ADVERTISEMENT

ಬೆಳ್ಳುಳ್ಳಿ ಕ್ವಿಂಟಲ್‌ಗೆ ₹25 ಸಾವಿರ ದರ: ಹರ್ಷ

ಬೆಳ್ಳುಳ್ಳಿ ಬೆಳೆಗೆ ಉತ್ತಮ ದರ: ರೈತರ ಮುಖದಲ್ಲಿ ಮಂದಹಾಸ

ಮುಕ್ತೇಶ ಕೂರಗುಂದಮಠ
Published 8 ಅಕ್ಟೋಬರ್ 2024, 5:22 IST
Last Updated 8 ಅಕ್ಟೋಬರ್ 2024, 5:22 IST
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ ರೈತ ರೈತ ಮೈಲಾರಪ್ಪ ನಾಗಪ್ಪ ಬಡಪ್ಪನವರ ಅವರು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ಕಣದಲ್ಲಿ ಗೂಡು ಹಾಕಿದ್ದಾರೆ
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ ರೈತ ರೈತ ಮೈಲಾರಪ್ಪ ನಾಗಪ್ಪ ಬಡಪ್ಪನವರ ಅವರು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ಕಣದಲ್ಲಿ ಗೂಡು ಹಾಕಿದ್ದಾರೆ   

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಬೆಳ್ಳುಳ್ಳಿ ಬೆಳೆ ಕಟಾವಿಗೆ ಬಂದಿದೆ. ಮುಂಗಾರು ಮಳೆ ಹದವಾಗಿದ್ದರಿಂದ ಈ ಬಾರಿ ಬೆಳ್ಳುಳ್ಳಿ ಬೆಳೆ ಉತ್ತಮ ಇಳುವರಿ ಬಂದಿದೆ.

ಮನೆಮಂದಿಗೆಲ್ಲ ಬೆಳ್ಳುಳ್ಳಿಗೆ ಹತ್ತಿದ ಮಣ್ಣು ಬೇರ್ಪಡಿಸುವ ಮತ್ತು ಜುಟ್ಟು ತೆಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಎಲ್ಲ ಕಡೆ ಬೆಳ್ಳುಳ್ಳಿಯನ್ನು ಕಟಾವು ಮಾಡಿ, ಕಣದಲ್ಲಿ ಮತ್ತು ಮನೆ ಆವರಣದಲ್ಲಿ ಒಣಗಲು ಗೂಡು ಮತ್ತು ಬಣವೆ ಹಾಕಿದ್ದು ಕಾಣ ಸಿಗುತ್ತದೆ. ಈ ಬಾರಿ ಇಳುವರಿ ಕೂಡ ಚೆನ್ನಾಗಿದ್ದು, ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 25 ಸಾವಿರ ದರ ಹೆಚ್ಚಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಬೇಸಿಗೆ ಬೆಳೆ ಬೆಳೆಯಾಗಿ ಬೆಳ್ಳುಳ್ಳಿಯನ್ನು ಬೆಳೆಯಲು ವಿಜಯಪುರ, ಬೆಳಗಾವಿ, ಚಿತ್ರದುರ್ಗ ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೆಲ ಜಿಲ್ಲೆಗಳ ವ್ಯಾಪಾರಸ್ಥರು ಬಿತ್ತನೆ ಬೀಜಕ್ಕೆ ಬೆಳ್ಳುಳ್ಳಿ ಖರೀದಿದಾರರು ಹೆಚ್ಚಾಗಿದ್ದರಿಂದ ಬೆಳ್ಳುಳ್ಳಿ ಬಿತ್ತನೆಗೆ ಬೇಡಿಕೆ ಹೆಚ್ಚಾಗಿದೆ.

ADVERTISEMENT

ಇಳುವರಿ ಉತ್ತಮವಾಗಿದ್ದು, ಕಳ್ಳತನವಾಗಬಹುದು ಎಂದು ಒಣಗಲು ಹಾಕಿದ ಗೂಡುಗಳನ್ನು ಜತನದಿಂದ ಕಾಯುತ್ತಿದ್ದಾರೆ. ಕಳೆದ ವರ್ಷ ದರ ಹೆಚ್ಚಾಗಿದ್ದಕ್ಕೆ ಹಲಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೆಳ್ಳುಳ್ಳಿ ಕಳ್ಳತನವಾದ ಪ್ರಕರಣ ಹೆಚ್ಚಾಗಿದ್ದವು. ಹಗಲು ರಾತ್ರಿ ಹೊತ್ತು ಕಾಯ್ದರು. ತಾಲ್ಲೂಕಿನ ಕುಪ್ಪೇಲೂರು, ರಾಣೆಬೆನ್ನೂರು ಮತ್ತು ಮೇಡ್ಲೇರಿ ಹೋಬಳಿಯಲ್ಲಿ ಹೆಚ್ಚಾಗಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ.

ಅ.6 ರಂದು ರಾಣೆಬೆನ್ನೂರಿನ ಎಪಿಎಂಸಿ ಉಪ ಪ್ರಾಂಗಣದ ಮಾರುಕಟ್ಟೆಯಲ್ಲಿ ಭಾನುವಾರ ಸಂತೆ ದಿನ 1500 ಕ್ಕೂ ಹೆಚ್ಚು ಚೀಲ ಬೆಳ್ಳುಳ್ಳಿ ಆವಕವಾಗಿತ್ತು. ಬೆಳ್ಳುಳ್ಳಿ ದರ ದಪ್ಪ ಕ್ವಿಂಟಲ್‌ಗೆ ₹ 18 ಸಾವಿರದಿಂದ ₹ 25 ಸಾವಿರ, ಸಣ್ಣದು ಕ್ವಿಂಟಲ್‌ಗೆ ₹ 20 ಸಾವಿರದಿಂದ ₹ 21 ಸಾವಿರ, ಪುಡಿ ಬೆಳ್ಳುಳ್ಳಿ ಕ್ವಿಂಟಲ್‌ಗೆ ₹ 15 ಸಾವಿರದಿಂದ ₹ 19 ಸಾವಿರ ದರ ಇದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಇಟಿಗಿ, ಅಸುಂಡಿ, ಹೆಡಿಯಾಲ, ಜೋಯಿಸರಹರಳಹಳ್ಳಿ, ಉಕ್ಕುಂದ, ಸರ್ವಂದ, ಆರೇಮಲ್ಲಾಪುರ, ರಡ್ಡಿಯಲ್ಲಾಪುರ, ಹಲಗೇರಿ, ಕುಪ್ಪೇಲೂರ ಭಾಗದಲ್ಲಿ ಬೆಳ್ಳುಳ್ಳಿ ಇಳುವರಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಮಾಲಿಗೆ ತಕ್ಕಂತೆ ಉತ್ತಮ ಬೆಲೆಯೂ ಸಿಕ್ಕಿದೆ ಎನ್ನುತ್ತಾರೆ ವ್ಯಾಪಾರಸ್ಥರು.

‘ನಾನು 2.5 ಎಕರೆ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದೆ, ಬೀಜಗೊಬ್ಬರ, ಬಿತ್ತನೆ ಮಾಡುವುದು, ಕಳೆ, ಔಷಧಿ, ಕಟಾವು ಮಾಡುವುದು ಸೇರಿ ಒಟ್ಟು ₹ 80 ಸಾವಿರ ಖರ್ಚು ಮಾಡಿದ್ದೇವೆ. ಮಳೆ ಹೆಚ್ಚಾಗಿ ತೇವಾಂಶ ಹೆಚ್ಚಾಗಿ ರೋಗ ಬಾಧಿಸಿದ್ದರಿಂದ ಇಳುವರಿ ಸ್ವಲ್ಪ ಕಡಿಮಯಾಗಿದ್ದು, ಪೇಟೆಯಲ್ಲಿ ದರ ಉತ್ತಮವಾಗಿದ್ದರಿಂದ ಖರ್ಚು ತೆಗೆದು ₹ 3 ಲಕ್ಷ ಆದಾಯ ಬರುವ ನೀರಿಕ್ಷೆಯಿದೆ’ ಎಂದು ಹಲಗೇರಿಯ ರೈತ ಪ್ರಕಾಶ ದೇಸಾಯಿ ತಿಳಿಸಿದರು.

ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ ರೈತ ರೈತ ಮೈಲಾರಪ್ಪ ನಾಗಪ್ಪ ಬಡಪ್ಪನವರ ಅವರು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ಕಣದಲ್ಲಿ ಗೂಡು ಹಾಕಿದ್ದಾರೆ.
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ ರೈತರ ರಡ್ಡೇರ ಅವರ ಕಣದಲ್ಲಿ ಕುಟುಂಬದವರೆಲ್ಲ ಸೇರಿ ಬೆಳ್ಳುಳ್ಳಿ ಮಣ್ಣಿನಿಂದ ಬೇರ್ಪಡಿಸುತ್ತಿರುವು
ರಾಣೆಬೆನ್ನೂರಿನ ಎಪಿಎಂಸಿ ಉಪ ಪ್ರಾಗಂಣದಲ್ಲಿ ಭಾನುವಾರ ಸಂತೆ ದಿನ ಹರಾಜಾದ ಬೆಳ್ಳುಳ್ಳಿ ಚೀಲಗಳು

ಕಟಾವಿನ ನಂತರ ಗೂಡು ಹಾಕಿ ಒಣಗಿಸಬೇಕು ಬೇಸಿಗೆಯಲ್ಲಿ ಮಾರುಕಟ್ಟೆಗೆ ಬರುವ ಬಳ್ಳೊಳ್ಳಿ ವಿಜಯಪುರ, ಬೆಳಗಾವಿ ಬಳ್ಳೊಳ್ಳಿಗೆ ಬೇಡಿಕೆ

ಬೇಸಿಗೆ ಬಿತ್ತನೆಗೆ ಹೆಚ್ಚು ಬೇಡಿಕೆ ಇದೆ. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ರೈತರು ಬೇಸಿಗೆ ಬೆಳೆ ಬೆಳೆಯಲು ಬೀಜ ಖರೀದಿಸಲು ಮುಂದಾಗಿದ್ದಾರೆ
ಶಿವಣ್ಣ ನಂದೀಹಳ್ಳಿ ಜಗದೀಶ ಕಲಾಲ ಬಳ್ಳೊಳ್ಳಿ ವ್ಯಾಪಾರಸ್ಥರು
ಈ ಸಾರಿ ಕ್ವಿಂಟಲ್‌ಗೆ ₹ 25 ಸಾವಿರ ಬೆಲೆ ಇದೆ. ₹ 15 ಸಾವಿರದೊಳಗೆ ದರ ಸಿಕ್ಕರೆ ರೈತರಿಗೆ ಹಾನಿ ಆಗುತ್ತದೆ
ನಾಗಪ್ಪ ಬಡಪ್ಪನವರ ರೈತ

ಬಿತ್ತನೆ ಪ್ರದೇಶ ಕಡಿಮೆ: ದರ ದುಬಾರಿ ತಾಲ್ಲೂಕಿನ ಹಲಗೇರಿ ಎಪಿಎಂಸಿ ಉಪಪ್ರಾಂಗಣದಲ್ಲಿ ಗುರುವಾರ ಮತ್ತು ರಾಣೆಬೆನ್ನೂರಿನಲ್ಲಿ ಪ್ರತಿ ಭಾನುವಾರ ಸಂತೆದಿನ ಬೆಳ್ಳುಳ್ಳಿ ಮಾರುಕಟ್ಟೆ ಇರುತ್ತದೆ. ತಾಲ್ಲೂಕಿನಲ್ಲಿ ನಾಲ್ಕೈದು ವರ್ಷಗಳ ಹಿಂದೆ  2000ಕ್ಕೂ ಹೆಚ್ಚು ಹೆಕ್ಟೇರ್‌ ಬಿತ್ತನೆಯಾಗುತ್ತಿತ್ತು. ಮಳೆ ಹೆಚ್ಚಾಗಿ ಬೆಳೆ ಹಾನಿ ಸೂಕ್ತ ದರ ಸಿಗದ ಕಾರಣ ಬಿತ್ತನೆ ಏರಿಯಾ ಕಡಿಮೆಯಾಗಿದೆ. ಈ ವರ್ಷ 550 ಹೆಕ್ಟೇರ್‌ ಬೆಳ್ಳುಳ್ಳಿ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಪ್ರದೇಶ ಕಡಿಮೆಯಾಗಿದ್ದಕ್ಕೆ ಈ ಬಾರಿ ದರ ದುಬಾರಿಯಾಗಿದೆ. ನೂರಅಹ್ಮದ ಹಲಗೇರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

ಮೂರು ತಿಂಗಳ ಬೆಳೆ ‘ಪ್ರತಿ ವರ್ಷ ಮುಂಗಾರು ಹಂಗಾಮು ಮತ್ತು ಬೇಸಿಗೆಯಲ್ಲಿ ಎರಡು ಬಾರಿ 5 ಎಕರೆ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯುತ್ತೇವೆ. ಬಿತ್ತನೆ ಬೀಜ ನಾವೇ ಹಿಡಿದಿಟ್ಟುಕೊಳ್ಳುತ್ತೇವೆ. ಬೆಳ್ಳುಳ್ಳಿ 3 ತಿಂಗಳ ಬೆಳೆಯಾಗಿದೆ. ಬೀಜ ಗೊಬ್ಬರ ಕೂಲಿ ಆಳು ಸೇರಿದಂತೆ ಎಕರೆಗೆ ₹ 50 ರಿಂದ ₹ 60 ಸಾವಿರ ಖರ್ಚು ಬರುತ್ತದೆ. ಚೆನ್ನಾಗಿ ಬೆಳೆದರೆ ಎಕರೆಗೆ 15 ರಿಂದ 25 ಕ್ವಿಂಟಲ್‌ ಬೆಳ್ಳುಳ್ಳಿ ಇಳುವರಿ ಬೆಳೆಯಬಹುದು’ ಎನ್ನುತ್ತಾರೆ ಇಟಗಿ ಗ್ರಾಮದ ರೈತ ಮೈಲಾರಪ್ಪ ನಾಗಪ್ಪ ಬಡಪ್ಪನವರ. ‘ಬೆಳ್ಳುಳ್ಳಿ ಬೆಳೆಯನ್ನು ಕಾಟಾವು ಮಾಡಿದ ಮೇಲೆ ಮಳೆಗೆ ಕಾಪಿಟ್ಟುಕೊಳ್ಳಲು ವರ್ಷಕ್ಕೆ 30x40 ಸೈಜಿನ ₹ 7 ಸಾವಿರ ಕಿಮ್ಮತ್ತಿನ ಎರಡು ಮೂರು ಪ್ಲಾಸ್ಟಿಕ್‌ ತಾಡಪಲ್ಲುಗಳು ಬೇಕು. ಹಳ್ಳಿಗಳಲ್ಲಿ ಎರಡು ಮೂರು ತಿಂಗಳು ಬೆಳ್ಳುಳ್ಳಿ ದಾಸ್ತಾನು ಮಾಡಿಟ್ಟುಕೊಳ್ಳಲು ರೈತರಿಗೆ ಗೋದಾಮು ಇಲ್ಲ. ಕುಟುಂಬ ನಿರ್ವಹಣೆಗಾಗಿ ರೈತರು ಬೇಗ ಮಾರಾಟ ಮಾಡುತ್ತಾರೆ’ ಎಂದು ಇಟಗಿ ಗ್ರಾಮದ ಯುವ ರೈತ ದೇವರಾಜ ನಿಂಗಪ್ಪ ದೇವರಮನಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.