ADVERTISEMENT

ಹಾವೇರಿ ಜಿಲ್ಲೆಯಲ್ಲಿ 20,139 ಅನಕ್ಷರಸ್ಥರ ಗುರುತು

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ \ ಸಾಕ್ಷರತಾ ವಿಶೇಷ ತರಗತಿ ಆಯೋಜನೆಗೆ ಸಿದ್ಧತೆ

ಸಂತೋಷ ಜಿಗಳಿಕೊಪ್ಪ
Published 26 ನವೆಂಬರ್ 2024, 3:56 IST
Last Updated 26 ನವೆಂಬರ್ 2024, 3:56 IST
ಹಾವೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆಸಿದ್ದ ವಿಶೇಷ ತರಗತಿಯಲ್ಲಿ ಪಾಲ್ಗೊಂಡು ಅಕ್ಷರ ಅಭ್ಯಾಸದಲ್ಲಿ ತೊಡಗಿದ್ದ ಅನಕ್ಷರಸ್ಥ ಮಹಿಳೆಯರು
ಹಾವೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆಸಿದ್ದ ವಿಶೇಷ ತರಗತಿಯಲ್ಲಿ ಪಾಲ್ಗೊಂಡು ಅಕ್ಷರ ಅಭ್ಯಾಸದಲ್ಲಿ ತೊಡಗಿದ್ದ ಅನಕ್ಷರಸ್ಥ ಮಹಿಳೆಯರು   

ಹಾವೇರಿ: ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಓದು– ಬರಹ ತಿಳಿಯದ 20,139 ಅನಕ್ಷರಸ್ಥರನ್ನು ಗುರುತಿಸಲಾಗಿದ್ದು, ಅವರಿಗೆ ಸಾಕ್ಷರತಾ ತರಗತಿಗಳನ್ನು ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.

ಜಿಲ್ಲೆಯಲ್ಲಿರುವ ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕೆಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಅನ್ವಯ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿರುವ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿಗಳು, ಅನಕ್ಷರಸ್ಥರ ಮಾಹಿತಿ ಸಂಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಯೋಜನೆಯ ಮಾನದಂಡಕ್ಕೆ ಅನುಗುಣವಾಗಿ 12,612 ಅನಕ್ಷರಸ್ಥರನ್ನು ಪತ್ತೆ ಮಾಡಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಕಾರ್ಯಕ್ರಮದ ಮಾನದಂಡಗಳ ಪ್ರಕಾರ, 7,527 ಅನಕ್ಷರಸ್ಥರನ್ನು ಗುರುತಿಸಲಾಗಿದೆ.

ADVERTISEMENT

ಜಿಲ್ಲೆಯ ಹಾವೇರಿ, ಹಾನಗಲ್, ರಾಣೆಬೆನ್ನೂರು, ಶಿಗ್ಗಾವಿ, ಸವಣೂರು, ಹಿರೇಕೆರೂರು, ಬ್ಯಾಡಗಿ ತಾಲ್ಲೂಕು ವ್ಯಾಪ್ತಿಯಲ್ಲಿರುವ 28 ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿಯೂ ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.

‘ಹಾವೇರಿ ಜಿಲ್ಲೆಯನ್ನು 2027ರ ಹೊತ್ತಿಗೆ ‘ಅನಕ್ಷರಸ್ಥ ಮುಕ್ತ ಜಿಲ್ಲೆ’ಯನ್ನಾಗಿ ಮಾಡುವ ಗುರಿ ಇದೆ. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ, ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಅಕ್ಷರ ಕಲಿಸುವ ಕೆಲಸ ನಡೆಯುತ್ತಿದೆ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ (ಪ್ರಭಾರ) ಬಿ.ಎಂ. ಬೇವಿನಮರದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯ ಸಿಬ್ಬಂದಿ, 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿದ್ದಾರೆ. ಅಕ್ಷರಸ್ಥರು ಹಾಗೂ ಅನಕ್ಷರಸ್ಥರ ದತ್ತಾಂಶ ಪಡೆದುಕೊಂಡಿದ್ದಾರೆ. ಕನ್ನಡ ಓದಲು ಹಾಗೂ ಬರೆಯಲು ಬಾರದ 20,139 ಅನಕ್ಷರಸ್ಥರ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

ವಿಶೇಷ ತರಗತಿಗಳಲ್ಲಿ ಪಾಠ: ‘ರೈತರು, ಗೃಹಿಣಿಯರು, ಕೂಲಿ ಕಾರ್ಮಿಕರು ಹಾಗೂ ಶ್ರಮಿಕರು ಹೆಚ್ಚಾಗಿ ಅನಕ್ಷರಸ್ಥರಾಗಿದ್ದಾರೆ. ಇವರೆಲ್ಲರೂ ನಿತ್ಯವೂ ಹಗಲಿನಲ್ಲಿ ದುಡಿಮೆ ಮಾಡುತ್ತಿದ್ದಾರೆ. ಇವರಿಗೆ ಕನ್ನಡ ಓದಲು ಹಾಗೂ ಬರೆಯಲು ಕಲಿಸಬೇಕಿದೆ. ಹೀಗಾಗಿ, ಅನಕ್ಷರಸ್ಥರ ಅನುಕೂಲಕ್ಕೆ ತಕ್ಕ ಸಮಯದಲ್ಲಿ ವಿಶೇಷ ತರಗತಿ ನಡೆಸಲಾಗುತ್ತದೆ’ ಎಂದು ಬೇವಿನಮರದ ತಿಳಿಸಿದರು.

‘ಅನಕ್ಷರಸ್ಥರಿಗೆ ಅಕ್ಷರ ಕಲಿಸಿದ ನಂತರ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಪರೀಕ್ಷೆ ನಡೆಸಲಾಗುತ್ತದೆ. ಅನಕ್ಷರಸ್ಥರು ಇದಕ್ಕೆ ನೋಂದಣಿ ಮಾಡಿಕೊಳ್ಳಬೇಕು. ನಂತರ, ಪರಿಣಿತ ಬೋಧಕರ ಮೂಲಕ ಅನಕ್ಷರಸ್ಥರಿಗೆ ಪಾಠ ಮಾಡಲಾಗುತ್ತದೆ’ ಎಂದು ಹೇಳಿದರು.

‘ನಿತ್ಯದ ಜೀವನಕ್ಕೆ ಅಗತ್ಯವಿರುವಷ್ಟು ಕನ್ನಡ ಓದಲು ಹಾಗೂ ಬರೆಯಲು ಕಲಿಸಲಾಗುತ್ತದೆ. ಸಹಿ ಮಾಡುವುದು ಹಾಗೂ ಕುಟುಂಬದವರ ಹೆಸರುಗಳನ್ನು ಬರೆಯುವುದನ್ನು ಹೇಳಿಕೊಡಲಾಗುತ್ತದೆ. ಅ, ಆ, ಇ, ಈ ವರ್ಣಮಾಲೆ ಹಾಗೂ ಸಾಮಾನ್ಯ ಕನ್ನಡದ ಬಗ್ಗೆ ತಿಳಿಸಲಾಗುತ್ತದೆ. ಲೆಕ್ಕ ಮಾಡುವುದು ಹಾಗೂ ಸಾಮಾನ್ಯ ಜ್ಞಾನದ ವಿಷಯಗಳ ಬಗ್ಗೆಯೂ ಪಾಠ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲೆಯ ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕು. ಸಮೀಕ್ಷೆ ಮೂಲಕ ಗುರುತಿಸಿರುವ ಅನಕ್ಷರಸ್ಥರಿಗೆ ಓದು–ಬರಹ ಹೇಳಲು ಬೋಧಕರನ್ನು ನಿಯೋಜಿಸಿ ವಿಶೇಷ ತರಗತಿ ನಡೆಸಲಾಗುವುದು.
ಬಿ.ಎಂ. ಬೇವಿನಮರದ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ (ಪ್ರಭಾರ)

‘ಸಾಕ್ಷರತಾ ತರಗತಿಗಳ ನಂತರ, ಅನಕ್ಷರಸ್ಥರು ಪರೀಕ್ಷೆ ಎದುರಿಸಬೇಕು. ಸಾಮಾನ್ಯ ರೂಪದಲ್ಲಿರುವ ಪರೀಕ್ಷೆಯಲ್ಲಿ ಬಹುತೇಕರು ಉತ್ತೀರ್ಣವಾಗುತ್ತಾರೆ. ಅಕ್ಷರ ಓದಲು ಹಾಗೂ ಬರೆಯುವುದನ್ನು ಕಲಿಯಲು ‘ಸವಿ ಬರಹ’ ಹಾಗೂ ‘ಬಾಳಿಗೆ ಬೆಳಕು’ ಪುಸ್ತಕಗಳನ್ನು ನೀಡಲಾಗುತ್ತದೆ’ ಎಂದು ಬೇವಿನಮರದ ಹೇಳಿದರು.

3,906 ಅನಕ್ಷರಸ್ಥರಲ್ಲಿ ಬಹುತೇಕರು ಉತ್ತೀರ್ಣ: ‘ಹಾವೇರಿ ಜಿಲ್ಲೆಯಲ್ಲಿ ಈ ಹಿಂದೆ 3,806 ಅನಕ್ಷರಸ್ಥರನ್ನು ಗುರುತಿಸಿ ವಿಶೇಷ ತರಗತಿ ನಡೆಸಲಾಗಿತ್ತು. ಈ ಪೈಕಿ ಬಹುತೇಕರು, ಪರೀಕ್ಷೆ ಉತ್ತೀರ್ಣವಾಗಿದ್ದಾರೆ. ಸಹಿ ಮಾಡುವುದನ್ನು ಹಾಗೂ ನಿತ್ಯದ ಅಗತ್ಯಕ್ಕೆ ತಕ್ಕಂತೆ ಓದಲು– ಬರೆಯಲು ಕಲಿತಿದ್ದಾರೆ’ ಎಂದು ಬೇವಿನಮರದ ತಿಳಿಸಿದರು.

‘ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು, ಅನಕ್ಷರಸ್ಥರನ್ನು ಗುರುತಿಸಲು ಕೆಲ ಮಾನದಂಡಗಳನ್ನು ರೂಪಿಸಿದೆ. ಅದರನ್ವಯ ಸದ್ಯಕ್ಕೆ 20,139 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರಿದ್ದಾರೆ. ಎಲ್ಲರನ್ನೂ ಕ್ರಮೇಣ ಗುರುತಿಸಿ, ಓದು–ಬರಹ ಕಲಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.