ಹಾಸನ: ರಾಜ್ಯದ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಆದ್ಯತೆ ನೀಡಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಕೈಬಿಡಬೇಕು, ವಿದ್ಯುತ್ ತಿದ್ದುಪಡಿ ಮಸೂದೆ 2020 ತಿರಸ್ಕರಿಸಬೇಕು. ಬೆಲೆ ಏರಿಕೆ ಆಧಾರದಲ್ಲಿ ತುಟ್ಟಿಭತ್ಯೆಯೊಂದಿಗೆ ಎಲ್ಲ ವಿಭಾಗಗಳ ಕಾರ್ಮಿಕರಿಗೂ ಸಮಾನ ಕನಿಷ್ಠ ವೇತನ ₹ 31 ಸಾವಿರ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಆಟೋ, ಟ್ಯಾಕ್ಸಿ ಮುಂತಾದ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು. ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮೆಕ್ಯಾನಿಕ್‌ಗಳು, ಮನೆಗೆಲಸದ ಮಹಿಳೆಯರು ಸೇರಿ ವಿವಿಧ ವಿಭಾಗಗಳಿಗೆ ಈಗಾಗಲೇ ಕಾರ್ಮಿಕ ಇಲಾಖೆ ರೂಪಿಸಿರುವ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕರಡನ್ನು ಶಾಸನವನ್ನಾಗಿ ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಅದಕ್ಕೆ ಅಗತ್ಯವಿರುವ ಸೆಸ್ ಸಂಗ್ರಹಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಕೆಲಸಗಳಲ್ಲೂ ದುಡಿಸಿಕೊಳ್ಳಲು ನೀಡಿರುವ ರಿಯಾಯಿತಿ ರದ್ದು ಮಾಡಬೇಕು. ಸರ್ಕಾರದ ನಿಗಮ, ಮಂಡಳಿಗಳು ಮತ್ತು ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಕಾಯಂ ಮಾಡಬೇಕು, ಗುತ್ತಿಗೆ ಕಾರ್ಮಿಕರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಬೇಕು. ವೇತನ ಪರಿಷ್ಕರಣೆ ಆಗಬೇಕು. ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು. ನಿವೃತ್ತಿ ವೇತನ ಸೌಲಭ್ಯವಿಲ್ಲದೆ ಯಾರನ್ನೂ ಕೆಲಸದಿಂದ ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿದರು.
ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಖಜಾಂಚಿ ಜಿ.ಪಿ.ಸತ್ಯನಾರಾಯಣ, ಕಾರ್ಯದರ್ಶಿ ಅರವಿಂದ್ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.