ಜಿ.ಚಂದ್ರಶೇಖರ್
ಅರಕಲಗೂಡು: ರೈತರು ಕಡಿಮೆ ದರದಲ್ಲಿ ಕೃಷಿ ಕಾಯಕ ಕೈಗೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಪಟ್ಟಣದಲ್ಲಿ ಬೀಗ ಬಿದ್ದಿದೆ. ಮಹತ್ವಾಕಾಂಕ್ಷೆಯ ಯೋಜನೆ ಅನ್ನದಾತರಿಗೆ ಉಪಯೋಗವಾಗದೇ ನಿರುಪಯುಕ್ತವಾಗಿದೆ.
ಸರ್ಕಾರ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ರೈತರ ಕೃಷಿ ಚಟುವಟಿಕೆಗೆ ಅನುಕೂಲ ಆಗಲೆಂದು ಕಡಿಮೆ ಬಾಡಿಗೆಯಲ್ಲಿ ಯಂತ್ರೊಪಕರಣಗಳನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು 2014-15 ನೇ ಸಾಲಿನಲ್ಲಿ ಅಂದಿನ ಕೃಷಿ ಸಚಿವ ಕೃಷ್ಣ ಬೈರೇಗೌಡ, ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿಯಲ್ಲಿ ಉದ್ಘಾಟಿಸಿದ್ದು, ಈ ಕೇಂದ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಸಹಯೋಗದೊಂದಿಗೆ ಚಾಲನೆಗೆ ತರಲಾಗಿತ್ತು.
ಕೇಂದ್ರದ ನಿರ್ವಹಣೆಯನ್ನು ವರ್ಷ ಸಂಸ್ಥೆಯವರು ಸಮರ್ಪಕವಾಗಿ ನಿರ್ವಹಿಸದೇ ಇರುವ ಬಗ್ಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಸಂಸ್ಥೆ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರದಲ್ಲೆ ಪುನರಾರಂಭಗೊಳ್ಳಲಿದೆ.ರಮೇಶ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ, ಅರಕಲಗೂಡು
ಆರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರಿಂದ ಈ ಯೋಜನೆಯನ್ನು ತಾಲ್ಲೂಕಿನಾದ್ಯಂತ ವಿಸ್ತರಿಸಿ, 2016-17 ನೇ ಸಾಲಿನಲ್ಲಿ ರಾಮನಾಥಪುರದಲ್ಲಿ ಮತ್ತೊಂದು ಕೇಂದ್ರ ತೆರೆದು, ಸ್ಥಳೀಯ ಪ್ರಸನ್ನ ಸುಬ್ರಹ್ಮಣ್ಯ ಸೇವಾಸಂಘಕ್ಕೆ ನೀಡಲಾಯಿತು. 2020-21 ನೇ ಸಾಲಿನಲ್ಲಿ ಕಸಬಾ, ಕೊಣನೂರು, ಮಲ್ಲಿಪಟ್ಟಣ ಹೋಬಳಿಗಳಲ್ಲಿ ಚಿತ್ರದುರ್ಗ ಜಿಲ್ಲೆಯ ವರ್ಷ ಅಗ್ರಿ ಬಿಸಿನೆಸ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಲಿಮಿಟೆಡ್ ಎಂಬ ಸಂಸ್ಥೆಯು ನಿರ್ವಹಣೆಗೆ ನೀಡಲಾಯಿತು.
ಆದರೆ ಕೊಣನೂರು ಮತ್ತು ಮಲ್ಲಿಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಪ್ರಯೋಜನ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕಸಬಾ ಹೋಬಳಿಯ ಕೇಂದ್ರವನ್ನು ಅರಕಲಗೂಡು ಪಟ್ಟಣದ ಕೃಷಿ ಇಲಾಖೆಯ ಪಕ್ಕದಲ್ಲಿ ಹಾಸನ ಮುಖ್ಯ ರಸ್ತೆಯಲ್ಲಿ ತೆರೆಯಲಾಗಿದೆ. ತೆರೆದಾಗಿನಿಂದ ಇಲ್ಲಿಯವರೆಗೆ ಯಾವುದೇ ರೈತರಿಗೆ ಸಹಕಾರಿಯಾಗುವಂತೆ ಕಾರ್ಯ ನಿರ್ವಹಿಸದೇ ಈಗ ಕೇಂದ್ರಕ್ಕೆ ಬೀಗ ಹಾಕಲಾಗಿದೆ.
ಕೃಷಿ ಯಂತ್ರೋಪಕರಣಗಳಾದ ಟ್ರ್ಯಾಕ್ಟರ್ ಇನ್ನಿತರೆ ಯಂತ್ರಗಳು ನಿಂತಲ್ಲೆ ನಿಂತು ತುಕ್ಕು ಹಿಡಿದಿವೆ. ವಾಹನಗಳ ಸುತ್ತ ಗಿಡಗಂಟಿಗಳು ಬೆಳೆದು ಹಾಳಾಗುತ್ತಿದ್ದರೂ, ಪಕ್ಕದಲ್ಲೆ ಇರುವ ಕೃಷಿ ಇಲಾಖೆ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಸರ್ಕಾರದ ನಿರ್ಲಕ್ಷ ಹಾಗೂ ಎನ್‌ಜಿಒ ಸಂಸ್ಥೆಗಳೂ ಲಾಭದ ಲೆಕ್ಕಾಚಾರ ಹಾಕುತ್ತಿರುವುದು ಈ ಕೇಂದ್ರಕ್ಕೆ ಬೀಗ ಬೀಳಲು ಕಾರಣ. ದುಬಾರಿ ಬಾಡಿಗೆ ತೆತ್ತು ರೈತರಿಗೆ ನಷ್ಟ ತಪ್ಪಿಸಲು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು.ಯೋಗಣ್ಣ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಸರ್ಕಾರ ಈ ಕೇಂದ್ರಗಳಿಗೆ ಶೇ 75 ರಷ್ಟು ಬಂಡವಾಳ ಹೂಡಿದ್ದು, ನಿರ್ವಹಣೆ ಮಾಡುವ ಸಂಸ್ಥೆಗಳು ಶೇ 25 ರಷ್ಟು ಬಂಡವಾಳ ವಿನಿಯೋಗಿಸಿದ್ದವು. ತಾಲ್ಲೂಕಿನಲ್ಲಿರುವ ಪ್ರತಿ ಕೇಂದ್ರಗಳಲ್ಲೂ ₹ 75 ಲಕ್ಷಕ್ಕೂ ಅಧಿಕ ಮೌಲ್ಯದ ಕೃಷಿ ಯಂತ್ರೋಪಕರಣಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಪಟ್ಟಣದ ಈ ಕೇಂದ್ರದ ಉಳಿಕೆ ಯಂತ್ರೋಪಕರಣಗಳು ಎಲ್ಲಿವೆ? ಕಾರ್ಯನಿರ್ವಹಿಸುತ್ತಿವೆಯೋ ಅಥವಾ ದುರುಪಯೋಗವಾಗಿವೆಯೋ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ರೈತರು ಹೇಳುತ್ತಿದ್ದಾರೆ.
ನೋಟಿಸ್ ನೀಡಿದ ಇಲಾಖೆ
ಚಿತ್ರದುರ್ಗ ಜಿಲ್ಲೆಯ ವರ್ಷ ಅಗ್ರಿ ಬಿಸಿನೆಸ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಲಿಮಿಟೆಡ್ ಎಂಬ ಸಂಸ್ಥೆಯು ಕೇಂದ್ರವನ್ನು ತೆರೆಯದೇ ಬೀಗ ಹಾಕಿರುವ ಕುರಿತು ಇಲಾಖೆಯು ಹಲವಾರು ಬಾರಿ ಮೌಖಿಕವಾಗಿ ತಿಳಿಸಿದ್ದು ಕೇಂದ್ರ ತೆರೆಯದಿದ್ದಕ್ಕೆ ಕೃಷಿ ಇಲಾಖೆಯಿಂದ ಈಗಾಗಲೇ 3 ನೋಟಿಸ್ ನೀಡಲಾಗಿದೆ. ಮೇ ತಿಂಗಳಿನಲ್ಲಿ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲೂ ಸಂಸ್ಥೆಗೆ ಕೇಂದ್ರವನ್ನು ತೆರೆಯುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರೂ ನಿರ್ಲಕ್ಷಿಸಲಾಗಿದೆ. ಕೊಣನೂರು ಮತ್ತು ದೊಡ್ಡಮಗ್ಗೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗೆ ನೀಡಿದ ರೀತಿಯಲ್ಲಿಯೇ ಉಳಿದ ಮೂರು ಕೇಂದ್ರವನ್ನು ಸ್ಥಳೀಯ ಸಂಘ–ಸಂಸ್ಥೆಗಳಿಗೆ ನೀಡುವುದು ಅಗತ್ಯ ಎನ್ನುತ್ತಾರೆ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.