ADVERTISEMENT

ನೇಕಾರ ಅಭಿವೃದ್ಧಿಗೆ ₹100 ಕೋಟಿ ನೀಡಿ: ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ

ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 15:50 IST
Last Updated 12 ಮಾರ್ಚ್ 2024, 15:50 IST
ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು   

ರಾಣೆಬೆನ್ನೂರು: ನೇಕಾರರ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಈಚೆಗೆ ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಮಾತನಾಡಿ, ‘ರಾಜ್ಯದಲ್ಲಿ ನೇಕಾರ ಸಮುದಾಯವು 60 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಅವರ ಏಳಿಗೆಗೆ ಸರ್ಕಾರವು ಬಜೆಟ್‌ನಲ್ಲಿ ಯಾವುದೇ ರೀತಿಯ ಅನುಕೂಲ ಒದಗಿಸಿಲ್ಲ. ನೇಕಾರ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆಯಾದರೂ ಇಲ್ಲಿಯವರೆಗೆ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಕಾರ ಅಭಿವೃದ್ಧಿ ನಿಗಮ ಮಂಡಳಿಗೆ ₹100 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ADVERTISEMENT

‘ನಿಗಮ ಮಂಡಳಿಗೆ ನೇಕಾರ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ನೇಕಾರ ಭವನಗಳನ್ನು ನಿರ್ಮಿಸಬೇಕು. ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜನ್ಮಸ್ಥಳ ಮುದನೂರ ಗ್ರಾಮವನ್ನು ಜೀರ್ಣೋದ್ಧಾರ ಮಾಡಿ, ದೇವರ ದಾಸಿಮಯ್ಯ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು. ಕೈ ಮಗ್ಗ ಹಾಗೂ ವಿದ್ಯುತ್ ಮಗ್ಗದವರಿಗೆ ಆಧುನಿಕ ವಸ್ತ್ರೋದ್ಯಮದ ತರಬೇತಿ ನೀಡಬೇಕು’ ಎಂದು ಆಗ್ರಹಿಸಿದರು.

‘ನೇಕಾರರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು. ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು. ಸರ್ಕಾರವು ಸೀರೆ ಖರೀದಿಗೆ ಪ್ರಸ್ತಾವನೆ ಪಡೆದಿದ್ದರೂ ಇನ್ನೂ ಪ್ರಕ್ರಿಯೆ ನಡೆದಿಲ್ಲ ಕೂಡಲೇ ಖರೀದಿಗೆ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕೈ ಮಗ್ಗದಿಂದ ತಯಾರಾಗುವ ಬಟ್ಟೆ, ಬ್ಯಾಗ್, ಸಾಕ್ಸ್‌ಗಳನ್ನು ಖರೀದಿಸಲು ಸರ್ಕಾರ ಮುಂದಾಗಬೇಕು. ಮುಂಬರುವ ಎಲ್ಲ ಸ್ಥಳೀಯ ಮಹಾನಗರ ಪಾಲಿಕೆ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯಿತಿ, ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ನೇಕಾರ ಸಮುದಾಯವರಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಮನವಿ ಮಾಡಿದರು.

ಬಸವರಾಜ ಮೈಲಾರ, ದ್ಯಾಮಣ್ಣ ಸುಂಕಾಪುರ, ಸಂಕಪ್ಪ ಮಾರನಾಳ, ಮಹೇಶ ಕುದರಿ, ಹನುಮಂತಪ್ಪ ದಾಸರ, ಸೋಮನಾಥ ಕುದರಿ, ದೀಪಕ ಹುಲ್ಲೂರ, ಗೋಪಾಲ ಕುದರಿ, ನೀಲಪ್ಪ ಕುಮಾರಪ್ಪನವರ, ಶ್ರೀಧರ ಮಂಡಕ್ಕಿ, ವಿಶಾಲ ಕೊಪ್ಪಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.