ADVERTISEMENT

ಅಕ್ಕಿಆಲೂರ: ಭಕ್ತರ ಪಾಲಿನ ಕಾಮಧೇನು ಆಂಜನೇಯ ಸ್ವಾಮಿ

ಐತಿಹಾಸಿ ಹಿನ್ನೆಲೆಯುಳ್ಳ ದೇವಸ್ಥಾನ: ಧಾರ್ಮಿಕ ವೈಶಿಷ್ಟ್ಯತೆ ಹೊಂದಿದ ಜಿಗಳಿಕೊಪ್ಪ

ಸುರೇಖಾ ಪೂಜಾರ
Published 17 ಜೂನ್ 2023, 23:35 IST
Last Updated 17 ಜೂನ್ 2023, 23:35 IST
ಅಕ್ಕಿಆಲೂರಿನ ಜಿಗಳಿಕೊಪ್ಪದಲ್ಲಿನ ಆಂಜನೇಯ ಸ್ವಾಮಿ ವಿಗ್ರಹಗಳು
ಅಕ್ಕಿಆಲೂರಿನ ಜಿಗಳಿಕೊಪ್ಪದಲ್ಲಿನ ಆಂಜನೇಯ ಸ್ವಾಮಿ ವಿಗ್ರಹಗಳು   

ಅಕ್ಕಿಆಲೂರ: ಧಾರ್ಮಿಕ ವೈಶಿಷ್ಟ್ಯತೆ ಹೊಂದಿದ ಇಲ್ಲಿನ ಜಿಗಳಿಕೊಪ್ಪದ ಆಂಜನೇಯ ಸ್ವಾಮಿ ಭಕ್ತರ ಪಾಲಿನ ಕಾಮಧೇನು. ಮಳೆ, ಬೆಳೆ, ನೆಮ್ಮದಿ, ಸಂತಾನ ಪ್ರಾಪ್ತಿಗೆ ಸ್ವಾಮಿ ಅಭಯಹಸ್ತ ಚಾಚಿ ಮಹಾಮಹಿಮ ಎಸಿದ್ದಾನೆ.

ದೇವಸ್ಥಾನದ ಒಳಗೆ ಹಾಗೂ ಹೊರಗೆ ಸ್ವಾಮಿಯ ಮೂರ್ತಿಗಳಿರುವುದು ಇಲ್ಲಿನ ವಿಶೇಷ. ಸನ್ನಿಧಿಯಿರುವ ಜಿಗಳಿಕೊಪ್ಪಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ‌

ಕ್ಷೇತ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿ ವಿರಾಟ ನಗರವಿದೆ (ಈಗಿನ ಹಾನಗಲ್). ಹಿಂದೆ ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ರಹಸ್ಯವಾಗಿ ಅಡಗಿದ್ದ ತಾಣವಿದು. ಆ ಸಂದರ್ಭದಲ್ಲಿ ದ್ರೌಪದಿ ವನ ವಿಹಾರಕ್ಕೆಂದು ಜಿಗಳಿಕೊಪ್ಪಕ್ಕೆ ಆಗಮಿಸಿದ್ದಳಂತೆ. ವನ ಸಿರಿ ನೋಡಿ ಕೆರೆಯ ದಡದಲ್ಲಿ ಸುತ್ತಾಡುತ್ತಿರುವ ಸಮಯದಲ್ಲಿ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದಲ್ಲಿದ್ದ ಜಿಗಳಿಗಳು ದ್ರೌಪದಿಯ ರಕ್ತ ಹಿರಲಾರಂಭಿಸಿದವು. ಅಜ್ಞಾತ ವಾಸದಲ್ಲಿರುವ ಕಾರಣ ಆಕೆ ಪಾಂಡವರನ್ನು ನೆನಪಿಸುವಂತಿರಲಿಲ್ಲ. ಆಗ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿದಾಗ ಸ್ವಾಮಿ ಆಕ್ಷಣವೇ ಪ್ರತ್ಯಕ್ಷನಾಗಿ ಕೆರೆಯಲ್ಲಿ ಕಾಲಿಡುತ್ತಿದ್ದಂತೆಯೇ ಕೋಟಿಗಟ್ಟಲೇ ಜಿಗಣಿಗಳು ನಾಶವಾದವು ಎಂಬ ಪ್ರತೀತಿ ಇದೆ.

ADVERTISEMENT

ಸ್ವಾಮಿ ಸತಿ, ಶರಣೆಯರ ಕಷ್ಟ-ಕಂಟಕ ನಿವಾರಕನಾಗಿದ್ದು, ಆತನ ನೆನಪಿಗಾಗಿ ದ್ರೌಪದಿ, ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದಳು ಎಂಬ ಪ್ರತೀತಿ ಇದೆ.

ಇನ್ನು ದೇವಸ್ಥಾನದ ಪೂರ್ವಜ ಅರ್ಚಕರೊಬ್ಬರು ಕಾರ್ಯ ಅಂಗವಾಗಿ ಮುಂಡಗೋಡಕ್ಕೆ ತೆರಳಿ ಮರಳುವಾಗ ಕತ್ತಲೆಯಾಯಿತಂತೆ. ಆಗ ಮುಂಡಗೋಡದ ಊರ ಹೊರಗಿನ ಹನುಮ ದೇವಸ್ಥಾನದಲ್ಲಿಯೇ ಅರ್ಚಕರು ಕಾಲ ಕಳೆಯಲು ನಿರ್ಧರಿಸಿದರು. ಮಧ್ಯರಾತ್ರಿ ಗರ್ಭಗುಡಿಯಲ್ಲಿದ್ದ ಸ್ವಾಮಿ ಇಲ್ಲಿ ನನ್ನ ದರ್ಶನಕ್ಕೆ ಭಕ್ತರು ಬರುತ್ತಿಲ್ಲ ಎಂದು ಹೇಳಿದಾಗ ಅರ್ಚಕರು ಸ್ವಾಮಿಯನ್ನು ಜಿಗಳಿಕೊಪ್ಪಕ್ಕೆ ತಂದರು ಎಂಬ ಪ್ರತೀತಿ ಇದೆ. ಅತಿಥಿ ಸತ್ಕಾರಕ್ಕಾಗಿ ಜಿಗಳಿಕೊಪ್ಪ ದೇವಸ್ಥಾನದ ಗರ್ಭಗುಡಿಯಲ್ಲಿ ದ್ರೌಪದಿ ಪ್ರತಿಷ್ಠಾಪಿಸಿದ ಮೂರ್ತಿ ಹೊರ ಬಂದು ಮುಂಡಗೋಡದಿಂದ ಬಂದ ಅತಿಥಿ ಆಂಜನೇಯ ಗರ್ಭ ಗುಡಿಯಲ್ಲಿ ನೆಲೆಸಿದ್ದಾನೆ ಎಂದು ಪೂರ್ವಜನರು ಹೇಳುತ್ತಾರೆ.

ಅಂತೆ-ಕಂತೆಗಳ ಜಾಡು ಹಿಡಿದು ಹೊರಟರೆ ಇವು ಸತ್ಯ ಘಟನೆಗಳು ಎಂಬುದು ದೇವಸ್ಥಾನದ ಈಗಿನ ಅರ್ಚಕ ಪೂಜಾರ ಅವರ ಅನಿಸಿಕೆ. ಇಂತಹ ವಿಶಿಷ್ಟ ಹಿನ್ನೆಲೆ ಹೊಂದಿರುವ ದೇವಸ್ಥಾನ ಜೀರ್ಣಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂತನ ದೇವಸ್ಥಾನ ನಿರ್ಮಿಸಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇಲ್ಲಿ ಶ್ರಾವಣ ಮಾಸದ ಪ್ರತಿ ಶನಿವಾರ ಭಕ್ತರ ಜಾತ್ರೆಯೇ ನೆರವೇರುತ್ತದೆ. ಪಲ್ಲಕ್ಕಿ ಉತ್ಸವ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ನೂತನ ದೇವಸ್ಥಾನದ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.