ADVERTISEMENT

ಅಗ್ನಿವೀರರ ನೇಮಕ: ಮೊದಲ ದಿನ 1252 ಅಭ್ಯರ್ಥಿಗಳು ಹಾಜರು

ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ವೀಕ್ಷಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:42 IST
Last Updated 1 ಸೆಪ್ಟೆಂಬರ್ 2022, 16:42 IST
ಹಾವೇರಿಯಲ್ಲಿ ನಡೆಯುತ್ತಿರುವ ಅಗ್ನಿಪಥ ನೇಮಕಾತಿ ರ್‍ಯಾಲಿಗೆ ಬಂದಿದ್ದ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ಸೇನಾ ಅಧಿಕಾರಿ  –ಪ್ರಜಾವಾಣಿ ಚಿತ್ರ 
ಹಾವೇರಿಯಲ್ಲಿ ನಡೆಯುತ್ತಿರುವ ಅಗ್ನಿಪಥ ನೇಮಕಾತಿ ರ್‍ಯಾಲಿಗೆ ಬಂದಿದ್ದ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ಸೇನಾ ಅಧಿಕಾರಿ  –ಪ್ರಜಾವಾಣಿ ಚಿತ್ರ    

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಅಗ್ನಿಪಥ ನೇಮಕಾತಿ ಯೋಜನೆಯಡಿ ಅಗ್ನಿವೀರರ ಆಯ್ಕೆ ಪ್ರಕ್ರಿಯೆ ಮೊದಲ ದಿನ ಸುಗಮವಾಗಿ ಆರಂಭಗೊಂಡಿತು. ಸೆ.20ರವರೆಗೆ 20 ದಿನಗಳ ಕಾಲ ನೇಮಕಾತಿ ರ‍್ಯಾಲಿ ನಡೆಯಲಿದೆ.

ಮೊದಲ ದಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 1252 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಎರಡನೇ ದಿನವಾದ ಶುಕ್ರವಾರ ಧಾರವಾಡ ಜಿಲ್ಲೆಯ 2538 ಅಭ್ಯರ್ಥಿಗಳು ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಗ್ನಿಪಥ್ ನೇಮಕಾತಿ ಆಯ್ಕೆ ಪ್ರಕ್ರಿಯೆ ಹಾಗೂ ವ್ಯವಸ್ಥೆ ಕುರಿತಂತೆ ಗುರುವಾರ ಬೆಳಿಗ್ಗೆ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

58 ಸಾವಿರ ಅಭ್ಯರ್ಥಿಗಳ ನೋಂದಣಿ:

ನಂತರ ಮಾತನಾಡಿ, ‘ಅಗ್ನಿವೀರರ ಆಯ್ಕೆಗಾಗಿ ರಾಜ್ಯದ 11 ಜಿಲ್ಲೆಗಳಿಂದ 58,218 ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಪ್ರತಿದಿನ ಯಾವ ಯಾವ ಜಿಲ್ಲೆ ಯಾವ ಅಭ್ಯರ್ಥಿಗಳು ಹಾಜರಾಗಬೇಕು ಎಂಬ ಮಾಹಿತಿಯನ್ನು ನೇಮಕಾತಿ ಪ್ರಾಧಿಕಾರದಿಂದ ಮಾಹಿತಿ ನೀಡಲಾಗಿದೆ.

ಮೊದಲ ದಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 1857 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 1225 ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. 104 ಜನ 1600 ಮೀಟರ್‌ ಓಟದ ಸ್ಪರ್ಧೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ಸುತ್ತಿನ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಈ ಅಭ್ಯರ್ಥಿಗಳಿಗೆ ಶುಕ್ರವಾರ ಬೆಳಿಗ್ಗೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ.ಜಿಲ್ಲಾಡಳಿತದಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ. ಪ್ರತಿ ದಿನ ಬೆಳಿಗ್ಗೆ 4 ಗಂಟೆಯಿಂದಲೇ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ ಎಂದು ತಿಳಿಸಿದರು.

ಮೆಚ್ಚುಗೆ:

ಭಾರತೀಯ ಸೇನೆಗೆ ಕರ್ನಾಟಕದಿಂದ ಹೆಚ್ಚು ಜನ ಆಯ್ಕೆಯಾಗಬೇಕು. ದೇಶ ಸೇವೆಗೆ ಸೇರುವ ಅಭ್ಯರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾವೇರಿಯ ಸಂಘ-ಸಂಸ್ಥೆಗಳು, ಕಲ್ಯಾಣ ಮಂಟಪ, ಸಮುದಾಯ ಭವನದ ಮಾಲೀಕರು, ಸಾರ್ವಜನಿಕರು ಉಚಿತವಾಗಿ ವಸತಿ ಸೌಕರ್ಯ ನೀಡಲು ಹಾಗೂ ಊಟ-ಉಪಹಾರ ನೀಡಲು ಮುಂದೆ ಬಂದಿದ್ದಾರೆ. ಈ ಎಲ್ಲರೂ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸೇನಾ ನೇಮಕಾತಿ ವಿಭಾಗದ ಕರ್ನಲ್ ಅನುಜ್ ಗುಪ್ತಾ, ಮೇಜರ್ ಅನಿಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಲತಾ ಇದ್ದರು.

ಉಚಿತ ಊಟ:

ಸೇವಾ ಭಾರತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ರ್‍ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಬೆಳಿಗ್ಗೆ 8 ಗಂಟೆಯಿಂದ 10-30 ರವರೆಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ.

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆಗೆ ಜಿಲ್ಲಾಡಳಿತದ ವ್ಯವಸ್ಥೆಗೆ ಸೇನಾ ನೇಮಕಾತಿ ಮಂಗಳೂರು ನಿರ್ದೇಶನಾಲಯ ವಿಭಾಗದ ಕರ್ನಲ್ ಅನುಜ್ ಗುಪ್ತಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಸಹಾಯವಾಣಿ ಕೇಂದ್ರ

ಹಾವೇರಿ: ಹಾವೇರಿ ನಗರದಲ್ಲಿ ನಡೆಯುತ್ತಿರುವ ಅಗ್ನಿಪಥ ನೇಮಕಾತಿ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಮೂಲಸೌಕರ್ಯಗಳಾದ ವಸತಿ, ಸಾರಿಗೆ ಹಾಗೂ ಇನ್ನಿತರ ಮಾಹಿತಿ ನೀಡಲು ಹಾವೇರಿ ನಗರದ ರೈಲು ಹಾಗೂ ಬಸ್ ನಿಲ್ದಾಣದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಪ್ರವೀಣ ಕೆಂಪಳ್ಳೇರ (ಮೊ:8748010905) ಹಾಗೂ ನವೀನಕುಮಾರ (ಮೊ:809979988) ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಎಸ್.ಟಿ.ಮಹೇಂದ್ರಕರ (ಮೊ:8971665966) ಹಾಗೂ ಮುತ್ತಣ್ಣ ತಿಪ್ಪಣ್ಣನವರ (ಮೊ:9482931249) ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸೆ.1 ರಿಂದ 20ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.

ಬಸ್ ನಿಲ್ದಾಣದಲ್ಲಿ ಮುರಳೀಧರ ಎಸ್.ಬಿ.(ಮೊ: 7353704637) ಹಾಗೂ ಕೃಷ್ಣ ಲಮಾಣಿ(ಮೊ: 9164834951) ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸೆ.1 ರಿಂದ 20ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.