ಹಾವೇರಿ: ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರದ ಹಣ ಬಿಡುಗಡೆಗೆ ಆಗ್ರಹಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಸೆಗಣಿ ಎರಚಾಟ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಇಬ್ಬರು ಶಾಸಕರ ಸಹಿತ 45 ಮಂದಿಯನ್ನು ಬಂಧಿಸಿದ ಪೊಲೀಸರು, ಬಳಿಕ ಬಿಡುಗಡೆಗೊಳಿಸಿದರು.
‘ಮುಂಜಾಗ್ರತಾ ಕ್ರಮವಾಗಿ 45 ಮಂದಿಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಜಿಲ್ಲಾ ದಂಡಾಧಿಕಾರಿ (ಜಿಲ್ಲಾಧಿಕಾರಿ)ಭವನದ ಮುಂಭಾಗದಲ್ಲಿ ಅನಾಗರಿಕ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸಂಘಟಕರ ವಿರುದ್ಧ ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ಪ್ರತಿಬಂಧಕ ಕಾಯಿದೆ –1981 (Karnataka Open Places –Prevention of Disfigurement Act, 1981) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದರು.
‘ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಸ್ಥಳಕ್ಕೆ ಬಂದಿದ್ದರು.ಸೆಗಣಿ ಎರಚಾಟ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಾಪಾಸ್ ಕಳುಹಿಸಿದೆವು. ಬಳಿಕ, ಬಿಜೆಪಿ ಕಾರ್ಯಕರ್ತರು ನಡೆಸಿದ ತಳ್ಳಾಟದ ಸಂದರ್ಭದಲ್ಲಿ ಯಾರದೋ ಕೈಯಲ್ಲಿದ್ದ ಕೋಲೊಂದು ಶಾಸಕ ಬಸವರಾಜ ಬೊಮ್ಮಾಯಿ ಅವರ ಕಣ್ಣಿನ ಬಳಿ ಬಡಿದಿದೆ. ಯಾವುದೇ ಅಪಾಯ ಸಂಭವಿಸಿಲ್ಲ’ ಎಂದು ಅವರು ವಿವರಿಸಿದರು.
‘ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಳ್ಳಿದ ವೇಳೆಯಲ್ಲಿ ಅವರ ಲಾಠಿ ಬಡಿಯಿತು. ಆದರೆ, ಕಣ್ಣಿನ ಮೇಲ್ಭಾಗಕ್ಕೆ ಬಡಿದ ಕಾರಣ ಅಪಾಯವಾಗಿಲ್ಲ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಇದಕ್ಕೂ ಮೊದಲು ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಎತ್ತು, ಎಮ್ಮೆ, ಟೊಮೆಟೊ, ಸೆಗಣಿ, ಚಕ್ಕಡಿ ಮತ್ತಿತರ ಕೃಷಿ ಸಂಬಂಧಿತ ಸಲಕರಣೆಗಳು ಹಾಗೂ ಉತ್ಪನ್ನಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಶಾಸಕರಾದ ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ‘ಜಿಲ್ಲೆಯಲ್ಲಿ 2015–16 ಮತ್ತು 2016–17ನೇ ಸಾಲಿನ ಬೆಳೆ ವಿಮೆ ಮತ್ತು ಬೆಳೆನಷ್ಟ ಪರಿಹಾರದ ಹಣವನ್ನು ಇನ್ನೂ ಸಮರ್ಪಕವಾಗಿ ವಿತರಣೆ ಮಾಡಿಲ್ಲ. ಜಿಲ್ಲಾಡಳಿತವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬರದ ಛಾಯೆ ಮತ್ತೆ ಕಾಣುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.
ಆ ಬಳಿಕ, ಸೆಗಣಿ ಹಿಡಿದುಕೊಂಡು ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ವಾಗ್ವಾದ, ತಳ್ಳಾಟ ಉಂಟಾಗಿದ್ದು ಶಾಸಕ ಬಸವರಾಜ ಬೊಮ್ಮಾಯಿ ಅವರ ಕಣ್ಣಿನ ಅಂಚಿಗೆ ಸ್ವಲ್ಪ ಏಟು ಬಿತ್ತು. ಅಲ್ಲದೇ, ಸೆಗಣಿ ಎರಚಾಟ ನಡೆಸಬೇಡಿ ಎಂದು ವಿನಂತಿಸಲು ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಸಹಿತ ಇತರ ಅಧಿಕಾರಿಗಳ ಮೇಲೂ ಸೆಗಣಿ ರಾಚಿತು.
ಮುಖಂಡರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶ ಗೌಡ ಪಾಟೀಲ, ಮಹದೇವ ನಾಗಮ್ಮನವರ, ಡಾ. ಮಲ್ಲೇಶಪ್ಪ ಹರಿಜನ ಮಲ್ಲಿಕಾರ್ಜುನ ಹಾವೇರಿ, ಕರಬಸಪ್ಪ ಹಳದೂರ, ಲಲಿತಾ ಗುಂಡೇನಹಳ್ಳಿ, ಶೋಭಾ ನಿಸ್ಸೀಮಗೌಡ್ರ, ಪರಮೇಶ್ವರಪ್ಪ ಮೇಗಳಮನಿ, ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ಸುರೇಶ ಹೊಸ್ಮನಿ ಮತ್ತಿತರರು ಇದ್ದರು.
* *
ರಾಜ್ಯ ಸರ್ಕಾರವು ರೈತ ವಿರೋಧಿ ನಿಲುವು ಅನುಸರಿಸುತ್ತಿದ್ದು, ಫೆ.7ರಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸರಣಿ ಪ್ರತಿಭಟನೆ ನಡೆಸಲಾಗುವುದು
–ಶಿವರಾಜ ಸಜ್ಜನರ
ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.