ಹಿರೇಕೆರೂರು: ತಾಲ್ಲೂಕಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದು, ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಕೆರೆ-ಕಟ್ಟೆಗಳ ಏರಿ ಮೇಲೆ ಮತ್ತು ಅಕ್ಕಪಕ್ಕ ಹಾದು ಹೋಗುವ ರಸ್ತೆಗಳಲ್ಲಿ ಸುರಕ್ಷತಾ ತಡೆಗೋಡೆಗಳಿಲ್ಲದ ಕಾರಣ ಚಾಲಕರು ಹಾಗೂ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡುವಂತಾಗಿದೆ. ಪಟ್ಟಣದ-ದುರ್ಗಾದೇವಿ ಕೆರೆ ಏರಿ ರಸ್ತೆ ಬದಿ ತಡೆಗೋಡೆ ಇಲ್ಲ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಪಟ್ಟಣದ ಹೊರವಲಯದಲ್ಲಿ ಇರುವ ದುರ್ಗಾದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ವಾಹನಗಳಲ್ಲಿ ಬರುತ್ತಾರೆ. ದೇವಸ್ಥಾನದ ಪಕ್ಕದಲ್ಲಿ ಇರುವ ಕೆರೆಗೆ ಯಾವುದೇ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿಲ್ಲ. ಕೆರೆ ಸುಮಾರು 543 ಎಕರೆ ವಿಸ್ತೀರ್ಣವಿದೆ. ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಕೆರೆ ತುಂಬಿದೆ.ಈ ಮಾರ್ಗವಾಗಿ ಪ್ರಯಾಣ ಮಾಡುವ ವಾಹನ ಸವಾರರು ಆತಂಕದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ರಾತ್ರಿ ವೇಳೆಯಂತೂ ವಾಹನ ಸವಾರರು ಏರಿ ಮೇಲೆ ಭಯದಿಂದಲೇ ಓಡಾಡುವಂತಾಗಿದೆ. ತಡೆಗೋಡೆ ಇಲ್ಲದ ಕಾರಣಕ್ಕೆ ಕೆರೆ ಏರಿಯ ಮೇಲೆ ಕೆಲವು ಅಪಘಾತಗಳು ಸಂಭವಿಸಿವೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸೋಮನಹಳ್ಳಿ, ನೂಲಗೇರಿ, ಆಲದಕಟ್ಟಿ, ಕಳಗೊಂಡ, ಬಸರೀಹಳ್ಳಿ, ಅಬಲೂರು ಸೇರಿದಂತೆ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಹಿರೇಕೆರೂರು ಪಟ್ಟಣಕ್ಕೆ ಇದೇ ಮಾರ್ಗವಾಗಿ ಬೈಕ್ ಹಾಗೂ ಟಂಟಂ ಗಾಡಿಗಳನ್ನು ಅವಲಂಬಿಸಿದ್ದಾರೆ. ಇವು ಸಂಚರಿಸುವಾಗ ಚಾಲಕ ಸ್ವಲ್ಪ ಎಚ್ಚರ ತಪ್ಪಿದ್ದರೆ ಅಪಾಯ ತಪ್ಪಿದ್ದಲ್ಲ. ದುರ್ಗಾದೇವಿ ಕೆರೆ ಏರಿ ಮೇಲೆ ಅನೇಕ ತಿರುವುಗಳಿವೆ. ಹಾಗಾಗಿ ಕೆರೆಯ ಉದ್ದಕ್ಕೂ ತಡೆಗೋಡೆಯನ್ನು ನಿರ್ಮಿಸಿ ಮುಂದೆ ಆಗುವ ಅಪಾಯ ತಡೆಯಲು ರಸ್ತೆಗಳಿಗೆ ತಡೆಗೋಡೆ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ, ಕಿರಿದಾದ ರಸ್ತೆಗಳ ವಿಸ್ತರಣೆ ಹಾಗೂ ವೈಜ್ಞಾನಿಕ ಹಂಪ್‌ಗಳ ನಿರ್ಮಾಣಕ್ಕೆ ಸಣ್ಣನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಟೊ ಚಾಲಕರೊಬ್ಬರು ಆರೋಪಿಸಿದರು.
ತಡೆಗೋಡೆಗೆ ನಿರ್ಮಾಣ ಕೈಗೊಳ್ಳಲು ಇಲಾಖೆಯಿಂದ ಶೀಘ್ರವಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆನಂದಿಶ್ ಬಿ ಎಇಇ ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಉಪವಿಭಾಗ ಹಿರೇಕೆರೂರು
ಏರಿಯ ಒಂದು ಬದಿ ಕೆರೆ ಇದ್ದರೆ ಇನ್ನೊಂದು ಬದಿ ಆಳವಾದ ಭತ್ತ ಬೆಳೆಯುವ ಗದ್ದೆ ಪ್ರದೇಶವಿದೆ. ಜೊತೆಗೆ ಕೆರೆ ಪಕ್ಕದಲ್ಲಿಯೇ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನವಿದೆ. ವಿವಿಧ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ದೇವಸ್ಥಾನಕ್ಕೆ ಭಕ್ತರು ಹಾಗೂ ನಿತ್ಯ ರೈತರು ತಮ್ಮ ಎತ್ತಿನ ಗಾಡಿಗಳನ್ನು ನಡೆಸಿಕೊಂಡು ಹೋಗುವ ಪ್ರಮುಖ ದಾರಿಯಾಗಿದ್ದು ಅಧಿಕಾರಿಗಳು ಕೂಡಲೇ ಈ ಕೆರೆಗೆ ರಕ್ಷಣಾ ಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.