ADVERTISEMENT

ಹಾವೇರಿ | ಎಟಿಎಂ ಕಾರ್ಡ್ ಬದಲಿಸಿ ₹ 80 ಸಾವಿರ ಡ್ರಾ!

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:03 IST
Last Updated 23 ಜೂನ್ 2024, 16:03 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಹಾವೇರಿ: ಎಟಿಎಂ ಯಂತ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ನಿವೃತ್ತ ಶಿಕ್ಷರೊಬ್ಬರ ಕಾರ್ಡ್ ಅದಲು–ಬದಲು ಮಾಡಿದ್ದ ಆರೋಪಿಯೊಬ್ಬ ₹80 ಸಾವಿರ ಡ್ರಾ ಮಾಡಿಕೊಂಡಿದ್ದು, ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಲಕಮಾಪುರದ ನಿವೃತ್ತ ಶಿಕ್ಷಕ ಫಕ್ಕೀರಪ್ಪ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ದೂರುದಾರ ಫಕ್ಕೀರಪ್ಪ ಅವರು ಜೂನ್ 20ರಂದು ಮಾಗಾವಿ ಚೇಂಬರ್ ಬಳಿಯ ಎಸ್‌ಬಿಐ ಎಟಿಎಂ ಘಟಕಕ್ಕೆ ಹೋಗಿದ್ದರು. ಯಂತ್ರದಲ್ಲಿ ಕಾರ್ಡ್‌ ಹಾಕಿ ಪಿನ್‌ ನಮೂದಿಸಿದ್ದರು. ಆದರೆ, ಹಣ ಬಂದಿರಲಿಲ್ಲ. ಅವರ ಹಿಂದೆಯೇ ಸರದಿಯಲ್ಲಿ ನಿಂತಿದ್ದ ಆರೋಪಿ, ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಪಡೆದುಕೊಂಡಿದ್ದ.’

‘ಎಟಿಎಂ ಯಂತ್ರದಿಂದ ಹಣ ತೆಗೆದುಕೊಡುವಂತೆ ನಟಿಸಿದ್ದ ಆರೋಪಿ, ಅಸಲಿ ಕಾರ್ಡ್ ತನ್ನ ಜೇಬಿನಲ್ಲಿಟ್ಟುಕೊಂಡಿದ್ದ. ನಕಲಿ ಕಾರ್ಡ್‌ ಅನ್ನು ದೂರುದಾರರ ಕೈಗೆ ಕೊಟ್ಟು ಸ್ಥಳದಿಂದ ಹೊರಟು ಹೋಗಿದ್ದ. ದೂರುದಾರ ಸಹ ನಕಲಿ ಕಾರ್ಡ್‌ನ್ನೇ ಅಸಲಿ ಎಂಬುದಾಗಿ ನಂಬಿ ಸ್ಥಳದಿಂದ ತೆರಳಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಅದೇ ದಿನ ದೂರುದಾರರ ಎಟಿಎಂ ಕಾರ್ಡ್‌ನಿಂದ ವಿವಿಧ ಘಟಕಗಳಲ್ಲಿ ಹಂತ ಹಂತವಾಗಿ ₹ 80 ಸಾವಿರ ಡ್ರಾ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬರುತ್ತಿದ್ದಂತೆ ನಿವೃತ್ತ ಶಿಕ್ಷಕ, ಬ್ಯಾಂಕ್‌ನಲ್ಲಿ ವಿಚಾರಿಸಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.