ADVERTISEMENT

ಶಿಗ್ಗಾವಿ: ಪರಿಸರ ಸ್ನೇಹಿ, ಸಸ್ಯ ಕಾಶಿ ವಸತಿ ನಿಲಯ

ಹೋತನಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 6:32 IST
Last Updated 5 ಜೂನ್ 2024, 6:32 IST
ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಾಚಾರಕ ಎಚ್.ಎಸ್.ರಮೇಶ ಮಕ್ಕಳಿಗೆ ಕೃಷಿ ಕುರಿತು ಮಾಹಿತಿ ನೀಡುತ್ತಿರುವುದು
ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಾಚಾರಕ ಎಚ್.ಎಸ್.ರಮೇಶ ಮಕ್ಕಳಿಗೆ ಕೃಷಿ ಕುರಿತು ಮಾಹಿತಿ ನೀಡುತ್ತಿರುವುದು    

ಶಿಗ್ಗಾವಿ: ಮಕ್ಕಳಿಗೆ ಶಾಲಾ ಪಾಠ, ಪ್ರವಚನ, ಅನ್ನದಾಸೋಹದ ಜೊತೆಗೆ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಹೋತನಹಳ್ಳಿ ಮೆಟ್ಟಿಕ್ ಪೂರ್ವ ವಸತಿ ನಿಲಯ ಅಧಿಕಾರಿಗಳ ಹಾಗೂ
ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುವ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 50 ಮಕ್ಕಳಿದ್ದಾರೆ. ಈ ವಸತಿ ನಿಲಯ ಯಾವ
ವಿಶ್ವವಿದ್ಯಾಲಯಕ್ಕೆ ಕಡಿಮೆಯಿಲ್ಲ.

‘ಆಟ–ಪಾಠ, ಭೋಜನ, ಸಾಮಾನ್ಯ ಜ್ಞಾನ, ಕೃಷಿ, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಬೋಧನಾ ವಿಧಾನಗಳನ್ನು ನೋಡುತ್ತೇವೆ. ಅದರಲ್ಲಿ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಲ್ಲಿನ ಮಕ್ಕಳಿಗೆ ಪೇರಲ, ದಾಳಿಂಬೆ, ಪಪ್ಪಾಯಿ, ಸೀತಫಲ, ಚಿಕ್ಕು, ಲಿಂಬೆ, ಬಾಳೆ ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿನ ಹಣ್ಣುಗಳನ್ನು ಮಕ್ಕಳಿಗೆ ಪ್ರತಿ ಊಟದೊಂದಿಗೆ ದಿನ ನಿತ್ಯ ವಿತರಣೆ ಮಾಡಲಾಗುತ್ತಿದೆ. ಮಕ್ಕಳೇ ನಿತ್ಯ ಬಿಡುವಿನ ವೇಳೆಯಲ್ಲಿ ನೀರು ಹಾಕಿ ಬೆಳೆಸಿರುವ ಹಣ್ಣುಗಳನ್ನು ಮಕ್ಕಳಿಗಾಗಿ ವಿತರಣೆ ಮಾಡಲಾಗುತ್ತಿದೆ’ ಎಂದು ವಸತಿ ನಿಲಯದ ಮೇಲ್ವಾಚಾರಕ ಎಚ್.ಎಸ್.ರಮೇಶ ಹೇಳುತ್ತಾರೆ.

ADVERTISEMENT

ಅಲ್ಲದೆ ವಸತಿ ನಿಲಯದ ಆವರಣದಲ್ಲಿ ಟೊಮೆಟೊ, ಮೂಲಂಗಿ, ಪಾಲಕ, ಬದನೆಕಾಯಿ, ಮೆಂತೆ, ಕೋತಂಬರಿ ಸೇರಿದಂತೆ ವಿವಿಧ ತರಹದ ತರಕಾರಿ ಬೆಳೆ ಬೆಳೆಯುವ ಮೂಲಕ ಇಲ್ಲಿನ ನಿತ್ಯದ ಅಡುಗೆಗೆ
ತಾಜಾ ತರಕಾರಿಯನ್ನು ಬಳಸುವ ಮೂಲಕ ಆರೋಗ್ಯ ಕಾಪಾಡಲಾಗುತ್ತಿದೆ. ಅದರಿಂದ ಹಣ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುತ್ತಿದೆ. ಅಲ್ಲದೆ ತೆಂಗು, ಸಾಗವಾನಿ, ಬೇವು, ತೇಗ, ಅಶೋಕ ಮರಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚಿನ ವಿವಿಧ ತಳಿಯ ಅರಣ್ಯ ಮರಗಳನ್ನು ಬೆಳೆಸಲಾಗಿದೆ.

ದ್ವಾರ ಬಾಗಿಲಿಗೆ ಸ್ವಾಗತ ಕೋರುವ ಹೂವಿನ, ವಿವಿಧ ಸಸಿಗಳ ಬುಕ್ಕೆಗಳು, ಹುಲ್ಲಿನ ಹಾಸಿಗೆ, ಬಾಳೆ
ಗಿಡಗಳು ವಸತಿ ನಿಲಯದ ಅಂದ–ಚಂದವನ್ನು ಹೆಚ್ಚಿಸಲು ಕಾರಣವಾಗಿವೆ. ವಾರದ ಮೂರು ದಿನಗಳು ಬಿಡುವಿನ ಅವಧಿಯಲ್ಲಿ ಕೃಷಿ, ಸಾವಯವ ಕುರಿತು ಮಾಹಿತಿ ನೀಡಲಾಗುತ್ತಿದೆ.  ಜತೆಗೆ ಸಸ್ಯ ಶ್ರಾವಣ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ವನಮಹೋತ್ಸವದಲ್ಲಿ ಪರಿಸರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಮೂಲಕ ಪರಿಸರ ಪ್ರಜ್ಞೆ ಮೂಡಿಸುವ ಜೊತೆಗೆ ಆವರಣದಲ್ಲಿ ಹಚ್ಚಿನ ಸಸಿಗಳ ಪಾಲನೆ ಪೋಷಣೆ ಮಾಡುವ ಹೊಣೆ ಮಕ್ಕಳಿಗೆ ನೀಡಲಾಗಿದೆ. ಪ್ರತಿಯೊಬ್ಬರು ಸಸಿಗಳಿಗೆ ನೀರು ಹಾಕಿ, ತರಕಾರಿ ಬೆಳೆಯುವ ಪದ್ಧತಿ ಕಲಿಸಲಾಗುತ್ತಿದೆ. ಪರಿಸರ ಇದ್ದರೆ ಮಾತ್ರ ಸರ್ವ ಭಾಗ್ಯಗಳು ನಮ್ಮದಾಗಲಿವೆ. ಹೀಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ನೀರು ನಿರ್ವಹಣೆ, ಪರಿಸರ ಜಾಗೃತಿ ಮೂಡಿಸಿ ಕಾಯಕ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡುತ್ತ ಬರಲಾಗುತ್ತಿದೆ ಎಂದು ವಸತಿ ನಿಲಯದ ಮೇಲ್ವಿಚಾರಕ ಎಚ್.ಎಸ್.ರಮೇಶ ವ್ಯಕ್ತ ಪಡಿಸುತ್ತಾರೆ.

ನಿಲಯಪಾಲಕ ರಮೇಶ ಅವರ ಪರಿಸರ ಕಾಳಜಿಯಿಂದಾಗಿ ಹೋತನಹಳ್ಳಿ ಮೆಟ್ರಕ್ ಪೂರ್ವ ಬಾಲಕರ ವಸತಿ ನಿಲಯವು ಪರಿಸರಸ್ನೇಹಿ ಮಾದರಿ ವಸತಿ ನಿಲಯವಾಗಿದೆ.
-ಪ್ರವೀಣ ಕೆ.ಎಸ್. ಹಾವೇರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರಮಿಸಿದ ಫಲವಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ ಹೋತನಹಳ್ಳಿ ವಸತಿ ನಿಲಯಕ್ಕೆ ಪರಿಸರ ಸ್ನೇಹಿ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.
-ಎಚ್.ಎಸ್.ರಮೇಶ ವಸತಿ ನಿಲಯದ ನಿಲಯಪಾಲಕ

ಪರಿಸರ ರಕ್ಷಣೆ ಕಾರ್ಯಕ್ಕೆ ಪ್ರೋತ್ಸಾಹ

ಪ್ರತಿ ವಸತಿ ನಿಲಯಗಳ ಆವರಣದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಬೇಕು ಈಗಾಗಲೇ ತಿಳಿಸಿದೆ. ಅದರಂತೆ ಹೋತನಹಳ್ಳಿ ಬಾಲಕರ ವಸತಿ ನಿಲಯದಲ್ಲಿ ಉತ್ತಮ ಗಿಡ–ಮರಗಳನ್ನು ಬೆಳೆಯುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ.

ತಾಲ್ಲೂಕಿನ ಇನ್ನುಳಿದ ವಸತಿ ನಿಲಯಗಳಲ್ಲಿ ಪರಿಸರ ರಕ್ಷಣೆ ಕಾರ್ಯ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಶಿಗ್ಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಸುಜಾತಾ ಹಂಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.