ADVERTISEMENT

ಶ್ಯಾಡಗುಪ್ಪಿ ಗ್ರಾಮದಲ್ಲಿ ಜ್ವರ ಉಲ್ಬಣ: 8 ಡೆಂಗಿ ಪ್ರಕರಣ ದಾಖಲು

ಮಾರುತಿ ಪೇಟಕರ
Published 28 ಮೇ 2024, 6:35 IST
Last Updated 28 ಮೇ 2024, 6:35 IST
ಹಾನಗಲ್‌ ತಾಲ್ಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಹೂಳು ತುಂಬಿದ ಚರಂಡಿಯಲ್ಲಿ ಹಾಯ್ದು ಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್‌
ಹಾನಗಲ್‌ ತಾಲ್ಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಹೂಳು ತುಂಬಿದ ಚರಂಡಿಯಲ್ಲಿ ಹಾಯ್ದು ಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್‌    

ಹಾನಗಲ್: ತಾಲ್ಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಜ್ವರಬಾಧೆ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ವರದಿ ಪ್ರಕಾರ ಈ ಗ್ರಾಮದಲ್ಲಿ 8 ಡೆಂಗಿ  ಪ್ರಕರಣಗಳು ದಾಖಲಾಗಿವೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಒಂದು ತಿಂಗಳ ಅವಧಿಯಲ್ಲಿ 54 ಜ್ವರದ ಪ್ರಕರಣಗಳು ದಾಖಲಾಗಿವೆ.

ಗ್ರಾಮಸ್ಥರು ಜ್ವರದ ಭೀತಿಗೆ ತಲ್ಲಣಗೊಂಡಿದ್ದಾರೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸಮೀಪದ ಅಕ್ಕಿಆಲೂರಿಗೆ ತೆರಳಿ ರಕ್ತ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಪ್ಲೆಟ್‌ಲೆಟ್‌ ಕಡಿಮೆಯಾದ ವರದಿ ಕೈಸೇರುತ್ತಲೇ ಉಳ್ಳವರು ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಡವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಡೆಂಗಿ ಬಾಧಿತರ ವರದಿ ಮಾತ್ರ ಆರೋಗ್ಯ ಇಲಾಖೆಗೆ ಸಿಕ್ಕಿದೆ. ಆದರೆ ಖಾಸಗಿ ದವಾಖಾನೆಗಳಲ್ಲಿ ಡೆಂಗಿ ಪೀಡಿತರು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಶ್ಯಾಡಗುಪ್ಪಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ವರದಿಗಿಂತ ಹೆಚ್ಚು ಡೆಂಗೆ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಆರೋಗ್ಯ ಇಲಾಖೆಯಾಗಲಿ ಅಥವಾ ಸ್ಥಳೀಯ ಆಡಳಿತಕ್ಕೆ ಪರಿಣಾಮ ಬೀರಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ADVERTISEMENT

ಶ್ಯಾಡಗುಪ್ಪಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಡೋಜಿ ಗ್ರಾಮದಲ್ಲಿಯೂ ಡೆಂಗೆ ಪ್ರಕರಣಗಳು ದಾಖಲಾಗಿವೆ. ಈ ಗ್ರಾಮದಲ್ಲಿಯೂ ಜ್ವರ ಪೀಡಿತರು ಇದ್ದಾರೆ. ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಡೆಂಗಿ ಮುನ್ನೆಚ್ಚರಿಕೆ ಕ್ರಮಗಳ ಅರಿವು ಮೂಡಿಸುತ್ತಿದ್ದಾರೆ. ಸೋಮವಾರ ತಾಲ್ಲೂಕು ಪಂಚಾಯ್ತಿ ಇ.ಒ ಬಾಬು ಅವರು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಫಾಗಿಂಗ್‌ ಮಾಡಬೇಕಾದ ಎಚ್ಚರಿಕೆ ಕ್ರಮಗಳ ಸೂಚನೆ ನೀಡಿದ್ದಾರೆ.

ಗ್ರಾಮದ ಚರಂಡಿಗಳು ಹೂಳು ತುಂಬಿ ವಾಸನೆ ಬೀರುತ್ತಿವೆ. ಖಾಲಿ ಜಾಗೆಯಲ್ಲಿ ತಗ್ಗು–ಗುಂಡಿಗಳಲ್ಲಿ ನೀರು ಶೇಖರಣೆಗೊಂಡ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಕುಡಿಯುವ ನೀರಿನ ಪೈಪ್‌ಲೈಲ್‌ ಚರಂಡಿಯಲ್ಲಿ ಹಾಯ್ದು ಬಂದ ಕಾರಣಕ್ಕಾಗಿ ಗಲೀಜು ಸೇರ್ಪಡೆಯಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಡೆಂಗೆ ಜ್ವರ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

ಗ್ರಾಮದಲ್ಲಿ ಮೆಡಿಕಲ್‌ ಕ್ಯಾಂಪ್‌ ತೆರೆಯಬೇಕು ಎಂದು ಗ್ರಾಮಸ್ಥ ರಾಜು ವೇರ್ಣೇಕರ, ಸುರೇಶ ಪಿಳ್ಳಿಕಟ್ಟಿ, ಪ್ರಕಾಶ ಸಾವಕ್ಕನವರ, ಸೋಮಣ್ಣ ಪಡೆಪ್ಪನವರ, ಶ್ರೀಧರ ಮಲಗುಂದ ಆಗ್ರಹಿಸಿದ್ದಾರೆ.

ಕುಡಿಯುವ ನೀರು ಪೂರೈಕೆಯ ಮೇಲ್ಮಟ್ಟದ ಜಲಾಗಾರ, ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಫಾಗಿಂಗ್‌ ಅಗತ್ಯದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕೀಟನಾಶಕ ಪೌಡರ್‌ ಸಿಂಪಡನೆ ಮಾಡಲಾಗುತ್ತಿದೆ ಎಂದು ಪಿಡಿಒ ಮಂಜುಳಾ ಮಲ್ಲೂರ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಕಾಮಗಾರಿಗಳಿಗೆ ಪೌರ ಕಾರ್ಮಿಕರ ಕೊರತೆ ಏರ್ಪಡುತ್ತಿದೆ. ಖಾಸಗಿ ವ್ಯಕ್ತಿಗಳಿಂದ ದಿನಗೂಲಿ ಪ್ರಕಾರ ಕೆಲಸ ಮಾಡಿಸಲಾಗುತ್ತಿದೆ ಎಂದು
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಚಂದ್ರಪ್ಪ ಹುಲಮನಿ ಹೇಳಿದ್ದಾರೆ.

ಸೊಳ್ಳೆ ನಿಯಂತ್ರಣ, ಸೊಳ್ಳೆ ಪರದೆ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನಮ್ಮಲ್ಲಿ ರಕ್ತ ಪರೀಕ್ಷೆಯ ಪ್ರಯೋಗಶಾಲೆ ಇದೆ. ಆದರೆ ತಂತ್ರಜ್ಞರ ಹುದ್ದೆ ಖಾಲಿ ಇದೆ. ಹೀಗಾಗಿ ಜ್ವರ ಬಾಧಿತರ ಲಕ್ಷಣ ಗುರುತಿಸಿ ರಕ್ತ ಪರೀಕ್ಷೆಗೆ ಬೇರೆಡೆಗೆ ಕಳಿಸಿಕೊಡಲಾಗುತ್ತಿದೆ ಎಂದು ಪ್ರಾಥಮಿಕ ಆರೋಗ್ಯ ಕೇಮದ್ರದ ವೈದ್ಯ ಡಾ.ರಾಜಕುಮಾರ ಉರಣಕರ ಹೇಳಿದ್ದಾರೆ.

ಶ್ಯಾಡಗುಪ್ಪಿ ಗ್ರಾಮದಲ್ಲಿ ಸ್ವಚ್ಚತೆಯನ್ನೇ ಮೆರೆತ ಚರಂಡಿಗಳು ಸೊಳ್ಳೆ ಉತ್ಪತ್ತಿ ತಾಣವಾಗುತ್ತಿವೆ.
ಶ್ಯಾಡಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಡಿಯಲ್ಲಿನ 12 ಆಶಾ ಕಾರ್ಯಕರ್ತೆಯರು ಡೆಂಗಿ ಬಾಧಿತ ಪ್ರದೇಶಗಳ ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ
ಡಾ.ರಾಜಕುಮಾರ ಉರಣಕರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.