ರಾಣೆಬೆನ್ನೂರು (ಹಾವೇರಿ ಜಿಲ್ಲೆ): ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಪ್ರತಿನಿಧಿಸುವ ರಾಣೆಬೆನ್ನೂರು ಕ್ಷೇತ್ರವು ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದೆ.
ಹಿರಿಯ ರಾಜಕಾರಣಿ, ವಿಧಾನ ಸಭಾ ಧ್ಯಕ್ಷ ಕೆ.ಬಿ. ಕೋಳಿವಾಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿಯೇ ದೊಡ್ಡದಿದ್ದು, ಕೊನೆ ಕ್ಷಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗಣನೀಯ ಮತ ಪಡೆದ ಆರ್. ಶಂಕರ್ ಈ ಬಾರಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಪ್ರಮುಖ ಪಕ್ಷಗಳಲ್ಲಿ ಸಂಚಲನ ಮೂಡಿಸಿದ್ದಾರೆ. ನಿವೃತ್ತ ಎಂಜಿನಿಯರ್, ತಾಲ್ಲೂಕಿನ ಮೈದೂರ ಗ್ರಾಮದ ಶ್ರೀಪಾದ ಸಾವುಕಾರ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಿದ್ದು, ಪ್ರಚಾರ ದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್‌ನಿಂದ ಕೋಳಿವಾಡ: ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಘೋಷಣೆ ಮಾಡಿದ್ದು, ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ.
ಇದಕ್ಕೂ ಮೊದಲು, ಅವರ ಪುತ್ರ ಪ್ರಕಾಶ್ ಕೋಳಿವಾಡ ಅವರನ್ನು ಕಣಕ್ಕಿಳಿಸುವ ಸಿದ್ಧತೆ ನಡೆದಿತ್ತು. ಅವರ ಪಿ.ಕೆ.ಕೆ. ಇನ್ಶಿಯೇಟಿವ್ಸ್‌ನಿಂದ ಆರೋಗ್ಯ ಮೇಳ, ಉದ್ಯೋಗ ಮೇಳ, ಸಂಗೀತ, ಕ್ರೀಡೆ, ಈಜು ಸ್ಪರ್ಧ, ಮೋಡ ಬಿತ್ತನೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಇದು ಪೂರ್ಣ ಪ್ರಮಾಣದ ಯಶಸ್ಸು ಕಾಣದ ಪರಿಣಾಮ, ಸ್ವತಃ ಕೋಳಿವಾಡರೇ ಅಖಾಡಕ್ಕೆ ಇಳಿದಿದ್ದಾರೆ ಎಂಬ ರಾಜಕೀಯ ಲೆಕ್ಕಾಚಾರದ ಮಾತುಗಳು ಕೇಳಿಬರುತ್ತಿವೆ. ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ರುಕ್ಮಿಣಿ ಸಾವುಕಾರ ಕಾಂಗ್ರೆಸ್ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾರೆ. ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿ ಯಾಗಿ ನಿಲ್ಲುವುದಾಗಿ ಪ್ರಕಟಣೆಯನ್ನೂ ನೀಡಿದ್ದಾರೆ.
ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡು: ಕೆಜೆಪಿಯು ಬಿಜೆಪಿಯಲ್ಲಿ ವಿಲೀನ ಗೊಂಡಿದ್ದರೂ, ಕ್ಷೇತ್ರದ ನಾಯಕರ ಮನಸ್ಸುಗಳು ಇನ್ನೂ ಒಂದುಗೂಡಿದ ಲಕ್ಷಣ ಗೋಚರಿಸುತ್ತಿಲ್ಲ. ಮಾಜಿ ಶಾಸಕ ಜಿ.ಶಿವಣ್ಣ ನಿಧನರಾದ ಬಳಿಕ, ಬಿಜೆಪಿಯೊಳಗೆ ಬಣಗಳು ಹೆಚ್ಚಾಗಿವೆ. ಪ್ರಮುಖ ನಾಯಕ ಇಲ್ಲದ
ಕಾರಣ ಸಾಮೂಹಿಕ ನಾಯಕತ್ವದಲ್ಲಿ ಪಕ್ಷದ ಕಾರ್ಯಕ್ರಮಗಳು ಸದ್ಯ ನಡೆಯುತ್ತಿವೆ.
ಇಲ್ಲಿ ಈಚೆಗೆ ಬಿಜೆಪಿಯ ಪರಿವರ್ತನಾ ರ‍್ಯಾಲಿ ನಡೆದಿದ್ದು, 16 ಅಭ್ಯರ್ಥಿಗಳು ಫ್ಲೆಕ್ಸ್ ಹಾಕಿಕೊಂಡು, ಆಕಾಂಕ್ಷಿಗಳಂತೆ ಬಿಂಬಿಸಿಕೊಂಡಿದ್ದರು. ಅಲ್ಲದೇ, ಈ 16ರ ಪೈಕಿ ಯಾವುದೇ ಸ್ಥಳೀಯ ಮುಖಂಡರಿಗೆ ಟಿಕೆಟ್ ದೊರೆತರೂ ಒಗ್ಗಟ್ಟಿ ನಿಂದ ದುಡಿಯುತ್ತೇವೆ ಎಂದು ಹೇಳಿದ್ದರು. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ರ‍್ಯಾಲಿಯಲ್ಲಿ ಯಾವುದೇ ಅಭ್ಯರ್ಥಿ ಹೆಸರು ಪ್ರಕಟಿಸ ಲಿಲ್ಲ. ಹೀಗಾಗಿ, ಕಳೆದ ಬಾರಿಯ ಅಭ್ಯರ್ಥಿ ಅರುಣಕುಮಾರ ಪೂಜಾರ ಬೆಂಬಲಿಗರ ನಿರೀಕ್ಷೆಗೆ ಫಲ ಸಿಕ್ಕಿರಲಿಲ್ಲ. ಆದರೆ, ಇತರ ಆಕಾಂಕ್ಷಿಗಳು ನಿಟ್ಟುಸಿರು ಬಿಟ್ಟಿದ್ದರು. ಶಿಕಾರಿಪುರದ ಶಾಸಕರಾದ ಬಿ.ವೈ.ರಾಘವೇಂದ್ರ, ಇಲ್ಲಿ ಬಿಜೆಪಿ ವಿಸ್ತಾರಕರಾಗಿ ಬೂತ್ ಮಟ್ಟದ ಕಾರ್ಯ ಕ್ರಮಗಳನ್ನು ನಡೆಸಿದ್ದಾರೆ. ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನೂ ಹೊಂದಿದ್ದಾರೆ.
ಮಾಜಿ ಶಾಸಕ ಶಿವಣ್ಣ ಅವರ ಪತ್ನಿ ಸುನಂದಮ್ಮ ತಿಳವಳ್ಳಿ, ಅರುಣ ಕುಮಾರ ಪೂಜಾರ, ಡಾ.ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ, ಮಂಜುನಾಥ ಓಲೇಕಾರ, ರಾಮಪ್ಪ ಕೋಲಕಾರ, ವೀರಣ್ಣ ಅಂಗಡಿ, ಭಾರತಿ ಜಂಬಿಗಿ, ಚಳ್ಳಕೆರೆ ಪ್ರವೀಣಕುಮಾರ ಕೆ.ಟಿ, ಎ.ಬಿ.ಪಾಟೀಲ, ವಿಶ್ವನಾಥ ಪಾಟೀಲ, ಸಂತೋಷ ಪಾಟೀಲ, ವಿ.ಸಿ.ಪಾಟೀಲ, ಡಾ.ಶಿವಪ್ರಕಾಶ ತಂಡಿ ಹೆಸರುಗಳು ಕೇಳಿ ಬರುತ್ತಿವೆ.
ಅಂದು ಕೆಜೆಪಿಯಲ್ಲಿ ಗುರುತಿಸಿ ಕೊಂಡವರು ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ಮೂಲ ಬಿಜೆಪಿ ಮತ್ತು ಪರಿವಾರದ ನಾಯಕರು ಕೆ.ಎಸ್.ಈಶ್ವರಪ್ಪ ಮೂಲಕ ಟಿಕೆಟ್ ಪ್ರಯತ್ನ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬೆಂಗಳೂರು ಮಹಾ ನಗರ ಪಾಲಿಕೆ ಮಾಜಿ ಉಪಮೇಯರ್ ಜಿ. ಶಂಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದಿದ್ದರು. ಆದರೆ, ‘ಹೊರಗಿನವರು’ ಎಂಬ ವಿರೋಧಿಗಳ ಪ್ರಚಾರದ ಕಾರಣ ಕೊನೆ ಕ್ಷಣದ ಹಿನ್ನಡೆಯನ್ನು ಅನುಭವಿಸಿದ್ದರು. ಹೀಗಾಗಿ ಈಗಾಗಲೇ ರಾಣೆಬೆನ್ನೂರಿನಲ್ಲಿ ಮನೆ ನಿರ್ಮಿಸಿ ನೆಲೆಸಿದ್ದಾರೆ.
ರಾಣೆಬೆನ್ನೂರು ವಿಧಾನ ಸಭಾ ಕ್ಷೇತ್ರ
2013ರ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪಡೆದ ಮತ ಪ್ರಮಾಣ
ಅಭ್ಯರ್ಥಿ – ಪಡೆದ ಮತ
ಕೆ.ಬಿ.ಕೋಳಿವಾಡ (ಕಾಂಗ್ರೆಸ್) – 53,780
ಆರ್.ಶಂಕರ್ (ಪಕ್ಷೇತರ) –46,992
ಜಿ.ಶಿವಣ್ಣ (ಕೆಜೆಪಿ) –26,570
ಮಂಜುನಾಥ ಗೌಡ ಶಿವಣ್ಣನರ (ಜೆಡಿಎಸ್) – 14,146
ಅರುಣಕುಮಾರ ಪೂಜಾರ (ಬಿಜೆಪಿ) – 9,476
ಮತದಾರರ ವಿವರಗಳು (ಈ ಪೈಕಿ ಮಹಿಳಾ ಮತದಾರರು)
2013 ರಲ್ಲಿ ಮತದಾರರು–1,86,938 (88,871)
2018ರಲ್ಲಿ ಮತದಾರರು–2,18,148 (1,06,130)
ಒಟ್ಟು ಮತದಾರರ ಹೆಚ್ಚಳ– 31, 210 (17,529)
(*2018 ಮತದಾರರ ಪಟ್ಟಿಯು ಅಂತಿಮ ಪರಿಷ್ಕರಣೆಗೆ ಒಳಪಡಲಿದೆ)
ರಾಣೆಬೆನ್ನೂರು ಕ್ಷೇತ್ರದ ಮಾಹಿತಿ
ಒಟ್ಟು ಗ್ರಾಮಗಳು –103
ಮತಗಟ್ಟೆಗಳು– 263
ಗ್ರಾಮ ಪಂಚಾಯ್ತಿಗಳು–40
ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು– 23
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು – 06
ಎಪಿಎಂಸಿ ಕ್ಷೇತ್ರಗಳು–17
ನಗರಸಭೆ –01
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.