ADVERTISEMENT

ಚಿಕ್ಕಬೂದಿಹಾಳ | ಅಂಗನವಾಡಿಗಿಲ್ಲ ಸ್ವಂತ ಕಟ್ಟಡ: ವಿಷಜಂತುಗಳ ಕಾಟ

ರಾಜೇಂದ್ರ ನಾಯಕ
Published 30 ಅಕ್ಟೋಬರ್ 2024, 6:04 IST
Last Updated 30 ಅಕ್ಟೋಬರ್ 2024, 6:04 IST
ಹಂಸಬಾವಿ ಸಮೀಪದ ಚಿಕ್ಕಬೂದಿಹಾಳ ಗ್ರಾಮದ 1ನೇ ಅಂಗನವಾಡಿ ಇರುವ ಬಾಡಿಗೆ ಕಟ್ಟಡ ಶಿಥಿಲಗೊಂಡಿರುವುದು 
ಹಂಸಬಾವಿ ಸಮೀಪದ ಚಿಕ್ಕಬೂದಿಹಾಳ ಗ್ರಾಮದ 1ನೇ ಅಂಗನವಾಡಿ ಇರುವ ಬಾಡಿಗೆ ಕಟ್ಟಡ ಶಿಥಿಲಗೊಂಡಿರುವುದು    

ಹಂಸಬಾವಿ: ಇಲ್ಲಿಗೆ ಸಮೀಪದ ಚಿಕ್ಕಬೂದಿಹಾಳ ಗ್ರಾಮದ 1ನೇ ಅಂಗನವಾಡಿ ಕೇಂದ್ರವು ಕಳೆದ 8 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಕಲಿಕೆಗೆ ತೊಡಕಾಗಿದೆ.

ಈ ಅಂಗನವಾಡಿಯ ಕಟ್ಟಡ ಎಂಟು ವರ್ಷದ ಹಿಂದೆಯೇ ಹಾಳಾಗಿದ್ದು, ಕೂಡಲೇ ನೆಲಸಮಗೊಳಿಸಲಾಗಿತ್ತು. ನಂತರ ಒಂದು ಬಾಡಿಗೆ ಮನೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಐದು ವರ್ಷ ತರಗತಿ ನಡೆಸಲಾಯಿತು. ಬಳಿಕ ಆ ಮನೆಯಲ್ಲಿಯೂ ಸಮಸ್ಯೆಯಾಗಿ ಮೂರು ವರ್ಷದ ಹಿಂದೆ ಸಮುದಾಯ ಭವನದ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಈ ಕಟ್ಟಡವೂ ಹಾಳಾಗಿದ್ದರಿಂದ ನಮ್ಮ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೊಸ ಕಟ್ಟಡವನ್ನು ಮುಂಜೂರು ಮಾಡಬೇಕು ಎಂದು ಗ್ರಾಮದ ರೇವಣಸಿದ್ದಪ್ಪ ತೆವರಿ ಆಗ್ರಹಿಸಿದರು.

‘ಮಕ್ಕಳಿಗೆ ಬೋಧನೆ, ಅಡುಗೆ, ರೇಶನ್ ಇಡುವುದು‌ ಒಂದೇ ಕೊಠಡಿಯಲ್ಲಿ ಮಾಡುತ್ತೇವೆ. ಹೀಗಾಗಿ ಅಡುಗೆ ಮಾಡುವಾಗ ಮಕ್ಕಳು ಅತ್ತಕಡೆಯೇ ಗಮನ ಹರಿಸುತ್ತಾರೆ. ಕೆಲವೊಮ್ಮೆ ವಿಷಜಂತುಗಳು ಬಂದು ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಎರಡು ತಿಂಗಳ ಹಿಂದೆ ನಾಗರ ಹಾವೊಂದು ಅಂಗನವಾಡಿ ಒಳಗೆ ಬಂದು ದೊಡ್ಡ ಅಪಾಯದಿಂದ ಮಕ್ಕಳನ್ನು ಪಾರು ಮಾಡಿದ್ದೇವೆ. ಶೌಚಾಲಯವೂ ಇಲ್ಲದೇ ಮಕ್ಕಳನ್ನು ಶೌಚಕ್ಕೆ ಅಕ್ಕ-ಪಕ್ಕದ ಮನೆಗಳ ಶೌಚಾಲಯಕ್ಕೆ ಕಳುಹಿಸುತ್ತೇವೆ’ ಎಂದು ಗ್ರಾಮಸ್ಥರು ʼಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ADVERTISEMENT

‘ನಮ್ಮ ಇಲಾಖೆಯಿಂದ ಪ್ರತೀ ವರ್ಷ ಒಂದು ಅಥವಾ ಎರಡು ಕಟ್ಟಡಗಳು ಮುಂಜೂರಾಗುತ್ತವೆ. ಅವುಗಳನ್ನೇ ಆದ್ಯತೆಯ ಮೇರೆಗೆ ಹಂಚಿಕೆ ಮಾಡುತ್ತೇವೆ. ಮುಂದಿನ ಬಾರಿ ಮುಂಜೂರಾಗುವ ಕಟ್ಟಡವನ್ನು ಚಿಕ್ಕಬೂದಿಹಾಳ ಗ್ರಾಮಕ್ಕೆ ನೀಡುತ್ತೇವೆ’ ಎಂದು ಸಿಡಿಪಿಒ ಜಯಶ್ರೀ ಪಾಟೀಲ ಪ್ರತಿಕ್ರಿಯಿಸಿದರು.

ಮಕ್ಕಳಿಗೆ ಬೋಧನೆ ಮಾಡುವ ಕೊಠಡಿಯಲ್ಲಿಯೇ ರೇಶನ್‌ ಇಟ್ಟು ಹಾಗೂ ಅಡುಗೆ ಮಾಡಲಾಗುತ್ತದೆ 

2ನೇ ಅಂಗನವಾಡಿಗೆ ಕಾಂಪೌಂಡ್‌ ನಿರ್ಮಿಸಲು ಆಗ್ರಹ

ಚಿಕ್ಕಬೂದಿಹಾಳ ಗ್ರಾಮದ 2ನೇ ಅಂಗನವಾಡಿಯು ಸುತ್ರಕೋಟಿ- ಚಿಕ್ಕಬೂದಿಹಾಳ ಗ್ರಾಮಗಳ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಕಾಂಪೌಂಡ್ ಇಲ್ಲ. ಅಂಗನವಾಡಿ ಪಕ್ಕದಲ್ಲಿಯೇ ರಸ್ತೆ ಇದ್ದು ವೇಗವಾಗಿ ಹೋಗುವ ವಾಹನಗಳಿಂದ ಮಕ್ಕಳಿಗೆ ರಕ್ಷಣೆ ನೀಡಲು ಕಾಂಪೌಂಡ್‌ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.