ಹಾವೇರಿ: ತನ್ನ ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಮಾವನ ಮೇಲೆ ಸಿಟ್ಟಾದ ಅಳಿಯನೊಬ್ಬ, ಮಾವನ ಜಮೀನಿನಲ್ಲಿ ಬೆಳೆದಿದ್ದ 106 ಅಡಿಕೆ ಗಿಡಗಳನ್ನು ಕಡಿದು ಹಾಕಿ ನಾಶಪಡಿಸಿರುವ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಹಾನಗಲ್ ತಾಲ್ಲೂಕಿನ ಬಸಾಪುರ ಗ್ರಾಮದ ದೇವೇಂದ್ರಪ್ಪ ಫಕ್ಕೀರಪ್ಪ ಗಾಣಿಗೇರ (55) ಅವರು ದೂರು ನೀಡಿದ್ದಾರೆ. ಅವರ ಅಳಿಯನಾದ ಬಸವರಾಜ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ದೇವೇಂದ್ರಪ್ಪ, ತಮ್ಮ ಮಗಳನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಸವರಾಜನಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಮದ್ಯ ವ್ಯಸನಿಯಾಗಿದ್ದ ಆರೋಪಿ ಬಸವರಾಜ, ಪತ್ನಿ ಜೊತೆ ನಿತ್ಯವೂ ಜಗಳ ಮಾಡಲಾರಂಭಿಸಿದ್ದ. ತವರು ಮನೆಯವರು ಎಷ್ಟೇ ಎಚ್ಚರಿಕೆ ನೀಡಿದರೂ ಬಸವರಾಜ ಸುಧಾರಿಸಿರಲಿಲ್ಲ. ಇದರಿಂದ ಬೇಸತ್ತ ದೇವೇಂದ್ರಪ್ಪ ಅವರ ಮಗಳು, ಗಂಡನ ಮನೆ ಬಿಟ್ಟು ಬಂದು ತವರು ಮನೆಯಲ್ಲಿ ಉಳಿದುಕೊಂಡಿದ್ದರು’ ಎಂದರು.
‘ದೇವೇಂದ್ರಪ್ಪ ಅವರ ಮಗಳು ಮೂರು ತಿಂಗಳಿನಿಂದ ಗಂಡನ ಮನೆಗೆ ಹೋಗಿರಲಿಲ್ಲ. ಪತ್ನಿಯನ್ನು ಮನೆಗೆ ಕಳುಹಿಸುವಂತೆ ಬಸವರಾಜ ಹಲವು ಬಾರಿ ಒತ್ತಾಯಿಸಿದ್ದ. ಆದರೆ, ಮದ್ಯ ಕುಡಿಯುವುದನ್ನು ಬಿಡುವಂತೆ ತವರು ಮನೆಯವರು ಹೇಳಿದ್ದರು. ಆದರೆ, ಬಸವರಾಜ ಮದ್ಯ ಬಿಟ್ಟಿರಲಿಲ್ಲ. ಹೀಗಾಗಿ, ಮಗಳನ್ನು ಕಳುಹಿಸುವುದಿಲ್ಲವೆಂದು ದೇವೇಂದ್ರಪ್ಪ ಅವರು ಹೇಳಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ದೇವೇಂದ್ರಪ್ಪ ಅವರು ತಮ್ಮ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಚ್ಚಿದ್ದರು. ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದವು. ಮಾವ ದೇವೇಂದ್ರಪ್ಪ ಅವರ ಮೇಲೆ ಸಿಟ್ಟಾಗಿದ್ದ ಅಳಿಯ ಬಸವರಾಜ, ಅಡಿಕೆ ಗಿಡ ನಾಶಪಡಿಸಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.
‘ಸೆ. 23ರಂದು ರಾತ್ರಿ 8 ಗಂಟೆಯಿಂದ ಸೆ. 24ರ ಬೆಳಿಗ್ಗೆ 8 ಗಂಟೆಯ ಅವಧಿಯಲ್ಲಿ ಜಮೀನಿಗೆ ನುಗ್ಗಿದ್ದ ಆರೋಪಿ ಬಸವರಾಜ, 106 ಅಡಿಕೆ ಗಿಡಗಳನ್ನು ಆಯುಧದಿಂದ ಕಡಿದು ಹಾಕಿದ್ದಾನೆ. ₹ 2 ಲಕ್ಷ ಮೌಲ್ಯದ ಅಡಿಕೆ ಗಿಡಗಳು ನಾಶಪಡಿಸಿರುವ ಬಗ್ಗೆ ದೂರುದಾರರು ಮಾಹಿತಿ ನೀಡಿದ್ದಾರೆ’ ಎಂದರು.
‘ಪತಿ–ಪತ್ನಿ ಹಾಗೂ ಕುಟುಂಬಗಳ ನಡುವಿನ ಜಗಳವೇ ಅಡಿಕೆ ಗಿಡ ನಾಶಪಡಿಸಲು ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಕರಣದಲ್ಲಿ ಸಿವಿಲ್ ವ್ಯಾಜ್ಯದ ಬಗ್ಗೆಯೂ ಮಾಹಿತಿ ಇದ್ದು, ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.