ್ಮಿಕರು ಹೋಗಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ಕಾರ್ಮಿಕರು ಅಷ್ಟಾಗಿ ಬರಲಿಲ್ಲ.

ಕಳೆದ ಬಾರಿ ಜನವರಿ ಹಾಗೂ ಫೆಬ್ರುವರಿಯಲ್ಲಿ ಮಳೆಯಾದ ಕಾರಣ ಎಲ್ಲಾ ತೋಟಗಳಲ್ಲಿ ಏಕಕಾಲಕ್ಕೆ ಕಾಫಿ ಕೊಯ್ಲು ಮಾಡಿದ್ದರಿಂದ ಕಾರ್ಮಿಕರ ಸಮಸ್ಯೆ ಎದುರಾಗಿತ್ತು. ಫಸಲು ಗಿಡದಿಂದ ಉದುರುತ್ತಿದ್ದರೂ ಕೆಲವು ತೋಟಗಳಲ್ಲಿ ಕೊಯ್ಲು ಮಾಡುವುದಕ್ಕೆ ಕಾರ್ಮಿಕ ಸಮಸ್ಯೆ ಕಂಡು ಬಂದಿತ್ತು.

ಹಳೇಬೀಡು ಮಾದಿಹಳ್ಳಿ ಹೋಬಳಿಯ ಹಲವು ಗ್ರಾಮಗಳ ಸಾಕಷ್ಟು ಕಾರ್ಮಿಕರು ಕೊಡಗು, ಚಿಕ್ಕಮಗಳೂರು, ಸಕಲೇಶಪುರ, ಅರೇಹಳ್ಳಿ ಭಾಗದ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಸ್ಥಳೀಯ ರೈತರು ಶುಂಠಿ ಬೆಳೆ ಆರಂಭಿಸಿದ ನಂತರ ಮಲೆನಾಡಿಗೆ ಹೋಗವವರ ಸಂಖ್ಯೆ ಕಡಿಮೆಯಾಗಿದೆ.

ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ, ಪಾಳ್ಯ ಹೋಬಳಿಯ ಶೇ 40 ಮತ್ತು ಕುಂದೂರು ಹೋಬಳಿಯ ಶೇ 50ರಷ್ಟು ಭಾಗದಲ್ಲಿ ಕಾಫಿ ಬೆಳೆಯಲಾಗುತ್ತದೆ. ಕಾಫಿ ಕೊಯ್ಲು ಪ್ರಾರಂಭವಾಗಿ ಎರಡು ತಿಂಗಳಾದರೂ ಕಾರ್ಮಿಕರ ಕೊರತೆ ಕಾಡುತ್ತಿದೆ.

ಹಿಂದೆ ತೋಟದ ಕೆಲಸ ಮತ್ತು ಕಾಫಿ ಕೊಯ್ಲು ಮಾಡಲು ಸ್ಥಳೀಯ ಕಾರ್ಮಿಕರು ಸಾಕಾಗುತ್ತಿದ್ದರು. ಇತ್ತೀಚೆಗೆ ಕಾರ್ಮಿಕರ ಮಕ್ಕಳು ಪಟ್ಟಣಕ್ಕೆ ವಲಸೆ ಹೋಗಿರುವುದರಿಂದ ಕಾರ್ಮಿಕರ ಅಭಾವ ಉಂಟಾಗಿದೆ.

ಬೇಲೂರು ತಾಲ್ಲೂಕಿನ ಕಾಫಿ ತೋಟಗಳಲ್ಲಿ ಅಸ್ಸಾಂ ರಾಜ್ಯದ ಕಾರ್ಮಿಕರು ಹೆಚ್ಚಾಗಿ ಕೆಲಸ ಮಾಡುತ್ತಿ ದ್ದಾರೆ. ಸುಮಾರು 25 ಎಕರೆ ತೋಟದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಸಣ್ಣ ಬೆಳೆಗಾರರು ಸ್ಥಳೀಯ ಕಾರ್ಮಿಕರನ್ನೇ ಅವಲಂಬಿಸಿದ್ದಾರೆ ಮತ್ತು ಮುಯ್ಯಾಳು ಮಾಡಿಕೊಂಡು ಕೆಲಸ ಮಾಡಿಕೊಳ್ಳುತ್ತಿದ್ದಾರೆ.

ನಿರ್ವಹಣೆ: ಕೆ.ಎಸ್.ಸುನಿಲ್‌, ಪೂರಕ ಮಾಹಿತಿ: ಎಚ್.ಎಸ್.ಅನಿಲ್ ಕುಮಾರ್, ಎಂ.ಪಿ.ಹರೀಶ್, ಚಂದ್ರಶೇಖರ್, ಎಚ್‌.ಆರ್‌.ಜಗದೀಶ್, ಮಲ್ಲೇಶ್‌, ಜಾನೆಕೆರೆ ಪರಮೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.