ರಾಣೆಬೆನ್ನೂರು:ನಗರಸಭೆ ವ್ಯಾಪ್ತಿಯಲ್ಲಿರುವ ನಗರಸಭೆ ಮಾಲೀಕತ್ವದ ಪೂರ್ವ ಬಡಾವಣೆಯ 623 ನಿವೇಶನಗಳನ್ನು ಹಾಗೂ ಪಶ್ಚಿಮ ಬಡಾವಣೆಯ 652 ನಿವೇಶನಗಳನ್ನು ಕೆಲವು ಷರತ್ತುಗಳೊಂದಿಗೆ ಪ್ರಸ್ತುತ ಮಾರ್ಗಸೂಚಿ ಬೆಲೆಯ ಶೇ 25ರಷ್ಟನ್ನು ವಿಧಿಸಿ, ಹಾಲಿ ಭೂ ಬಾಡಿಗೆದಾರರಿಗೆ ಕಾಯಂ ಆಗಿ ಮಂಜೂರು ಮಾಡಲು ನಗರಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇಲ್ಲಿನ ನಗರಸಭೆ ಸರ್.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಶುಕ್ರವಾರ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆ ನಡೆಯಿತು. 80 ವರ್ಷಗಳಿಂದ ಲೀಸ್ ಅಥವಾ ಬಾಡಿಗೆ ಆಧಾರದಲ್ಲಿ ಪಡೆದುಕೊಂಡಿರುವ ಪೂರ್ವ ಬಡಾವಣೆ ಮತ್ತು ಪಶ್ಚಿಮ ಬಡಾವಣೆ ನಿವಾಸಿಗಳಿಗೆ ಸರ್ಕಾರ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದೆ.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, 90-95 ವರ್ಷಗಳಿಂದ ಲೀಸ್, ಬಾಡಿಗೆ ಆಧಾರದ ಮೇಲೆ ವಾಸಿಸುತ್ತಿರುವ ನಿವಾಸಿಗಳು ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಇಂದು ನಮ್ಮ ಸರ್ಕಾರ ಇತಿಶ್ರೀ ಹಾಡಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರು ಸಹಕಾರ ನೀಡಬೇಕು ಎಂದರು.
ಜಲಸಂಪನ್ಮೂಲ ಇಲಾಖೆಯಿಂದ ನಗರಸಭೆ ಒಟ್ಟು ₹29 ಕೋಟಿ ಅನುದಾನ ಮಂಜೂರಾಗಿದೆ. ಇಷ್ಟರಲ್ಲಿಯೇ ಜಲಸಂಪನ್ಮೂಲ ಇಲಾಖೆ ಸಚಿವರನ್ನು ಕರೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸದ್ಯ 29 ವಾರ್ಡ್‌ಗಳಿಗೆ ವಿತರಿಸಲಾಗುವುದು. ನಂತರ ಉಳಿದ ವಾರ್ಡ್‌ಗಳಿಗೆ ಮತ್ತೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದರು.
ನಗರಕ್ಕೆ ನೀರು ಸರಬರಾಜಾಗುತ್ತಿದ್ದ ಕುದರೀಹಾಳ 1ನೇ ಹಂತದಿಂದ ಯೋಜನೆಯ ನಿರುಪಯುಕ್ತ ಜಾಕ್‌ವೆಲ್ ಮತ್ತು ಸಿಐ ಪೈಪ್‌ಲೈನ್ ಹಾಗೂ ಇತರೆ ಸಾಮಗ್ರಿಗಳಿಗೆ ಇ-ಹರಾಜು ಮೂಲಕ ಬಂದ ಟೆಂಡರ್‌ಗಳನ್ನು ಸಭೆ ಅನುಮೋದನೆ ನೀಡಿತು.
ಪ್ರತಿ ಪಕ್ಷದ ಸದಸ್ಯರಾದ ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಅಡ್ಮನಿ ಅವರು ಸಲಹೆ ಸೂಚನೆಗಳನ್ನು ನೀಡಿದರು.
ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಮ್ಮ ಚಿಕ್ಕಬಿದರಿ, ಪೌರಾಯುಕ್ತ ಉದಯಕುಮಾರ ಬಿ.ಟಿ, ಅಧೀಕ್ಷಕಿ ವಾಣಿಶ್ರೀ, ಮಧು ಸಾತೇನಹಳ್ಳಿ ಹಾಗೂ ವ್ಯವಸ್ಥಾಪಕ ಎಲ್.ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.