ಹಾವೇರಿ: ‘ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ 800 ಹೊಸ ಡಯಾಲಿಸಿಸ್ ಯಂತ್ರಗಳನ್ನು ಕೊಡುತ್ತಿದ್ದೇವೆ. ಏಕ ಬಳಕೆಯ ಯಂತ್ರಗಳಾಗಿರುವುದರಿಂದ ನಿರ್ವಹಣೆ ಸುಲಭವಾಗಿದ್ದು, ಸೋಂಕು ತಡೆಗಟ್ಟಲು ಸಾಧ್ಯವಾಗುತ್ತದೆ. ಬೆಳಗಾವಿ ವಿಭಾಗದ 58 ತಾಲ್ಲೂಕು ಆಸ್ಪತ್ರೆಗಳು ಮತ್ತು 7 ಜಿಲ್ಲಾ ಆಸ್ಪತ್ರೆಗಳಿಗೆ ಹೊಸ ಏಜೆನ್ಸಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ನವೀಕೃತ ಡಯಾಲಿಸಿಸ್ ಘಟಕವನ್ನು ಶುಕ್ರವಾರ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹಾವೇರಿ ಸೇರಿದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ 15 ಜಿಲ್ಲಾಸ್ಪತ್ರೆಗಳಿಗೆ ಎಂಆರ್‌ಐ ಸ್ಕಾನಿಂಗ್ ಯಂತ್ರವನ್ನು ನೀಡಿ, ಜನರಿಗೆ ಉಚಿತವಾಗಿ ಸೇವೆ ನೀಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.
ಜೀವರಕ್ಷಕ ಔಷಧ ಪೂರೈಕೆಗೆ ಕ್ರಮ:
ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ಸರ್ಕಾರ ಜೀವರಕ್ಷಕ ಔಷಧಗಳ ವಿತರಣೆಯ ವ್ಯವಸ್ಥೆಯನ್ನು ಹಾಳು ಮಾಡಿ ಹೋಗಿತ್ತು. ಅದನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಸುಧಾರಣೆಯಾಗಿದೆ. ಮೇ ತಿಂಗಳ ಒಳಗೆ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗಬೇಕಾದ ಎಲ್ಲ ಔಷಧಗಳನ್ನು ಪೂರೈಸಲು ಕ್ರಮ ಕೈಗೊಂಡು, ಜನರಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವರು ಉತ್ತರಿಸಿದರು.
ಬರ ನಿರ್ವಹಣೆ ಕುರಿತ ಮಾಧ್ಯಮದವ ಪ್ರಶ್ನೆಗೆ, ‘ರಾಜ್ಯದಲ್ಲಿ ಕುಡಿಯುವ ನೀರು, ಮೇವು ಸೇರಿದಂತೆ ಬರಗಾಲ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ಗೆ ಹಣ ಹಾಕಿದ್ದೇವೆ. ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿ ಮತ್ತು ಸಿಇಒಗಳ ಸಭೆ ನಡೆಸಿ, ಅಗತ್ಯ ಸೂಚನೆ ನೀಡಿದ್ದಾರೆ ಎಂದರು.
ಟ್ರಾಮಾ ಕೇರ್ ಆರಂಭ:
ಬೆಂಗಳೂರು-ಬಾಂಬೆ ಹೆದ್ದಾರಿ ಮಾರ್ಗದಲ್ಲಿ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಈ ಭಾಗದಲ್ಲಿ ತುರ್ತು ಚಿಕಿತ್ಸೆಗಾಗಿ ₹40 ಕೋಟಿ ವೆಚ್ಚದಲ್ಲಿ ರೋಡ್ ಟ್ರಾಮಾ ಕೇರ್ ಆರಂಭಿಸಲಾಗುವುದು. 65 ಹೊಸ ಆಂಬುಲೆನ್ಸ್‌ಗಳನ್ನು ಖರೀದಿಸಲಾಗುವುದು. ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು. ಹೆದ್ದಾರಿ ಮಾರ್ಗದಲ್ಲಿ ಬರುವ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳನ್ನು ಗುರುತಿಸಲಾಗುವುದು. ಅಪಘಾತವಾದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗಾಗಿ ತ್ವರಿತ ರವಾನೆಯಂತಹ ಸೇವೆಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ:
‘ಪ್ರತಿ ರೈತರ ಖಾತೆಗೆ ₹2 ಸಾವಿರ ಬರ ಪರಿಹಾರ ನೀಡಲು ₹700 ಕೋಟಿ ಬಿಡುಗಡೆ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕಾನೂನಿನ ಪ್ರಕಾರ ಕೊಡಬೇಕಾದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್.ಡಿ.ಆರ್.ಎಫ್) ನಯಾಪೈಸೆಯನ್ನೂ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರ ಹೋದ ರೀತಿಯಲ್ಲೇ, ನಾವೂ ನ್ಯಾಯಾಲಯಕ್ಕೆ ಹೋಗುವ ಆಲೋಚನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
20 ಸ್ಥಾನಗಳಲ್ಲಿ ಗೆಲುವು:
‘ಲೋಕಸಭಾ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಜನರು ನಮಗೆ ಮತ ಹಾಕಿ ಬೆಂಬಲಿಸುತ್ತಾರೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಹೇಳಿಕೆ ನೀಡಿರುವುದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೈತಿಕತೆಯ ಅಧಃಪತನವನ್ನು ತೋರಿಸುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.
‘ನಾವು ಈಗಾಗಲೇ ಶೇ 95ರಷ್ಟು ರೈತರಿಗೆ ಬರ ಪರಿಹಾರ ನೀಡಿದ್ದೇವೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣವನ್ನು ಬೊಮ್ಮಾಯಿಯವರು ಬಿಡುಗಡೆ ಮಾಡಿಸಿ, ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದರೆ ನಾವು ಬೊಮ್ಮಾಯಿಯವರಿಗೆ ಶಹಬ್ಬಾಸ್‌ಗಿರಿ ಹೇಳುತ್ತಿದ್ದೆವು. ಸರ್ಕಾರದ ವಿರುದ್ಧ ಮಾತನಾಡುವ ಅರ್ಹತೆ ಬೊಮ್ಮಾಯಿ, ಯಡಿಯೂರಪ್ಪ ಅವರಿಗಿಲ್ಲ’ ಎಂದು ಹೇಳಿದರು.
‘ಬಿಜೆಪಿಯ ಭ್ರಷ್ಟಾಚಾರ ಜಗಜ್ಜಾಹೀರು’
‘ಕೇಂದ್ರ ಸರ್ಕಾರ ಸಂವಿಧಾನ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಎಲೆಕ್ಟ್ರಾನಿಕ್ ಬಾಂಡ್‌ಗಳ ಮೂಲಕ ಬಿಜೆಪಿ ನಡೆಸಿದ ಭ್ರಷ್ಟಾಚಾರ ವಿಶ್ವಕ್ಕೇ ಗೊತ್ತಾಗಿದೆ. ಇಡಿ, ಐಟಿ ದಾಳಿ ನಡೆದ ನಂತರ ಸಂಬಂಧಪಟ್ಟ ಕಂಪನಿಗಳು ವಾರದೊಳಗೆ ₹100 ಕೋಟಿಯಿಂದ 500 ಕೋಟಿಯನ್ನು ಬಿಜೆಪಿಗೆ ಕೊಟ್ಟಿವೆ. ಇವರೆಲ್ಲ ಏಕೆ ಕೊಟ್ಟರು? ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು. ಬಿಜೆಪಿಯ ಲೂಟಿ ಬಯಲಾಗಿದೆ’ ಎಂದು ಸಚಿವ ದಿನೇಶ್ ಗುಂಡೂರಾವ್ ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.