ADVERTISEMENT

ರಾಣೆಬೆನ್ನೂರು: ಬಿವೈಆರ್ ಸ್ಪರ್ಧೆ ಕ್ಷೀಣ

ಹರ್ಷವರ್ಧನ ಪಿ.ಆರ್.
Published 1 ಡಿಸೆಂಬರ್ 2019, 13:02 IST
Last Updated 1 ಡಿಸೆಂಬರ್ 2019, 13:02 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಹಾವೇರಿ: ರಾಣೆಬೆನ್ನೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುತ್ರ ಶಾಸಕ ಬಿ.ವೈ.ರಾಘವೇಂದ್ರ (ಬಿವೈಆರ್) ಸ್ಪರ್ಧಿಸುವ ಸಾಧ್ಯತೆ ಕ್ಷೀಣಿಸಿದೆ.

ಬಿ.ಎಸ್.ಯಡಿಯೂರಪ್ಪ ಶಿಕಾರಿ ಪುರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಆ ಕ್ಷೇತ್ರದ ಉಸ್ತುವಾರಿ zಯನ್ನು ಬಿ.ವೈ.ಆರ್. ನಿರ್ವಹಿಸಬೇಕು. ಪ್ರಚಾರದ ಸಂದರ್ಭದಲ್ಲಿ ‘ಅಪ್ಪ–ಮಕ್ಕಳು ಅಭ್ಯರ್ಥಿಗಳು’ ಎಂಬ ಆರೋಪ ಕೇಳಿಬರಬಹುದಾದ ಕಾರಣ ಸ್ಪರ್ಧೆ ಬೇಡ ಎಂಬ ನಿರ್ಧಾರಕ್ಕೆ ಸ್ವತಃ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೇ, ರಾಣೆಬೆನ್ನೂರು ಕ್ಷೇತ್ರ ದಲ್ಲಿನ ಪಕ್ಷದ 17 ಟಿಕೆಟ್ ಆಕಾಂಕ್ಷಿಗಳು ಸಭೆ ನಡೆಸಿ, ‘ಸ್ಥಳೀಯರಿಗೆ ಟಿಕೆಟ್ ನೀಡಿ’ ಎಂದು ಆಗ್ರಹಿಸಿದ್ದರು. ಇದಕ್ಕೂ ಮೊದಲು ರಾಣೆಬೆನ್ನೂರು ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಬಿವೈಆರ್, ಹಳ್ಳಿ ಹಳ್ಳಿಯಲ್ಲಿ ಪ್ರಚಾರ ನಡೆಸಿದ್ದರು. ಬೆಂಬಲಿಗರು ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದರು. ಪ್ರಮುಖ ನಾಯಕರನ್ನು ಸೆಳೆಯುವ ನಿಟ್ಟಿನಲ್ಲಿ ಸಿದ್ಧತೆ ನಡೆದಿತ್ತು.

ADVERTISEMENT

‘ಕೆ.ಬಿ.ಕೋಳಿವಾಡ ಮತ್ತು ಆರ್. ಶಂಕರ್‌ನಂತಹ ಆರ್ಥಿಕ ಶಕ್ತಿಗಳನ್ನು ಯುವ ವರ್ಚಸ್ಸಿನ ಮೂಲಕ ಸೋಲಿ ಸಲು ಬಿ.ವೈ.ಆರ್ ಸೂಕ್ತ ಅಭ್ಯರ್ಥಿ ಎಂದು ಮತದಾರರು ಬೇಡಿಕೆ ಇಟ್ಟಿದ್ದರು. ಆದರೆ, ಈ ಬಗ್ಗೆ ಮೊದಲೇ ಸಿದ್ಧತೆ ನಡೆಯಬೇಕಿತ್ತು. ಕೊನೆ ಕ್ಷಣದಲ್ಲಿ ಸ್ಪರ್ಧೆಗೆ ಇಳಿಯುವುದು ತ್ರಾಸದಾಯಕ’ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.

ರಾಣೆಬೆನ್ನೂರಿನಲ್ಲಿ ಕೆಜೆಪಿ–ಬಿಜೆಪಿ ವೈಮನಸ್ಸು, ಪ್ರಬಲ ನಾಯಕತ್ವದ ಕೊರತೆ, ಕೆ.ಬಿ.ಕೋಳಿವಾಡ ಹಾಗೂ ಆರ್.ಶಂಕರ್ ಪ್ರಬಲ ಸ್ಪರ್ಧೆಯಿಂದ ಮತವಿಭಜನೆಯ ಸಾಧ್ಯತೆಗಳೂ ಬಿವೈಆರ್ ಅವರನ್ನು ಹಿಂದೆ ಸರಿಸು ವಂತೆ ಮಾಡಿದೆ ಎನ್ನಲಾಗಿದೆ.

‘ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಜಿಲ್ಲಾ ಘಟಕಕ್ಕೆ ಮಾಹಿತಿ ಬರುತ್ತದೆ. ಆದರೆ, ಬಿವೈಆರ್‌ ಸ್ಪರ್ಧೆ ಬಗ್ಗೆ ಈ ತನಕ ಯಾವುದೇ ಸೂಚನೆಗಳು ಬಂದಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಪ್ರತಿಕ್ರಿಯಿಸಿದರು.

ಈ ಬಾರಿ ಪಕ್ಷವು ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳುತ್ತಿದ್ದು, 2013ರ ಚುನಾವಣೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ ಎದುರಿಸಿದ ಸ್ಥಿತಿ ಬರಬಾರದು. ಅದಕ್ಕೂ ಪೂರ್ವದಲ್ಲಿ ಜೆಡಿಎಸ್ ವಿರುದ್ಧ ಬಂದ ‘ಅಪ್ಪ– ಮಕ್ಕಳ ಪಕ್ಷ’ ಎಂಬ ಆರೋಪವೂ ಸುಳಿಯಬಾರದು. ಹೀಗಾಗಿ, ಬಿವೈಆರ್‌ ಅವರನ್ನು ಕಣಕ್ಕಿಳಿಸುವ ಬದಲಾಗಿ, ಬಿಎಸ್‌ವೈ ಸ್ಪರ್ಧಿಸುವ ಶಿಕಾರಿಪುರದ ಪ್ರಚಾರದ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದರು.

‘ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸಿದ್ದೇನೆ’

‘ನನಗೆ ರಾಣೆಬೆನ್ನೂರು ಕ್ಷೇತ್ರದ ಉಸ್ತುವಾರಿ ಯನ್ನು ನೀಡಿದ್ದರು. ಅದಕ್ಕಾಗಿ ವಿಸ್ತಾರಕ ಮತ್ತಿತರ ಕಾರ್ಯಕ್ರಮಗಳಲ್ಲಿ ನಿಷ್ಠಾವಂತ ಕಾರ್ಯಕರ್ತ ಹಾಗೂ ಶಾಸಕನಾಗಿ ತಳಮಟ್ಟದಿಂದ ಕಾರ್ಯ ನಿರ್ವಹಿಸಿದ್ದೇನೆ. ಆಗ ಕೆಲವು ಕಾರ್ಯಕರ್ತರು ಸ್ಪರ್ಧಿಸುವಂತೆ ಒತ್ತಾಯ ಪಡಿಸಿದ್ದರು. ಸದ್ಯ ಅಂತಹ ಚಿಂತನೆಗಳಿಲ್ಲ. ಆದರೆ, ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಲು ಸದಾ ಸಿದ್ಧ’ ಎಂದು ಶಾಸಕ ಬಿ.ವೈ. ರಾಘವೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಿರೇಕೆರೂರಿನಿಂದ ಬಿವೈಆರ್!

‘ಹಿರೇಕೆರೂರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ’ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಿ.ವೈ. ರಾಘವೇಂದ್ರ (ಬಿ.ವೈ.ಆರ್), ‘ಅಂತಹ ಯಾವುದೇ ಪ್ರಸ್ತಾವ ಇಲ್ಲ. ನಾನು ಯಾವತ್ತೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದರು.

‘ಬಿ.ಎಸ್. ಯಡಿಯೂರಪ್ಪ, ಬಿ.ವೈ.ಆರ್. ಸೇರಿದಂತೆ ಪಕ್ಷದ ರಾಜ್ಯಮಟ್ಟದ ನಾಯಕರು ಬಂದರೂ ಸ್ವಾಗತ. ಕ್ಷೇತ್ರ ಬಿಟ್ಟುಕೊಡುತ್ತೇನೆ’ ಎಂದು ಪ್ರತಿಕ್ರಿಯಿಸಿದ ಶಾಸಕ ಯು.ಬಿ. ಬಣಕಾರ, ‘ಆದರೆ, ಕ್ಷೇತ್ರ ಬದಲಾವಣೆ ಕುರಿತು ಆರು ತಿಂಗಳ ಮೊದಲೇ ನಿರ್ಧರಿಸುತ್ತಾರೆ. ಅಂತಹ ಯಾವುದೇ ಸೂಚನೆಗಳು ಈತನಕ ಬಂದಿಲ್ಲ. ಈಗಲೇ ಬಂದರೂ, ಗೆಲ್ಲಿಸುತ್ತೇವೆ’ ಎಂದರು. ಆದರೆ, ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವ ಕೆಲವು ಕುಹಕ ವ್ಯಕ್ತಿಗಳು ವದಂತಿಗಳನ್ನು ಹಬ್ಬಿಸುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.