ಆಲೂರು: ಇಲ್ಲಿನ ಕೆರೆಹಳ್ಳಿಯಲ್ಲಿ ಹಾದು ಹೋಗಿರುವ ಎತ್ತಿನಹೊಳೆ ಕಾಲುವೆ ಒಡೆದು ಹೊಲಕ್ಕೆ ಹರಿದಿದ್ದು, ‘ಬೆಳೆ ನಷ್ಟವಾಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಸ್ತೆಗೆ ಅಡ್ಡಲಾಗಿ ಕಾಲುವೆ ನಿರ್ಮಿಸಿದ್ದು, ಸೇತುವೆ ನಿರ್ಮಾಣ ಪೂರ್ಣಗೊಂಡಿಲ್ಲ. ಅಧಿಕಾರಿಗಳೂ ಗಮನ ಹರಿಸಿಲ್ಲ’ ಎಂದು ದೂರಿದ್ದಾರೆ.
ಮಡಬಲು ಗ್ರಾಮ ಪಂಚಾಯಿತಿ ಸದಸ್ಯ ಪ್ರೇಮ್ ರಾಜ್ ಮಾತನಾಡಿ, ‘ಗ್ರಾಮದ ಬಳಿ ಆಳವಾಗಿ ಕಾಲುವೆ ತೋಡಲಾಗಿದೆ. ಕಳೆದ ವರ್ಷ ನಿರ್ಮಿಸಿದ್ದ ರಸ್ತೆ ಹಾಳಾಗಿದ್ದು, ವಾಹನಗಳು ಸಂಚರಿಸಲು ಆಗುತ್ತಿಲ್ಲ. ಅಧಿಕಾರಿಗಳು ಕೂಡಲೇ ಬೆಳೆ ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ಎತ್ತಿನಹೊಳೆ ಕಚೇರಿ ಮುಂದೆ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.
‘ಮಳೆ ಬಂದಿದದ್ದರಿಂದ ನಾಲೆಯ ಅಲ್ಲಲ್ಲಿ ನೀರು ನಿಂತಿತ್ತು. ಅಲ್ಲಲ್ಲಿ ನಾಲೆ ನಿರ್ಮಾಣವೂ ನಡೆಯುತ್ತಿತ್ತು. ಮೂಗಲಿ ಗ್ರಾಮದ ಸಮೀಪದ ಏರಿ ಒಡೆದು ನೀರು ಮುಂದೆ ಹರಿದಿದೆ. ಸಂಪರ್ಕ ರಸ್ತೆ ಮಾಡಲು ನಾಲೆ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೀರು ಹರಿಯುವುದನ್ನು ನಿಲ್ಲಿಸಲಾಗಿದೆ. ನಷ್ಟಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಎತ್ತಿನಹೊಳೆ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.