ರಟ್ಟೀಹಳ್ಳಿ (ಹಾವೇರಿ): ಪಟ್ಟಣದ ಹಳೇಬಸ್ ನಿಲ್ದಾಣ ಹತ್ತಿರ ಮಂಗಳವಾರ ರಾತ್ರಿ 12 ಗಂಟೆಗೆ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕರ ಗುಂಪು ಏಕಾಏಕಿ ದಾಳಿ ಮಾಡಿದೆ. ಒಬ್ಬ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಟ್ಟೀಹಳ್ಳಿ ಪಟ್ಟಣದಲ್ಲಿ ಅ.7ರಿಂದ ಅ.15ರವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಪ್ರಾಥಮಿಕ ಶಿಕ್ಷಾ ವರ್ಗ’ ಆಯೋಜಿಸಿದ್ದು, ಅ.14ರಂದು ನಡೆಯಲಿರುವ ಪಥಸಂಚಲನಕ್ಕಾಗಿ ಮಾರ್ಗಸೂಚಿ ಗೊತ್ತುಪಡಿಸಲು ಆರ್‌ಎಸ್‌ಎಸ್ ಕಾರ್ಯಕರ್ತರು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ವಿಷಯ ತಿಳಿದ ತಕ್ಷಣ ರಟ್ಟೀಹಳ್ಳಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಕೃಷ್ಣಪ್ಪ ತೋಪಿನ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ.
25 ಆರೋಪಿಗಳ ಬಂಧನ:
‘ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅಂಜುಮನ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹುಸೇನ್ ಖಾಜಿ ಸೇರಿದಂತೆ ಒಟ್ಟು 25 ಆರೋಪಿಗಳನ್ನು ಬಂಧಿಸಿದ್ದೇವೆ. ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದೇವೆ. ಪಟ್ಟಣದಲ್ಲಿ ಶುಕ್ರವಾರ ನಡೆಯುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
‘ಈದ್ ಮಿಲಾದ್’ ಹಬ್ಬದ ಅಂಗವಾಗಿ ಯಾವುದೇ ಪರವಾನಗಿ ಪಡೆಯದೇ ಪಟ್ಟಣದಲ್ಲಿ ಕಟ್ಟಲಾಗಿದ್ದ ಬ್ಯಾನರ್ ಮತ್ತು ಫೆಕ್ಸ್‌ಗಳನ್ನು ಪೊಲೀಸರು ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.