ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಮಂಗಳವಾರ 9,426 ಚೀಲ (2,356ಕ್ವಿಂಟಲ್) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆ ಕಂಡಿದೆ.
ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹವಿರುವ ಮೆಣಸಿನಕಾಯಿ ಮಾರಾಟ ಮಾತ್ರ ನಡೆಯುತ್ತಿದ್ದು, ಮಂಗಳವಾರ ಮತ್ತು ಶುಕ್ರವಾರ ವಹಿವಾಟು ಜೋರಾಗಿರುತ್ತದೆ. ಕಳೆದ ಶುಕ್ರವಾರ ದಸರಾ ಹಬ್ಬದ ಅಂಗವಾಗಿ ಮಾರುಕಟ್ಟೆಗೆ ರಜೆ ಘೋಷಿಸಲಾಗಿತ್ತು. ಈ ಮಂಗಳವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಬೀಳುತ್ತಿತ್ತು. ವಹಿವಾಟು ಮಂದಗತಿಯಲ್ಲಿ ಸಾಗಿದ್ದರಿಂದ ಮಾರುಕಟ್ಟೆಯಲ್ಲಿ ಆವಕ ಹೆಚ್ಚಬಹುದು ಎನ್ನುವ ವರ್ತಕರ ನಿರೀಕ್ಷೆ ಹುಸಿಯಾಗಿದೆ.
ಮಂಗಳವಾರ ಕೇವಲ 364 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 25 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. 30 ಚೀಲ ಡಬ್ಬಿ ಮೆಣಸಿನಕಾಯಿ ₹32,000ರಂತೆ, 16 ಚೀಲ ಕಡ್ಡಿ ಮೆಣಸಿನಕಾಯಿ ₹26,809ರಂತೆ ಮತ್ತು ಗುಂಟೂರು ತಳಿ ಮೆಣಸಿನಕಾಯಿ ₹16,509 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ.
ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಬ್ಯಾಡಗಿ ಡಬ್ಬಿ ₹24,509, ಬ್ಯಾಡಗಿ ಕಡ್ಡಿ ₹22,859 ಹಾಗೂ ಗುಂಟೂರ ತಳಿ ₹13,209ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟಾರೆ 72 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.