ಹಾವೇರಿ: ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿದ್ದು, ವಿದ್ಯಾವಂತರೇ ವಂಚನೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಅನಾಮಧೇಯ ಕರೆಗಳಿಗೆ ಬ್ಯಾಂಕ್ ವಿವರ ಹಾಗೂ ನಿಮ್ಮ ಖಾಸಗಿ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದು ಸಿಇಎನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ ಪವಾರ್ ಸಲಹೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾವೇರಿಯಲ್ಲಿ ಶುಕ್ರವಾರ ಬಿಇಒ ಎಂ.ಎಚ್.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕಿನ ಮೇಲುಸ್ತುವಾರಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಕ್ಕೆ ಹೆಚ್ಚಾಗಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಒಳಗಾಗುತ್ತಿದ್ದಾರೆ. ತಾವು ಎಚ್ಚರಿಕೆಯಿಂದ ಇರಬೇಕು. ಇಂಥ ಪ್ರಕರಣಗಳು ಹೆಚ್ಚಾಗಿ ಮೊಬೈಲ್‌ನಿಂದ ಆಗುತ್ತಿದ್ದು, ಮೊಬೈಲ್ ಬಾಲಸುವಾಗ ಎಚ್ಚರಿಕೆ ವಹಿಸಿ ಎಂದರು.
ಬ್ಯಾಂಕ್ ಮ್ಯಾನೇಜರ್ ಅಥವಾ ಸಿಬ್ಬಂದಿ ಎಂದು ಹೇಳಿಕೊಂಡು ಮೊಬೈಲ್ ಮೂಲಕ ಕರೆ ಮಾಡಿ ಬ್ಯಾಂಕಿನ ವಿವರ ಕೇಳುತ್ತಾರೆ. ನೀವು ಯಾಮಾರಿದರೆ ನಿಮ್ಮ ಖಾತೆಯ ಹಣವನ್ನೆಲ್ಲ ದೋಚುತ್ತಾರೆ.ಎ.ಟಿ.ಎಂ ಪಿನ್ ಹಾಕುವಾಗ ಒಂದು ಕೈ ಮುಚ್ಚಿಕೊಂಡು ಹಾಕಿ. ಇದರಿಂದ ನಿಮ್ಮ ಪಿನ್ ಸಿಸಿಟಿವಿ ಕ್ಯಾಮೆರಾದಲ್ಲಿ & ಹೊರಗಿನವರು ನೋಡಲು ಸಾದ್ಯವಾಗುವುದಿಲ್ಲ ಎಂದು ಹೇಳಿದರು.
ರಾತ್ರಿ ವೇಳೆ ಅನಾಮಧೆಯ ವಿಡಿಯೊ ಕಾಲ್‌ನಿಂದ ಆಗುವ ಅನಾಹುತಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆಗಾಗಿವೈಯಕ್ತಿಕ ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು. ವಂಚನೆಗೆ ಒಳಗಾದರೆ ತಕ್ಷಣ ಠಾಣೆಗೆ ದೂರು ನೀಡಿ, ಅಪರಾಧಗಳಿಗೆ ಕಡಿವಾಣ ಹಾಕಲು ಸಹಕರಿಸಿ ಎಂದು ತಿಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.