ADVERTISEMENT

Haveri Accident | 13 ಜನ ದುರ್ಮರಣ; ಕುಟುಂಬದವರ ಕಣ್ಣೀರು ಕಂಡು ಮರುಗಿದ ಜನ

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ, ಮೃತದೇಹ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:39 IST
Last Updated 28 ಜೂನ್ 2024, 15:39 IST
ಹಾವೇರಿ ಜಿಲ್ಲಾಸ್ಪತ್ರೆ ಎದುರು ಸೇರಿದ್ದ ಸಂಬಂಧಿಕರು
ಹಾವೇರಿ ಜಿಲ್ಲಾಸ್ಪತ್ರೆ ಎದುರು ಸೇರಿದ್ದ ಸಂಬಂಧಿಕರು   

ಹಾವೇರಿ: ಶವಾಗಾರದೊಳಗೆ ಸಾಲಾಗಿ ಜೋಡಿಸಿಟ್ಟಿದ್ದ ಮೃತದೇಹಗಳು. ಶವಾಗಾರದ ಹೊರಗೆ ಕುಟುಂಬದವರು ಹಾಗೂ ಸಂಬಂಧಿಕರ ಆಕ್ರಂದನ. ಭೀಕರ ಅಪಘಾತದ ಸುದ್ದಿ ಕೇಳಿ ಆಸ್ಪತ್ರೆ ಎದುರು ಜಮಾಯಿಸಿದ್ದ ಜನ. ಆಸ್ಪತ್ರೆಗೆ ದಾಖಲಾಗಿದ್ದವರನ್ನು ಉಳಿಸಲು ವೈದ್ಯರಿಂದ ನಿರಂತರ ಚಿಕಿತ್ಸೆ....

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು. ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಕ್ರಾಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ವಾಹನಗಳಲ್ಲಿ ಆಸ್ಪತ್ರೆಗೆ ತರಲಾಯಿತು. ಸುದ್ದಿ ತಿಳಿದ ಸಂಬಂಧಿಕರು, ತಂಡೋಪತಂಡವಾಗಿ ಆಸ್ಪತ್ರೆಗೆ ಬಂದು ಕಣ್ಣೀರು ಹಾಕಿದರು.

ಮೃತಪಟ್ಟವರ ಕುಟುಂಬದವರು ಹಾಗೂ ಸಂಬಂಧಿಕರ ಆಕ್ರಂದನ ಕಂಡು ಹಾವೇರಿ ಜನರೂ ಮರುಗಿದರು. ಜಿಲ್ಲಾಸ್ಪತ್ರೆಯಲ್ಲಿ ನೆರೆದಿದ್ದ ಬಹುತೇಕರ ಕಣ್ಣುಗಳು ಒದ್ದೆಯಾಗಿದ್ದವು. ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯರು ಸಹ, ಸ್ಥಳದಲ್ಲಿದ್ದ ಸನ್ನಿವೇಶ ಕಂಡು ಮರುಗಿದರು.

ADVERTISEMENT

‘ಹೊಸ ಟಿ.ಟಿ. ವಾಹನ ತೆಗೆದುಕೊಂಡಿದ್ದಕ್ಕೆ ದೇವರಿಗೆ ಹೋಗಿ ಬರುತ್ತೇನೆಂದು ಆದರ್ಶ ಹೋಗಿದ್ದ. ಆದರೆ, ವಾಪಸು ಬರಲೇ ಇಲ್ಲ. ಆದರ್ಶ, ಕುಟುಂಬ ಹಾಗೂ ಸಂಬಂಧಿಕರು ಎಂದರೆ ಹೆಚ್ಚು ಇಷ್ಟ. ಅದಕ್ಕೆ ಅವನು ಎಲ್ಲರನ್ನೂ ಕರೆದುಕೊಂಡು ಹೋಗಿದ್ದ’ ಎಂದು ಸಂಬಂಧಿ ಶಂಕರ್ ಹೇಳಿದರು.

‘ಚಾಲಕನ ನಿರ್ಲಕ್ಷ್ಯತನದಿಂದ ರಸ್ತೆ ಮೇಲೆ ಲಾರಿ ನಿಲ್ಲಿಸಿದ್ದ. ಈತನ ಎಡವಟ್ಟಿನಿಂದಲೇ ಈ ಅಪಘಾತ ಸಂಭವಿಸಿದೆ. ನಮ್ಮ 13 ಜೀವಗಳು ಹೋಗಿವೆ. ಆದರ್ಶ ಕುಟುಂಬದಲ್ಲಿ ತಂಗಿ ಮಾತ್ರ ಬದುಕುಳಿದಿದ್ದು, ಆಕೆಯೂ ಅಂಗವಿಕಲೆ’ ಎಂದು ಕಣ್ಣೀರಿಟ್ಟರು.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಹಾಗೂ ಹಾವೇರಿಯ ಹಲವು ರಾಜಕೀಯ ಮುಖಂಡರು ಸ್ಥಳಕ್ಕೆ ಬಂದಿದ್ದರು. ಮರಾಠ ಸಮುದಾಯದ ಮುಖಂಡರೂ ಆಸ್ಪತ್ರೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

‘ಒಂದೇ ಮನೆತನದ 13 ಮಂದಿ ಮೃತಪಟ್ಟಿದ್ದಕ್ಕೆ ಗ್ರಾಮವೇ ಶೋಕದಲ್ಲಿದೆ. ಕೆಲವರು ಮೃತಪಟ್ಟಿದ್ದರಿಂದ, ಅವರ ಕುಟುಂಬವೇ ಬೀದಿಗೆ ಬಂದಿದೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರಿ ನೌಕರಿ ಕೊಡಿಸಬೇಕು’ ಎಂದು ಭದ್ರಾವತಿ ತಾಲ್ಲೂಕು ಮರಾಠ ಸಮಾಜದ ಅಧ್ಯಕ್ಷರೂ ಅಗಿರುವ ವಕೀಲ ಲೋಕೇಶ ಆಗ್ರಹಿಸಿದರು.

ನಾಲ್ವರನ್ನು ರಕ್ಷಿಸಿದ ಆಂಬುಲೆನ್ಸ್ ಸಿಬ್ಬಂದಿ: ‘ಅಪಘಾತದ ಮಾಹಿತಿ ಬರುತ್ತಿದ್ದಂತೆ 108 ಆಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಅಷ್ಟರಲ್ಲೇ 11 ಮಂದಿ ಮೃತಪಟ್ಟಿದ್ದರು. ಉಳಿದ 4 ಜನರನ್ನು ಅವರೇ ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಸಮಯ ಪ್ರಜ್ಞೆಯಿಂದ ಜೀವ ಉಳಿದಿದೆ’ ಎಂದು ಹೇಳಿದರು.

ಎಡಿಜಿಪಿ ಅಲೋಕಕುಮಾರ್ ಭೇಟಿ

ಗುಡೇನಹಳ್ಳಿ ಕ್ರಾಸ್‌ನಲ್ಲಿ ಸಂಭವಿಸಿದ ಅಪಘಾತ ಸ್ಥಳಕ್ಕೆ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಶುಕ್ರವಾರ ಸಂಜೆ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಡೆಸಿದ ಅವರು ಅಪಘಾತ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡರು.

'ರಸ್ತೆಯಲ್ಲಿ ಸಿಗ್ನಲ್ ಫಲಕಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಬೇಕು. ರಾತ್ರಿ ಚಾಲನೆ ವೇಳೆ ಎಚ್ಚರಿಕೆ ವಹಿಸುವಂತೆ ಚಾಲಕರಿಗೆ ಜಾಗೃತಿ ಮೂಡಿಸಬೇಕು. ಅತೀ ವೇಗ ಹಾಗೂ ಮದ್ಯ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಬೇಕು' ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.