ಸವಣೂರು: ಪಟ್ಟಣದ ದೊಡ್ಡ ಹುಣಸೆಕಲ್ಮಠದ ಆವರಣದಲ್ಲಿ ಬಾವುಬಾ ಸಸ್ಯ ಪ್ರಭೇದಕ್ಕೆ ಸೇರಿದ ದೊಡ್ಡ ಹುಣಸೇಮರ ಮತ್ತೆ ಚಿಗುರೊಡೆದಿದ್ದು, ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.
3 ಸಾವಿರ ವರ್ಷದ ಇತಿಹಾಸ ಹೊಂದಿರುವ ದೊಡ್ಡ ಹುಣಸೆಮರದ ಬುಡ ಗೆದ್ದಿಲು ತಿಂದು ಬೇರುಗಳು ಶಕ್ತಿ ಕಳೆದುಕೊಂಡ ಪರಿಣಾಮ ಜುಲೈ 7ರಂದು ಮರ ಧರೆಗುರುಳಿತ್ತು. ಸುಮಾರು 80 ಟನ್ ತೂಕ, 12.6 ಮೀಟರ್ ವ್ಯಾಸ, 18 ಮೀಟರ್ ಎತ್ತರದ ಈ ಮರವನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದಿಂದ ಜು.13ರಂದು ಮರಳಿ ಅದೇ ಸ್ಥಳದಲ್ಲಿ ಮರ ನೆಡಲಾಗಿತ್ತು. ಇದೀಗ ಹುಣಸೆಮರ ಚಿಗುರೊಡೆದಿದೆ. ದೇವರ ಆಶೀರ್ವಾದ ವೃಕ್ಷ ಪ್ರೇಮಿಗಳ ಶುಭ ಹಾರೈಕೆಯೇ ಇದಕ್ಕೆ ಕಾರಣ’ ಎಂದು ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಎಂಟು ಅಡಿ ಆಳದ ಗುಂಡಿ ತೋಡಿ ಬೇರುಗಳು ಬೆಳೆಯಲು ಸಾವಯವ ರಾಸಾಯನಿಕ ಮತ್ತು ಗೊಬ್ಬರ ಹಾಕಿದರೆ ಮರ ಬದುಕುಳಿಯುತ್ತದೆ ಎಂದು ಅರಣ್ಯಾಧಿಕಾರಿಗಳು ವಿಶ್ವಾಸ ಹೊಂದಿದ್ದರು. ಅದರಂತೆ ₹20 ಲಕ್ಷ ವ್ಯಯಿಸಿ ಮರವನ್ನು ನೆಡಲಾಗಿದೆ. ಮರದ ಒಳಗೆ ವಿಷಕಾರಿ ಪದಾರ್ಥಗಳು, ಮಳೆನೀರು ಪ್ರವೇಶಿಸದಂತೆ ಕೊಂಬೆಗಳನ್ನು ಸಂಸ್ಕರಿಸಿ, ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ.
‘ಸರ್ಕಾರವು ಪ್ರತಿ ವರ್ಷ ಅರಣ್ಯ ಅಭಿವೃದ್ಧಿ, ಸಸ್ಯ ಸಂಕುಲಗಳ ಬೆಳವಣಿಗೆಗೆ ನೂರಾರು ಕೋಟಿ ಹಣ ವ್ಯಯಿಸುತ್ತಿದೆ. ಆದರೆ, ಸಾವಿರಾರು ವರ್ಷದ ಇತಿಹಾಸ ಹೊಂದಿರುವ ದೊಡ್ಡ ಹುಣಸೇಮರ ಧರೆಗೆ ಉರುಳಿದಾಗ, ಅದನ್ನು ಮರಳಿ ನೆಡಲು ನೆರವು ನೀಡುವಂತೆ ಸಚಿವರಾದ ಎಚ್.ಕೆ.ಪಾಟೀಲ ಹಾಗೂ ಈಶ್ವರ ಖಂಡ್ರೆ ಅವರಿಗೆ ಅರಣ್ಯ ಇಲಾಖೆಯಿಂದ ಅಂದಾಜು ಪ್ರತಿ ತಯಾರಿಸಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮನವಿ ಮಾಡಲಾಗಿತ್ತು. ಆದರೆ, ಸಚಿವರಿಂದ ಯಾವುದೇ ಸಹಕಾರ ದೊರೆತಿಲ್ಲ ಎಂದು ಚನ್ನಬಸವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಧರೆಗುರುಳಿದ್ದ ದೊಡ್ಡಹುಣಸೆ ಮರಕ್ಕೆ ಔಷಧೋಪಚಾರ ಮಾಡಿ ನೆಡಲಾಗಿತ್ತು. ಇದೀಗ ಮತ್ತೆ ಚಿಗುರೊಡೆದಿದ್ದು ಸಂತಸ ತಂದಿದೆ. ಇದಕ್ಕೆ ಸ್ವಾಮೀಜಿಗಳ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರವೇ ಕಾರಣ- ಬಾಲಕೃಷ್ಣ ಎಸ್. ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.