ಹಾವೇರಿ: ‘ಏಲಕ್ಕಿ ಕಂಪಿನ ನಾಡಿ’ನಲ್ಲಿ ಜನವರಿ 6ರಿಂದ 8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ನುಡಿಜಾತ್ರೆಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ‘ಅರಮನೆ ದರ್ಬಾರ್ ಮಾದರಿ’ಯಲ್ಲಿ ಭವ್ಯ ರಥವನ್ನು ಸಿದ್ಧಗೊಳಿಸಲಾಗುತ್ತಿದೆ.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ಅಕ್ಷರಜಾತ್ರೆ ಮೆರವಣಿಗೆಯ ಕೇಂದ್ರಬಿಂದುವಾಗಿರುತ್ತಾರೆ. ಈ ಮೆರವಣಿಗೆಯಲ್ಲಿ ಭಾಗವಹಿಸಿದ ಸಾವಿರಾರು ಕನ್ನಡಾಭಿಮಾನಿಗಳಿಗೆ ಸಮ್ಮೇಳನಾಧ್ಯಕ್ಷರು ಸ್ಪಷ್ಟವಾಗಿ ಕಾಣುವಂತೆ ಎತ್ತರದ ಸಿಂಹಾಸನವನ್ನು ವಿನ್ಯಾಸ ಮಾಡಲಾಗಿದೆ. ಸಿಂಹಾಸನದ ಮೇಲೆ ಕೆಂಪು ಬಣ್ಣದ ಛತ್ರಿಯನ್ನು ಅಳವಡಿಸಿರುವುದು ರಥಕ್ಕೆ ಮೆರುಗು ನೀಡಿದೆ.
ಲಾರಿ ಚಾಸಿ ಬಳಕೆ:
‘ಮೈಸೂರಿನಿಂದ ಲಾರಿ ಚಾಸಿಯನ್ನು ತರಿಸಿ, ಅದಕ್ಕೆ ‘ಮೆಟಲ್ ಫ್ರೇಮ್’ ಅಳವಡಿಸಿ, ಫೈಬರ್, ಪ್ಲೈವುಡ್‌ಗಳನ್ನು ಜೋಡಿಸಿ ರಥವನ್ನು ನಿರ್ಮಿಸಲಾಗುತ್ತಿದೆ. ಕೆಂಪು, ಹಳದಿ ಮತ್ತು ಬಂಗಾರದ ವರ್ಣಗಳಿಂದ ರಥವನ್ನು ಅಲಂಕರಿಸುತ್ತೇವೆ. ಭುವನೇಶ್ವರಿ, ಸಮ್ಮೇಳನದ ಲಾಂಛನ, ಕನ್ನಡ ಧ್ವಜಗಳಿಂದ ಈ ವಿಶೇಷ ರಥವು ಕಂಗೊಳಿಸಲಿದೆ’ ಎನ್ನುತ್ತಾರೆ ಕಲಾವಿದ ಫಕ್ಕಿರೇಶ ಕುಳಗೇರಿ.
‘ಇದುವರೆಗೆ ನಡೆದಿರುವ 85 ಸಾಹಿತ್ಯ ಸಮ್ಮೇಳನಗಳಲ್ಲಿ ಎತ್ತಿನಗಾಡಿ, ಸಾರೋಟು ಮತ್ತು ಅಲಂಕೃತ ವಾಹನಗಳನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬಳಸಲಾಗಿದೆ. ಸಮ್ಮೇಳನಕ್ಕಾಗಿಯೇ ಭವ್ಯ ರಥ ನಿರ್ಮಾಣ ಮಾಡಿರುವುದು 86ನೇ ನುಡಿಜಾತ್ರೆಯ ವಿಶೇಷ. 50 ಕಲಾವಿದರ ತಂಡ ಸುಮಾರು ₹4 ಲಕ್ಷ ವೆಚ್ಚದಲ್ಲಿ ರಥವನ್ನು ನಿರ್ಮಿಸಲಾಗುತ್ತಿದೆ’ ಎನ್ನುತ್ತಾರೆ ರಥದ ಪರಿಕಲ್ಪನೆ ಮತ್ತು ವಿನ್ಯಾಸದ ಹೊಣೆ ಹೊತ್ತಿರುವ ಕಲಾವಿದ ಷಹಜಹಾನ್ ಮುದಕವಿ.
‘80 ಕಲಾ ತಂಡಗಳು ಭಾಗಿ’
‘ಚಂಡೆಮದ್ದಳೆ, ನಂದಿಕೋಲು, ಪೂಜಾ ಕುಣಿತ, ಕಂಸಾಳೆ, ಪುರವಂತಿಕೆ, ಜಗ್ಗಲಿಗೆ, ಡೊಳ್ಳು, ಝಾಂಜ್, ಕರಡಿಮಜಲು, ಲಂಬಾಣಿ ನೃತ್ಯ, ಮಹಿಳಾ ವೀರಗಾಸೆ, ಹಲಗೆ, ಜಗ್ಗಲಿಗೆ ಸೇರಿದಂತೆ 80ಕ್ಕೂ ಅಧಿಕ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
‘ಜನವರಿ 6ರಂದು ಬೆಳಿಗ್ಗೆ 8 ಗಂಟೆಗೆ ಹಾವೇರಿ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ, ಎಂ.ಜಿ.ರಸ್ತೆ, ಗಾಂಧಿವೃತ್ತ, ಮೈಲಾರ ಮಹದೇವಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗಿ ಸಮ್ಮೇಳನದ ವೇದಿಕೆ ತಲುಪಲಿದೆ. 3 ಗಂಟೆ ಅವಧಿಯಲ್ಲಿ ಮೆರವಣಿಗೆ ಪೂರ್ಣಗೊಳ್ಳುವಂತೆ ಯೋಜನೆ ರೂಪಿಸಿದ್ದೇವೆ’ ಎಂದು ತಿಳಿಸಿದರು.
15 ಸಾವಿರ ಕನ್ನಡ ಧ್ವಜ:
‘15 ಸಾವಿರ ಕನ್ನಡ ಧ್ವಜ, 10 ಸಾವಿರ ಶಲ್ಯ ಮಾಡಿಸಲಾಗುತ್ತಿದೆ. ಸ್ವಯಂಸೇವಕರಿಗೆ ಬ್ಯಾಡ್ಜ್ ಹಾಗೂ ಐಡಿ ಕಾರ್ಡ್ ನೀಡಲಾಗುವುದು. ಮೆರವಣಿಗೆ ಸಾಗುವ ದಾರಿಯಲ್ಲಿ ತಳಿರುತೋರಣ, ರಂಗೋಲಿ ಹಾಕಲು ಸೂಚಿಸಲಾಗಿದೆ. ಮೆರವಣಿಗೆಯಲ್ಲಿ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಮೆರವಣಿಗೆ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಬಸವರಾಜ ಶಿವಣ್ಣನವರ ತಿಳಿಸಿದರು.
ಜಿಲ್ಲಾಧ್ಯಕ್ಷರಿಗಾಗಿ 11 ಸಾರೋಟುಗಳು
‘ರಾಜ್ಯದ 31 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕರೆತರಲು 11 ಸಾರೋಟುಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಂದು ಸಾರೋಟಿನಲ್ಲಿ ಮೂವರು ಅಧ್ಯಕ್ಷರು ಆಸೀನರಾಗಲಿದ್ದಾರೆ. ಇದು ಈ ಬಾರಿಯ ವಿಶೇಷ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.