ಹಾವೇರಿ: ‘ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿಗ್ಗಾವಿ ತಾಲ್ಲೂಕು ಕಲ್ಯಾಣ ಗ್ರಾಮದಲ್ಲಿ ಭಾನುವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕಲ್ಯಾಣ ಗ್ರಾಮದ ಜಿಟಿಟಿಸಿ ನಿವೇಶನದ ಬಳಿ ಆಯೋಜಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸಂಕೀರ್ಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಮಾಹಿತಿ ಪ್ರಾವಿಡೆಂಟ್ ಫಂಡ್ ಮತ್ತು ಇಎಸ್‌ಐನಲ್ಲಿ ದಾಖಲಾಗಿರುವ 18ರಿಂದ 25 ವರ್ಷಗಳೊಳಗಿನವರು ದಾಖಲಿಸಿಕೊಂಡಿರುವುದನ್ನು ಆಧರಿಸಿ, ಅಧ್ಯಯನ ಮಾಡಿ ಮಾಹಿತಿ ನೀಡಲಾಗಿದೆ ಎಂದರು.
ಅನುತ್ತೀರ್ಣರಾದವರಿಗೂ ಅವಕಾಶ:
ಕೇವಲ ಇಂಜಿನಿಯರಿಂಗ್, ಐ.ಟಿ– ಬಿಟಿ ಕಲಿತವರಿಗಷ್ಟೇ ಅಲ್ಲ, ಪಿಯುಸಿ ಅನುತ್ತೀರ್ಣರಾದವರಿಗೆ ಕೆಲಸ ದೊರೆಯಬೇಕು, ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹಲವು ಯೋಜನೆ ರೂಪಿಸಲಾಗಿದೆ. ಶಿಗ್ಗಾವಿ ಹಾಗೂ ಸವಣೂರು ಐಟಿಐ ಕಾಲೇಜುಗಳನ್ನು ತಲಾ ₹3 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಕೌಶಲಾಭಿವೃದ್ದಿ, ತರಬೇತಿಯನ್ನು ಎಲ್ಲಾ ಸಂಸ್ಥೆಗಳಲ್ಲಿಯೂ ದೊರೆಯುವಂತಾಗಬೇಕೆನ್ನುವ ಕನಸು ನನ್ನದು ಎಂದರು.
10 ಸಾವಿರ ಜನರಿಗೆ ಉದ್ಯೋಗ:
₹73 ಕೋಟಿ ಮೊತ್ತದಲ್ಲಿ ಜಿಟಿಟಿಸಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್,ಅಲ್ಪಾವಧಿ, ಸರ್ಟಿಫಿಕೇಟ್ ಕೋರ್ಸುಗಳು ಲಭ್ಯವಿವೆ.ಜವಳಿ ಪಾರ್ಕ್, ಪಶು ವೈದ್ಯಕೀಯ ಪಾಲಿಟೆಕ್ನಿಕ್ ಬರುತ್ತಿದ್ದು, ಜವಳಿ ಪಾರ್ಕಿನಲ್ಲಿಯೇ 10 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದನ್ನು ಹೊರತುಪಡಿಸಿ 5 ಸಾವಿರ ಜನರಿಗೆ ಗಾರ್ಮೆಂಟ್ ಗಳಲ್ಲಿ ಕೆಲಸ ದೊರೆಯುತ್ತದೆ. ಯುವಕರಿಗೆ ಉದ್ಯೋಗದ ಭಿವಿಷ್ಯ ಬರೆಯಲು ಕಾರ್ಯಕ್ರಮ ರೂಪಿಸಿದ್ದು ಇದರ ಪ್ರಯೋಜನವನ್ನು ಯುವಕರು ಪಡೆಯಬೇಕು ಎಂದರು.
ಸ್ಕಿಲ್ ಇಂಡಿಯಾ:
ಭಾರತಕ್ಕೆ ಕೌಶಲವಿರುವ ಯುವಕರು ಅಗತ್ಯ ಎಂಬುದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಕಿಲ್ ಇಂಡಿಯಾ’ ಯೋಜನೆ ಪ್ರಾರಂಭಿಸಿದರು. ರಾಜ್ಯದಲ್ಲಿ 1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ ನೀಡಲಾಗಿದೆ ಎಂದರು.
ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಎಲ್ಲ ಸಮುದಾಯದವರಿಗೆ ಮೀಸಲಾತಿ ನ್ಯಾಯಯುತವಾಗಿ ಸಿಗಬೇಕು ಎಂದು ಬಸವರಾಜ ಬೊಮ್ಮಾಯಿ ಅವರು ಜೇನುಗೂಡಿಗೆ ಕೈ ಹಾಕಿ, ಚಾಣಾಕ್ಷತನದಿಂದ ಮೀಸಲಾತಿಯ ಸಿಹಿಯನ್ನು ಸರ್ವರಿಗೂ ನೀಡಿದ್ದಾರೆ. ಈ ವಿಷಯದಲ್ಲಿ ವಿರೋಧ ಪಕ್ಷದವರು ಗಲಾಟೆ ಮಾಡಿಸಲು ಸಿದ್ಧರಿದ್ದರು. ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಲು ಅವಕಾಶ ಇಲ್ಲದಂತೆ ಮೀಸಲಾತಿ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಶಿವನಾಂದ ಮ್ಯಾಗೇರಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಹ.ರಾಘವೇಂದ್ರ ಹಾಗೂ ಜಿಟಿಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.