ADVERTISEMENT

ಆರೀಕಟ್ಟಿ | ಸರ್ಕಾರಿ ಶಾಲೆಗೆ ಶತಮಾನ ಸಂಭ್ರಮ: ಬೇಕಿದೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 16:26 IST
Last Updated 27 ಸೆಪ್ಟೆಂಬರ್ 2024, 16:26 IST
ಹಂಸಬಾವಿ ಸಮೀಪದ ಆರೀಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹಂಸಬಾವಿ ಸಮೀಪದ ಆರೀಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ    

ಆರೀಕಟ್ಟಿ (ಹಂಸಬಾವಿ): ಇಲ್ಲಿಯ ಆರೀಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಇದರ ಜೊತೆಯಲ್ಲಿಯೇ ಹಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿದ ಗ್ರಾಮಸ್ಥರು, ‘ನಮ್ಮ ಶಾಲೆ ಮೂಲ ಸೌಕರ್ಯ ಕಲ್ಪಿಸಬೇಕು. ಶತಮಾನ ಸಂಭ್ರಮದಲ್ಲಿರುವ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ಶತಮಾನದ ಸಂಭ್ರಮದಲ್ಲಿರುವ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಅನುದಾನ ಕೊಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯಲ್ಲಿ ಸದ್ಯ 80 ಮಕ್ಕಳು ಅಭ್ಯಾಸ ಮಾಡುತ್ತಿದ್ದರೆ. ಕಳೆದ ವರ್ಷ 90 ಮಕ್ಕಳ ದಾಖಲಾತಿ ಇತ್ತು. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿಯಲ್ಲಿ ಇಳಿಮುಖವಾಗುತ್ತಿದೆ. ಇದು, ಶಾಲೆಯ ಉಸ್ತುವಾರಿ ಸಮಿತಿಗೆ ತಲೆನೋವಾಗಿ ಪರಿಣಮಿಸಿದೆ.

ADVERTISEMENT

‘ಆರೀಕಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜೊತೆಗೆ, ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು, ರಾಜ್ಯಮಟ್ಟದಲ್ಲೂ ಪ್ರದರ್ಶನ ನೀಡಿದ್ದಾರೆ. ಇಂತಹ ನಮ್ಮ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌, ಸಮುದಾಯ ಭವನ ಹಾಗೂ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವ ಕೆಲಸ ತ್ವರಿತವಾಗಿ ಆಗಬೇಕಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಪಿ.ಎಸ್. ಚಳಗೇರಿ ಹೇಳಿದರು.

‘ಸರ್ಕಾರಿ ಶಾಲೆಯ ಶತಮಾನೋತ್ಸವ ಸಮಾರಂಭ ಆಚರಿಸಿ, ಮೌನವಾದರೆ ಸಾಲದು. ಶಾಲೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಮಾದರಿ ಶಾಲೆಯನ್ನಾಗಿ ಮಾಡಿ, ಮಕ್ಕಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ಗ್ರಾಮಸ್ಥರು ಕೋರಿದರು.

ವಿದ್ಯಾರ್ಥಿಗಳು ಸಂಸ್ಕಾರ ಮೈಗೂಡಿಸಿಕೊಳ್ಳಬೇಕು: ಶುಕ್ರವಾರ ಹಮ್ಮಿಕೊಂಡಿದ್ದ ಶಾಲೆಯ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ‘ಸರ್ಕಾರಿ ಶಾಲೆಗಳು, ತ್ರಿವಿಧ ದಾಸೋಹದ ಕೇಂದ್ರಗಳು. ಇಲ್ಲಿ ಕಲಿಯುವ ಮಕ್ಕಳು, ಶಿಕ್ಷಣದ ಜೊತೆಗೆ ಜೀವನಪಾಠ ಹಾಗೂ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ‘ಶಿಕ್ಷಣ ಎಂದರೆ ಕೇವಲ ಓದುವುದಲ್ಲ, ಇದು ನಮ್ಮ ಜೀವನದ ಅವಿಭಾಜ್ಯ ಅಂಗ. ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸಲು, ಹಳೇ ವಿದ್ಯಾರ್ಥಿಗಳು ಹಾಗೂ ಯುವಕರು ಸರ್ಕಾರದ ಜೊತೆಗೆ ಕೈಜೋಡಿಸಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.‌ ಶ್ರೀಧರ ಮಾತನಾಡಿ, ‘ಶಾಲಾ ಕೊಠಡಿಗಳು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ. ಅದರಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ. ಕಲಿತ ಶಾಲೆಯ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸಬೇಕು’ ಎಂದರು.

ಗ್ರಾ.ಪಂ. ಅಧ್ಯಕ್ಷ ಜಗದೀಶ ಹಾರೋಮುಚುಡಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್.‌ ಸುರೇಶಕುಮಾರ ಹಾಗೂ ಇತರರು ಹಾಜರಿದ್ದರು.

Highlights - 80 ಮಕ್ಕಳ ವಿದ್ಯಾಭ್ಯಾಸ ಶತಮಾನೋತ್ಸವ ಸಮಾರಂಭ ಮೂಲ ಸೌಕರ್ಯ ಕಲ್ಪಿಸಲು ಗ್ರಾಮಸ್ಥರು ಆಗ್ರಹ

Quote - ಶತಮಾನದ ಸರ್ಕಾರಿ ಶಾಲೆಗೆ ತಡೆಗೋಡೆ ಹಾಗೂ ಮೂಲ ಸೌಲಭ್ಯಗಳ ಅವಶ್ಯಕತೆಯಿದೆ. ಸರ್ಕಾರದ ಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಲೆಯ ಅಭಿವೃದ್ದಿಗೆ ನೆರವಾಗಬೇಕು ಹನುಮಗೌಡ ಪಾಟೀಲ ಆರೀಕಟ್ಟಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.